ಭಕ್ತರ ಸ್ವಾಗತಕ್ಕೆ ಸಜ್ಜಾಗಿದೆ ಧರ್ಮಸ್ಥಳ

Team Udayavani, Feb 8, 2019, 12:30 AM IST

ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕಾಗಿ ಶ್ರೀ ಧರ್ಮಸ್ಥಳ ಸಿದ್ಧಗೊಂಡಿದೆ. ಲಕ್ಷಾಂತರ ಭಕ್ತರ, ಗಣ್ಯರ ಸ್ವಾಗತಕ್ಕೆ ನವವಧುವಿನಂತೆ ಸಿಂಗಾರಗೊಂಡು ನಿಂತಿದೆ. ಶ್ರೀಕ್ಷೇತ್ರದ ಎಲ್ಲ ಕಾರ್ಯಕ್ರಮಗಳ ಹಿಂದಿರುವ ಶಕ್ತಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು. ಶ್ರೀ ಬಾಹುಬಲಿಯ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ಇದುವರೆಗಿನ ಮೂರು ಮಸ್ತಕಾಭಿಷೇಕಗಳನ್ನು ಅವರು ನ ಭೂತೋ ನ ಭವಿಷ್ಯತಿ ಎಂಬಂತೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗಿನದು ತ್ಯಾಗಮೂರ್ತಿಗೆ ಚತುರ್ಥ ಮಹಾಮಸ್ತಕಾಭಿಷೇಕ.  “ಉದಯವಾಣಿ’ ನಡೆಸಿರುವ ಈ ವಿಶೇಷ ಸಂದರ್ಶನದಲ್ಲಿ ಡಾ| ಹೆಗ್ಗಡೆಯವರು ಮಹಾಮಸ್ತಕಾಭಿಷೇಕಗಳ ಸಿದ್ಧತೆಗಳ ಜತೆಗೆ ಹಲವು ತಾತ್ವಿಕ ವಿಚಾರಗಳ ಬಗೆಗೂ ಮಾತನಾಡಿದ್ದಾರೆ.

ಬಾಹುಬಲಿ ಎಂದರೆ ಬೃಹನ್ಮೂರ್ತಿಯ ಕಲ್ಪನೆ ಕಣ್ಣೆದುರು ಬರುತ್ತದೆ? ಅದೇಕೆ?
ಸಾಮಾನ್ಯವಾಗಿ ಬಾಹುಬಲಿಯ ಸಣ್ಣಪುಟ್ಟ ಮೂರ್ತಿಗಳು ಜೈನ ಗೃಹಸ್ಥರ ಮನೆಗಳಲ್ಲಿ ಇದ್ದೇ ಇರುತ್ತವೆ. ಯುವರಾಜನಾಗಿದ್ದು, ಚಕ್ರವರ್ತಿಯಾಗಿ ತನ್ನನ್ನು ಎದುರಿಸಿದ ಅಣ್ಣ ಭರತನನ್ನು ಗೆದ್ದ ಬಳಿಕವೂ ಎಲ್ಲವನ್ನೂ ತ್ಯಾಗ ಮಾಡಿ ತಪೋರಾಜ್ಯದೆಡೆಗೆ ನಡೆದ ಬಾಹುಬಳಿಕ ತತ್ವಾದರ್ಶಗಳು ಉನ್ನತವಲ್ಲವೆ! ಅವುಗಳ ಹಿರಿಮೆಯನ್ನು ಅತಿ ಹೆಚ್ಚು ಜನರಿಗೆ, ಜೈನರು ಮಾತ್ರವಲ್ಲದೆ ವಿಶ್ವಕ್ಕೂ ತಿಳಿಸುವುದಕ್ಕಾಗಿಯೇ ಬಾಹುಬಲಿಯ ಬೃಹತ್‌ ಮೂರ್ತಿಗಳನ್ನು ನಿರ್ಮಿಸಲಾಗಿದೆ. 

ದಿಗಂಬರ ಮುನಿಗಳು ನೀಡುವ ಸಂದೇಶ ಏನು? 
ತೀರ್ಥಂಕರರು ನೀಡಿದಂತಹ ತತ್ವ-ಉಪದೇಶಗಳನ್ನು ಪಾಲನೆ ಮಾಡಿ ಎಂದು ದಿಗಂಬರ ಮುನಿಗಳು ಸಂದೇಶವನ್ನು ನೀಡುತ್ತಾರೆ. ತ್ಯಾಗ-ಶಾಂತಿಯ ಮಹತ್ವವನ್ನು ತಿಳಿಸುತ್ತಾರೆ. ದಿಗಂಬರತ್ವ, ಆಹಾರ ಸೇವನೆ, ನಿದ್ದೆ, ಕೇಶಲೋಚನ- ಹೀಗೆ ಅವರ ಕಠಿಣ ವ್ರತಸ್ಥ ಮುನಿಜೀವನವೇ ಸಮಗ್ರವಾಗಿ ಒಂದು ಸಂದೇಶವಾಗಿದೆ. 

ದಿಗಂಬರ ಮುನಿಗಳ ಆಹಾರ ಸೇವನೆಯ ಕ್ರಮಗಳ ಬಗ್ಗೆ ವಿವರಿಸುವಿರಾ?
ಮಹಾಮಸ್ತಕಾಭಿಷೇಕದ ಸಂದರ್ಭ ಜೈನ ಶ್ರಾವಕರು ಭಗವಾನ್‌ ಬಾಹುಬಲಿಗೆ ಅಭಿಷೇಕ ಮಾಡುತ್ತಾರೆ. ಇದನ್ನು ಯಾರು ಮಾಡಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಜೈನ ದಿಗಂಬರ ಮುನಿಗಳ ದರ್ಶನ ಮಾಡುವಾಗ, ಅವರಿಗೆ ಆಹಾರ ದಾನ ಮಾಡುವ ಸಂದರ್ಭದಲ್ಲಿ ನಾವು ಅವರ ಮುಂದೆ ಒಂದು ಮಾತನ್ನು ಹೇಳುವ ಕ್ರಮವಿದೆ. ಅದು ನಮ್ಮ ಆಂತರಿಕ ಮತ್ತು ಬಾಹ್ಯ ಶುದ್ಧಿಯನ್ನು ನಿವೇದಿಸಿಕೊಂಡು ಮುನಿಗಳಿಗೆ ಆಹಾರ ದಾನ ಮಾಡಲು ಯೋಗ್ಯರು ಎಂದು ನಿವೇದಿಸಿಕೊಳ್ಳುವ ಕ್ರಮ. ನಾನು ನಿಮಗೆ ಆಹಾರ ನೀಡಲು ಬಂದಿದ್ದೇನೆ, ನನ್ನ ಮನಸ್ಸು, ವಚನ ಮತ್ತು ಕಾಯ ಶುದ್ಧಿ ಇದೆ. ಆಹಾರ ಶುದ್ಧಿ, ಜಲ ಶುದ್ಧಿ ಇದೆ ಎಂದು ನಾವು ಅವರಿಗೆ ವಚನ ಕೊಡಬೇಕು.

ದಿಗಂಬರ ಮುನಿಗಳು ಜೈನ ಧರ್ಮ ಪಾಲನೆ ಮಾಡುವವರಲ್ಲಿ ಮಾತ್ರ ಆಹಾರ ಸ್ವೀಕಾರ ಮಾಡುತ್ತಾರೆ. ಅವರ ವ್ರತ- ನಿಯಮಗಳು ಎಷ್ಟು ಕಟ್ಟುನಿಟ್ಟಾಗಿರುತ್ತವೆ ಎಂದರೆ, ಮುನಿಗಳು ಹೋಟೆಲ್‌ಗ‌ಳಲ್ಲಿ, ಸಮಾರಂಭಗಳಲ್ಲಿ ಆಹಾರ ಸೇವೆ ಮಾಡುವವರಿಂದಲೂ ಆಹಾರವನ್ನು ದಾನವಾಗಿ ಸ್ವೀಕರಿಸುವುದಿಲ್ಲ. ಬಾವಿಯ ನೀರನ್ನೇ ಬಳಸಬೇಕು ಎಂಬ ನಿಯಮವಿದೆ. ನೀರಿನ ಶೋಧನೆಯ ಕುರಿತು ಕೂಡ ಕ್ರಮಗಳಿವೆ. ಜೈನರಲ್ಲಿ ಕತ್ತಲಾಗುವುದರ ಒಳಗೆ ಆಹಾರ ಸ್ವೀಕರಿಸಬೇಕು ಎಂಬ ನಿಯಮವಿದೆ. ಇದಕ್ಕೆ ಅಹಿಂಸಾತತ್ವವೇ ಮೂಲ. ಕತ್ತಲಾದಂತೆ ಕ್ರಿಮಿಕೀಟಗಳ ಚಟುವಟಿಕೆ ಆರಂಭವಾಗುತ್ತವೆ. ಅವು ಎಲ್ಲಿ ಇರುತ್ತವೆ, ಹೇಗಿರುತ್ತವೆ ಎಂದು ಗೊತ್ತಾಗುವುದಿಲ್ಲ. ಅವು ಆಹಾರದಲ್ಲಿ ಬಿದ್ದರೆ ಅಹಿಂಸಾತತ್ವಕ್ಕೆ ಭಂಗ ಬರಬಹುದು ಎಂಬ ಹಿನ್ನೆಲೆಯಲ್ಲಿ ಜೈನರಲ್ಲಿ ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆಗೆ ನಿಷೇಧವಿದೆ. ಈ ಎಲ್ಲ ನಿಯಮಗಳನ್ನು ಪಾಲಿಸುವವರ ಬಳಿಯಷ್ಟೇ ಜೈನ ಮುನಿಗಳು ಆಹಾರವನ್ನು ಸ್ವೀಕರಿಸುತ್ತಾರೆ.

ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಬಾಹುಬಲಿಯ ವರ್ಣನೆ ಮತ್ತು ಸಂದೇಶವೇನಿದೆ?
ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ಬಾಹುಬಲಿಯ ಸಂದೇಶವು ವಿವಿಧ ರೀತಿಯಲ್ಲಿ ಅಭಿವ್ಯಕ್ತವಾಗಿದ್ದರೂ ಎಲ್ಲವೂ ಬಾಹುಬಲಿಯ ತತ್ವಾದರ್ಶಗಳನ್ನು ವ್ಯಕ್ತಪಡಿಸುವುದೇ ಆಗಿದೆ. ಜೈನ ಧರ್ಮದ ಉನ್ನತ ತತ್ವಾದರ್ಶಗಳನ್ನು ದೈನಂದಿನ ಬದುಕಿನಲ್ಲಿ ಆಚರಣೆಯ ಮೂಲಕ ಪಾಲಿಸಬೇಕು ಹಾಗೂ ಬದುಕಿನ ಉನ್ನತ ಲಕ್ಷÂವಾದ ಮೋಕ್ಷ ಮಾರ್ಗದ ಕಡೆಗೆ ಮುನ್ನಡೆಯುವಂತಾಗಬೇಕು.

ಜೈನ ಶ್ರಾವಕರ ಧರ್ಮವೇನು? 
ಜೈನ ಧರ್ಮದಲ್ಲಿರುವ ರತ್ನತ್ರಯಗಳು ಹಾಗೂ ಪಂಚ ಅಣುವ್ರತಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಸಂಗ್ರಹ ಇವುಗಳ ಪಾಲನೆಯೇ ಜೈನ ಶ್ರಾವಕರ ಧರ್ಮ (ಕರ್ತವ್ಯ)ವಾಗಿದೆ. 

ಅಭಿಷೇಕದಲ್ಲಿ ದ್ರವ್ಯಗಳ ಬಳಕೆಯ ಉದ್ದೇಶ?
ಪೂಜೆ- ಗೌರವದ ಸಂಕೇತವಾಗಿ ಪೂಜಾ ದ್ರವ್ಯಗಳನ್ನು ಬಳಕೆ ಮಾಡುತ್ತಾರೆ. ಅದಲ್ಲದೆ ಧಾರ್ಮಿಕ ವಿ ಧಿ-ವಿಧಾನಗಳ ಬಗೆಗೂ ಜನರಿಗೆ ಅರಿವು ಉಂಟಾಗುತ್ತದೆ. 

ತರುಣ ಜನಾಂಗದವರು ಮಹಾಮಸ್ತಕಾಭಿಷೇಕದ ಪ್ರಕ್ರಿಯೆಗಳಲ್ಲಿ ಹೇಗೆ ತೊಡಗಿದ್ದಾರೆ?
ತರುಣ ಸಮಾಜ ಎಲ್ಲ ರೀತಿಗಳಲ್ಲೂ ಭಾಗವಹಿಸುತ್ತಾರೆ. ಆದರೆ ಅವರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಸ್ವಯಂಸೇವಕರಾಗಿ, ಅಡುಗೆ, ಊಟದ ವ್ಯವಸ್ಥೆಯಲ್ಲಿ, ಭಕ್ತರ ಸೇವೆ ಮಾಡುವಲ್ಲಿ, ಮುನಿ ಸೇವೆ ಮಾಡುವಲ್ಲಿ, ಸಾಂಸ್ಕೃತಿಕ ಮತ್ತು ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಅವರು ತೊಡಗಿಕೊಳ್ಳುತ್ತಾರೆ. ಅದು ಅವರ ವಯೋಧರ್ಮಕ್ಕೆ ಸಹಜ. ವೃದ್ಧರು, ಮಧ್ಯ ವಯಸ್ಸಿನವರು ಆಧ್ಯಾತ್ಮಿಕವಾದ ಪೂಜಾ ಕ್ರಿಯಾಭಾಗದಲ್ಲಿ ತೊಡಗಿದರೆ, ಯುವಕರು ವ್ಯವಸ್ಥಾ ಭಾಗದಲ್ಲಿ ತೊಡಗುತ್ತಾರೆ. ಈ ಬಾರಿಯೂ ನಮ್ಮಲ್ಲಿ ಸಾವಿರಾರು ಮಂದಿ ಸ್ವಯಂಸೇವಕರಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.

ಮಹಾಮಸ್ತಕಾಭಿಷೇಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಹೇಗೆ ಸಿದ್ಧವಾಗಿದೆ?
ನಗರ ಅಲಂಕಾರದ ವಿಚಾರದಲ್ಲಿ ಕ್ಷೇತ್ರದಲ್ಲಿ ಯಾವಾಗಲೂ ಹೊಸತನವನ್ನು ಕಾಣಲು ನಾನು ಇಚ್ಛೆ ಪಡುತ್ತೇನೆ. ಉತ್ಸವ, ಸಮಾರಂಭಗಳು ಮೋಜು ಮಸ್ತಿ ಮಾಡುವ, ಉಂಡು ತಿಂದು ಹೋಗುವ ಕಾರ್ಯಕ್ರಮಗಳೆಂಬ ಸಾಮಾನ್ಯ ಕಲ್ಪನೆ ಇದೆ. ಆದರೆ ನಾವು ಒಂದು ಸುಂದರವಾದ ದೃಶ್ಯವನ್ನು, ಸ್ವತ್ಛ ಪರಿಸರವನ್ನು, ಸೊಬಗಿನ ಕಲೆಯನ್ನು ವೀಕ್ಷಿಸಿದಾಗ ಅಂತರಂಗದಲ್ಲಿ ಅದು ಚಿರಸ್ಥಾಯಿಯಾಗಿ ದಾಖಲಾಗುತ್ತದೆ.

ಮುಂದೆ ಯಾವುದೇ ಸಂದರ್ಭದಲ್ಲಿ ಅದು ನಮ್ಮ ನೆನಪಿಗೆ ಬಂದಾಗ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ಜತೆಗೆ ಉತ್ಸಾಹವನ್ನು ಒದಗಿಸುತ್ತದೆ. ಹಾಗಾಗಿ ನಾವು ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನಿರ್ವಹಿಸುವಾಗ ಅಲಂಕಾರಕ್ಕೆ ಹೆಚ್ಚಿನ ಪ್ರಾಶಸ್ತÂವನ್ನು ಕೊಡುತ್ತೇವೆ. ಅದೃಷ್ಟವಶಾತ್‌ ಈ ಸಂದರ್ಭದ ವ್ಯವಸ್ಥೆಗೆ ಸಹಕಾರ ನೀಡುವ, ಉತ್ಸಾಹದಿಂದ ಕೆಲಸ ನಿರ್ವಹಿಸುವ ಕಾರ್ಯಕರ್ತರು ನಮಗೆ ದೊರಕಿರುವುದು ನಮ್ಮ ಪುಣ್ಯ. ಹಾಗಾಗಿ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಹೊಸತಾದ ವಿನ್ಯಾಸಗಳು, ವಸ್ತುಗಳ ಬಳಕೆ, ಅವುಗಳನ್ನು ಪ್ರಕಟಿಸುವ ರೀತಿ, ವಿದ್ಯುತ್‌ ಅಲಂಕಾರಗಳನ್ನು ಜೋಡಿಸಿ ಇನ್ನೂ ಸುಂದರಗೊಳಿಸುವ ರೀತಿ ನಮ್ಮ ವೈಶಿಷ್ಟÂ.
ಇದರ ಹಿಂದೆ ಒಂದು ಭಾವ ಇದೆ. ಮಂಜುನಾಥ ಸ್ವಾಮಿಯ ದರ್ಶನ, ಬಾಹುಬಲಿಯ ಮಸ್ತಕಾಭಿಷೇಕಕ್ಕೆ ಬರುವಾಗ ಭಕ್ತರನ್ನು ಇಡೀ ನಗರವೇ ಸ್ವಾಗತಿಸುತ್ತದೆ. ಪುರಾಣದ ಕಥೆಗಳಲ್ಲಿ ರಾಮನ ವಿವಾಹ, ಪಾಂಡವರ ಕಾಲದ ನಗರಾಲಂಕಾರಗಳ ವರ್ಣನೆಗಳಿವೆ. ಅದು ಸಮೃದ್ಧಿಯ ಸಂಕೇತ. ಬರೇ ಓದಿದ್ದಾದರೂ ಜನರು ಅದನ್ನು ನೂರ್ಕಾಲ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ. ಅಂತೆಯೇ ಕ್ಷೇತ್ರಕ್ಕೆ ಬಂದವರು ನೋಡಲೇಬೇಕಾದ, ನೋಡಿ ಆನಂದಿಸಬೇಕಾದ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ.

ಮಸ್ತಕಾಭಿಷೇಕದ ಜನಮಂಗಲ ಕಾರ್ಯಕ್ರಮದಲ್ಲಿ ಅಶಕ್ತರಿಗೆ ನೆರವಿನ ಬಗ್ಗೆ?
ಜನಮಂಗಲ ಕಾರ್ಯಕ್ರಮದ ಭಾಗವಾಗಿ ಈ ಬಾರಿ ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ 8,450 ಮಂದಿಗೆ ಮಾಸಾಶನ ನೀಡಲು ಉದ್ದೇಶಿಸಲಾಗಿದೆ. 1,200 ಅಂಗವಿಕಲರು, 2,250 ಮಂದಿ ಅನಾರೋಗ್ಯ ಪೀಡಿತರು, 5,000 ಮಂದಿ ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತದೆ. ಜತೆಗೆ 600 ಮಂದಿಗೆ ವೀಲ್‌ಚೇರ್‌, 2,500 ಮಂದಿಗೆ ವಾಟರ್‌ ಬೆಡ್‌, ಸಾವಿರ ಮಂದಿಗೆ ಇತರ ಸಲಕರಣೆಗಳನ್ನು ನೀಡಲಾಗುತ್ತದೆ. ಕ್ಷೇತ್ರದಿಂದ ಈ ತನಕ ಒಟ್ಟು 24.67 ಕೋ.ರೂ.ಗಳ ಮಾಸಾಶನ ನೀಡಲಾಗಿದೆ.

ಕಿರಣ್‌ ಸರಪಾಡಿ 

ಶ್ರೀ ಪುಷ್ಪದಂತ ಸಾಗರ್‌ಜೀ,ಮುನಿಸಂಘದ ಪುರಪ್ರವೇಶ

Team Udayavani, Feb 3, 2019, 12:30 AM IST

ಬೆಳ್ತಂಗಡಿ: ಧರ್ಮಸ್ಥಳ ಭಗವಾನ್‌ ಶ್ರೀ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮುನಿ ಸಂಘದೊಂದಿಗೆ ಶನಿವಾರ ಧರ್ಮಸ್ಥಳ ಪುರಪ್ರವೇಶ ಮಾಡಿದ್ದು, ಕ್ಷೇತ್ರದ ವತಿಯಿಂದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು.

ಮುನಿ ವೃಂದದವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಬೀಡಿನಲ್ಲಿ ಭಗವಾನ್‌ ಶ್ರೀ ಆದಿನಾಥ ಸ್ವಾಮಿ ಹಾಗೂ ಬಸದಿಯಲ್ಲಿ ಭಗವಾನ್‌ ಚಂದ್ರನಾಥ ಸ್ವಾಮಿಯ ದರ್ಶನ ಮಾಡಿಸಲಾಯಿತು. ಬಳಿಕ ಆಚಾರ್ಯರು ಮಂಗಲ ಪ್ರವಚನ ನೀಡಿದರು.

ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಮಾತನಾಡಿ, ನಾವು ನಿತ್ಯವೂ ಅಹಿಂಸಾ ಧರ್ಮದ ಪಾಲನೆ ಮಾಡಬೇಕು. ಸಾಮಾಯಿಕ, ಪ್ರತಿಕ್ರಮಣದ ಮೂಲಕ ಜೀವನ ಪಾವನ ಮಾಡಬೇಕು ಎಂದು ಸಲಹೆ ನೀಡಿದರು.

ವರ್ಧಮಾನ ಸಾಗರ್‌ಜಿ ಮಾತನಾಡಿ, ಧರ್ಮಾತ್ಮರ ಸತ್ಸಂಗದಿಂದ ನಾವು ಆತ್ಮಜಾಗೃತಿ ಮಾಡಿಕೊಂಡಾಗ ಜೀವನ ಪಾವನವಾಗುತ್ತದೆ. ಧರ್ಮದ ಮರ್ಮವನ್ನು ಅರಿಯಲು ಧರ್ಮಾತ್ಮರು ಪ್ರೇರಣೆ ನೀಡುತ್ತಾರೆ. ಧರ್ಮಸ್ಥಳ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಬಂದಾಗ ನಮ್ಮ ಹೃದಯ ಪರಿವರ್ತನೆಯಾಗಬೇಕು. ನಿರಂತರ ಸಾಧನೆಯಿಂದ ಆತ್ಮನೇ ಪರಮಾತ್ಮನಾಗಬಲ್ಲ ಎಂದರು.

ಪ್ರಮುಖ್‌ ಸಾಗರ್‌ ಮುನಿ ಮಹಾರಾಜರು ಮತ್ತು ಹೊಂಬುಜ ಜೈನ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯ ಸರಕಾರ ಭಾಗಿ; ಅಧಿವೇಶನವೇ ಮೊಟಕು! 

Team Udayavani, Feb 3, 2019, 12:30 AM IST

ಬೆಳ್ತಂಗಡಿ: ಧರ್ಮಸ್ಥಳದಲ್ಲಿ 1982ರಲ್ಲಿ ನಡೆದ ಐತಿಹಾಸಿಕ ಭಗವಾನ್‌ ಶ್ರೀ ಬಾಹುಬಲಿಯ ಪ್ರತಿಷ್ಠಾಪನೆ ಹಾಗೂ ಪ್ರಥಮ ಮಸ್ತಕಾಭಿಷೇಕವು ಹಲವು ಶತಮಾನಗಳ ಬಳಿಕ ನಡೆದ ಒಂದು ಐತಿಹಾಸಿಕ ಕಾರ್ಯ. ಅಂದಿನ ರಾಜ್ಯ ಸರಕಾರ ಅದು ತನ್ನದೇ ಕಾರ್ಯಕ್ರಮವೆಂದು ಅಧಿವೇಶನವನ್ನೇ ಮೊಟಕುಗೊಳಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದೇ ಅದರ ಮಹತ್ವಕ್ಕೆ ಸಾಕ್ಷಿ. 

ರಾಜ್ಯದ ಶ್ರವಣಬೆಳಗೊಳ, ಕಾರ್ಕಳ, ವೇಣೂರುಗಳಲ್ಲಿ ಬಾಹುಬಲಿಯ ಮೂರ್ತಿಗಳಿವೆ. ಆದರೆ ಅವುಗಳೆಲ್ಲ ನಮ್ಮ ಕಾಲದಲ್ಲಿ ಪ್ರತಿಷ್ಠಾಪನೆಗೊಂಡವಲ್ಲ. ಅವುಗಳ ಕೆತ್ತನೆ, ಸಾಗಣೆ, ಪ್ರತಿಷ್ಠಾಪನೆ ಇತ್ಯಾದಿಗಳಿಗೆ ನಮಗೆ ಐತಿಹ್ಯ, ಕಾವ್ಯ,ಶಾಸನಗಳಷ್ಟೇಆಧಾರ. ಆದರೆ ಧರ್ಮಸ್ಥಳದ ಬಾಹುಬಲಿಯ ಕೆತ್ತನೆ, ಸಾಗಾಟ,ಪ್ರತಿಷ್ಠಾಪನೆ ನಮ್ಮ ಕಾಲದ ಮಹಾನ್‌ಘಟನೆ. ಅದನ್ನು ಕಣ್ತುಂಬಿಕೊಳ್ಳ ಬೇಕೆಂದು ಜನಸಾಮಾನ್ಯರು ಬಯಸಿ ದ್ದಂತೆ ಸರಕಾರವೂ ಭಾವಿಸಿತ್ತು. ಇದು ಜಗತ್ತೇ ಕರ್ನಾಟಕದತ್ತ ನೋಡುವ ಸಂದರ್ಭ, ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಅಂದಿನ ಮುಖ್ಯಮಂತ್ರಿ ಆರ್‌. ಗುಂಡೂರಾಯರು ಹೇಳಿದ್ದರು.
 
ಸಾಮಾನ್ಯವಾಗಿ ವಿಧಾನ ಮಂಡಲದ ಕಲಾಪಗಳು ಒಮ್ಮೆ ನಿಗದಿಗೊಂಡರೆತುರ್ತು ಸಂದರ್ಭಗಳ ವಿನಾ ಮೊಟಕುಗೊಳ್ಳುವುದಿಲ್ಲ. ಆದರೆ ಧರ್ಮಸ್ಥಳ ಬಾಹುಬಲಿಯ ಪ್ರಥಮ ಮಸ್ತಕಾಭಿಷೇಕ ದಲ್ಲಿ ಶಾಸಕರು-ಸಚಿವರು ಭಾಗವಹಿ ಸಲು 1982 ಫೆ. 3ರಂದು ಉಭಯ ಸದನಗಳ ಕಲಾಪಗಳನ್ನು ಬೆಳಗ್ಗೆಯೇ ಮುಗಿಸಿ, ಫೆ. 4ಕ್ಕೆ  ರಜೆ ನೀಡಲಾಗಿತ್ತು. ಪ್ರಥಮ ಮಸ್ತಕಾಭಿಷೇಕದಲ್ಲಿ ಮುಖ್ಯಮಂತ್ರಿ, ಪ್ರಮುಖ ಸಚಿವರು ಹಾಗೂ 120 ಮಂದಿ ಶಾಸಕರು ಪಾಲ್ಗೊಂಡಿ ದ್ದರು. ರಾಜ್ಯದ ಜನತೆಯ ಪರವಾಗಿ ಮುಖ್ಯಮಂತ್ರಿಗಳು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅಭಿನಂದಿಸಿದ್ದರು.  

ಬೀಜಾಕ್ಷರ ಮಂತ್ರ ಬರೆದರು
ಸಂಪ್ರದಾಯ ಪ್ರಕಾರ ಯಾವುದೇ ಮೂರ್ತಿ ಪ್ರತಿಷ್ಠೆ ಸಂದರ್ಭ ವಿಶೇಷ ರೀತಿಯ ಮಂತ್ರ ವಿನ್ಯಾಸದೊಡನೆ ಆ ಮೂರ್ತಿಯಲ್ಲಿ ದೈವತ್ವವನ್ನು ಸ್ಥಿರಗೊಳಿಸುವುದು ಅಗತ್ಯ.  ಬಾಹುಬಲಿಯ ಪ್ರಥಮ ಮಸ್ತಕಾಭಿಷೇಕದ ಸಂದರ್ಭ ಮೂರ್ತಿಯ ಹಣೆ, ಶಿರಸ್ಸು, ಎದೆ, ಭುಜ, ನಾಭಿ, ಪಾದ ಮೊದಲಾದ ಅಂಗಗಳಲ್ಲಿ ಪುರೋಹಿತರು ಬೀಜಾಕ್ಷರ ಮಂತ್ರಗಳನ್ನು ಚಿನ್ನದ ಕಂಠವನ್ನು  ಹಾಲು ಮತ್ತು ಕುಂಕುಮದಲ್ಲಿ ಮುಳುಗಿಸಿ ಬರೆದರು ಎಂಬ ದಾಖಲೆ ಇದೆ. 

ಇಂದಿರಮ್ಮ ಬಂದರು
ಪ್ರಥಮ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವುದಕ್ಕೆ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಬರುತ್ತಾರೆ ಎಂದು ಪ್ರಚಾರ ವಾಗಿತ್ತು. ಇಂದಿರಾ ಅಂದಿನ ಪ್ರಭಾವೀ ನಾಯಕಿ ಯಾಗಿದ್ದುದರಿಂದ ಮಹಿಳೆಯರು ಅವರನ್ನು ನೋಡುವುದಕ್ಕೆ ಕಾತರರಾಗಿದ್ದರು. 

ಫೆ. 4ರಂದು ಮಸ್ತಕಾಭಿಷೇಕಕ್ಕೆ ಅಣಿಯಾಗು ತ್ತಿದ್ದಂತೆ ಹೆಲಿಕಾಪ್ಟರ್‌ ಬಾನೆತ್ತರದಲ್ಲಿ ಕಾಣಿಸಿತು. “ಓ… ಇಂದಿರಮ್ಮ ಬಂದರು, ಇಂದಿರಮ್ಮ ಬಂದರು’ ಎಂದು ಸೇರಿದ್ದವರು ಪುಳಕಿತರಾದರು.ಆದರೆ ಅದು ಬಾಹುಬಲಿ ಮೂರ್ತಿಗೆ ಪುಷ್ಪಾರ್ಚನೆ ನಡೆಸಲು ಬಂದುದಾಗಿತ್ತು. 

ಮೊದಲು ರಚನೆಯಾಗಲಿ!
ಆರಂಭದಲ್ಲಿ ಧರ್ಮಸ್ಥಳಕ್ಕಾಗಿ 18 ಅಡಿಗಳ ಮೂರ್ತಿಶಿಲ್ಪವನ್ನು ರೂಪಿಸುವಂತೆ ರತ್ನವರ್ಮ ಹೆಗ್ಗಡೆ ಅವರು ರೆಂಜಾಳ ಗೋಪಾಲ ಶೆಣೈ ಅವರಲ್ಲಿ ಪ್ರಸ್ತಾಪಿಸಿದ್ದರು. ಶೆಣೈ ಅವರು 100 ಗುಣಿಸು 58 ಅಡಿಯ ಶಿಲೆಯನ್ನು ಪತ್ತೆಹಚ್ಚಿದಾಗ ಪ್ರಮಾಣ ದೊಡ್ಡದಾಯಿತು. ಅನಂತರ ರತ್ನವರ್ಮ ಹೆಗ್ಗಡೆ ಅವರು  ಮೂರ್ತಿಯನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ಎತ್ತರವಾಗಿಸಿ ಎಂದು ಸೂಚಿಸಿದರು. ಎತ್ತರದ ಬೃಹತ್‌ ಶಿಲ್ಪವನ್ನೇನೋ ರೂಪಿಸಬಹುದು, ಆದರೆ ಧರ್ಮಸ್ಥಳದ ವರೆಗೆ ಅದನ್ನು ಸಾಗಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಯಿತು. ಮೊದಲು ಮೂರ್ತಿಶಿಲ್ಪ ರಚನೆಯಾಗಲಿ, ಸಾಗಾಟದ ಸವಾಲು ಆಮೇಲಿನ ದಲ್ಲವೇ, ಪರಿಹಾರ ಹುಡುಕಿದರಾಯಿತು ಎಂಬ ಭರವಸೆ ತಾಳಿದರು ರತ್ನವರ್ಮ ಹೆಗ್ಗಡೆಯವರು. ಇದುವೇ 39 ಅಡಿಗಳ ಬೃಹತ್‌ ಮೂರ್ತಿಶಿಲ್ಪವನ್ನು ರೂಪಿಸಲು ಪ್ರೇರಣೆ ನೀಡಿತು. 

ಬಾಹುಬಲಿ ಪುರಾಣ ಕರಗಿತು ಅಹಮಿಕೆ
ಸ್ವಾವಲಂಬನೆಯ ಅತೀಂದ್ರಿಯ ಸುಖವೇ ಶಾಶ್ವತ. ಆರಂಭದಲ್ಲಿ ಆಮಿಷವಾಗಿ ಬಳಿಕ ನಂಜಾಗಿ ನುಂಗುವ ಐಹಿಕ ಸುಖಭೋಗಗಳು ಬೇಡ. ಈಗಿಂದೀಗಲೇ ದಿಗಂಬರ ಮುನಿಯಾಗಿ ದೇವತೆಗಳಿಂದ ಪಾದ ಪೂಜೆ ಮಾಡಿಸಿಕೊಳ್ಳುವೆ ಎಂದು ದೃಢವಾಗಿ ನಿಶ್ಚಯಿಸಿದ ಬಾಹು ಬಲಿ. ಅಣ್ಣನೆಡೆಗೆ ತಿರುಗಿ ರಾಜ್ಯಲಕ್ಷ್ಮಿ ಯನ್ನು ನೀನೇ ಆಳು. ತಂದೆಯಿಂದ ನನಗೆ ದೊರೆತ ರಾಜ್ಯವೂ ನಿನಗೇ ಇರಲಿ. ನಾನು ನಿನ್ನೊಡನೆ ತೋರಿದ ಅವಿನಯವನ್ನು ಮನ್ನಿಸು ಎಂದು ತಪಶ್ಚರ್ಯೆಗೆ ಹೊರಡಲು ಕಾತರ ದಿಂದ ಉದ್ಯುಕ್ತನಾದ.
ಭರತನ ಕೋಪ, ಅಹಮಿಕೆ, ಅಸೂಯೆಗಳೆಲ್ಲ ಜರ್ರನೆ ಇಳಿದವು. ಸಹೋದರನನ್ನೇ ಕೊಲ್ಲಲು ಬಯಸಿದೆನಲ್ಲ ಎಂಬ ವಿವೇಕೋದಯ ವಾಯಿತು. ತಂದೆಯವರು, ಸಹೋ ದರ- ಸಹೋದರಿಯರೆಲ್ಲ ತಪಸ್ಸಿಗೆ ತೊಡಗಿದ್ದಾರೆ. ಮನುವಂಶದಲ್ಲಿ ತಿಲಕಪ್ರಾಯವಾಗಿ ನೀನೊಬ್ಬನೇ ನನಗಿರುವುದು. ನೀನೂ ಮುನಿ ಯಾದರೆ ನನಗಾರಿದ್ದಾರೆ ಎಂದು ದುಃಖೀಸಿದ. ಭರತನಿಗೆ ತನ್ನ ರಾಜ್ಯ ವನ್ನು ಧಾರೆಯೆರೆದು ಕೊಡುವಂತೆ ಬಾಹುಬಲಿಯ ಕಣ್ಣೀರು ಧಾರೆ ಯಾಗಿ ಅಣ್ಣನ ಶಿರದ ಮೇಲೆ ಸುರಿಯಿತು; ಭರತನ ಕಣ್ಣೀರು ತಮ್ಮನ ಪಾದ್ಯವಾಗಿ ತಮ್ಮನ ಪಾದಗಳನ್ನು ತೊಳೆಯಿತು.
(ಇನ್ನೂ ಇದೆ)


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ