ಯಕ್ಷರಂಗದ ಏಳಿಗೆಗೆ ಹವ್ಯಾಸಿಗಳ ಗಣನೀಯ ಕೊಡುಗೆ 

Team Udayavani, Mar 10, 2019, 1:31 PM IST

ಯಕ್ಷಗಾನರಂಗ ತೆಂಕುತಿಟ್ಟು ಮತ್ತು ಬಡಗುತಿಟ್ಟಿನಲ್ಲಿ ಇಂದು 50 ಕ್ಕೂ ಹೆಚ್ಚು ವೃತ್ತಿ ಮೇಳಗಳು ತಿರುಗಾಟ ಮಾಡುತ್ತಿರುವುದು ಕಲಾಲೋಕ ಬೆಳದ ಬಗೆಯನ್ನು ಸಾರಿ ಹೇಳುತ್ತಿದೆ. ವೃತ್ತಿ ಮೇಳಗಳಲ್ಲಿ ನೂರಾರು ಹಿರಿಯ ,ಕಿರಿಯ ಕಲಾವಿದರು ಕಲಾಲೋಕವನ್ನು ಬೆಳಗುತ್ತಿರುವ ಹಾಗೆಯೇ ಶ್ರೇಷ್ಠ ಜಾನಪದ ಕಲೆ ಎನಿಸಿಕೊಂಡಿರುವ ಯಕ್ಷಗಾನ ರಂಗವನ್ನು ಸಾವಿರಾರು ಹವ್ಯಾಸಿ ಕಲಾವಿದರು ಬೆಳಗುತ್ತಿದ್ದಾರೆ. 

ದೊಡ್ಡ ಇತಿಹಾಸವಿದ್ದು, ಕಾಲಾನುಕ್ರಮಕ್ಕೆ ಸರಿಯಾಗಿ ಬದಲಾವಣೆ ಕಂಡುಕೊಳ್ಳುತ್ತಾ ಬಂದಿರುವ ಕಲೆಗೆ ಹವ್ಯಾಸಿ ರಂಗದ ಕೊಡುಗೆ ಅಪಾರ. ಇಂದಿನ ದಿನಮಾನಗಳಲ್ಲಿ ಟಿವಿ ಮಾಧ್ಯಮಗಳು, ಅಧುನೀಕರಣದ ನಡುವೆಯೂ ಶುದ್ಧ ದೇಸಿ ಕಲೆಯಾಗಿರುವ ಯಕ್ಷಗಾನದತ್ತ ಯುವ ಜನಾಂಗವೂ ಆಕರ್ಷಿತವಾಗುತ್ತಿರುವುದು ಕಲಾ ಪರಂಪರೆ ಬಹುದೂರಕ್ಕೆ  ಮುಂದುವರಿಯುವ ಸೂಚನೆ ಎನ್ನಬಹುದು. 

ಸ್ವಾತಂತ್ರ್ಯ ಪೂರ್ವದಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವವರು ಹೊರತು ಹವ್ಯಾಸಿಗಳಾಗಿ ಕಾಣಿಸಿಕೊಂಡಿರುವ ಸಂಖ್ಯೆ ವಿರಳ ಎನ್ನುವುದು ಹಿರಿಯ ಕಲಾವಿದರ ಅಭಿಪ್ರಾಯ. ಇದೀಗ ವೈದ್ಯರು, ಐಟಿ ಉದ್ಯೋಗಿಗಳು, ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಲಿಂಗಬೇಧವಿಲ್ಲದೆ ಯಕ್ಷಗಾನ ರಂಗದಲ್ಲಿ ಹವ್ಯಾಸಿ ಕಲಾವಿದರಾಗಿ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದಾರೆ,ರಂಗದಲ್ಲಿ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುತ್ತಿದ್ದಾರೆ. 

ಹಿಂದೆ ಮಡಿವಂತಿಕೆಯ ಕಾಲದಲ್ಲಿ ಮಹಿಳೆಯರು ಯಕ್ಷಗಾನ ರಂಗಕ್ಕೆ ಬರುವುದು ಅಸಾಧ್ಯವಾಗಿತ್ತು  ಇಂದು ನೂರಾರು ಯುವತಿಯರು ,ಮಹಿಳೆಯರು  ಯಕ್ಷಗಾನ ಕಲಾವಿದರಾಗುವ ಮೂಲಕ ಕಲಾವಿದೆಯರಾಗಿ ಗಮನ ಸೆಳೆಯುತ್ತಿದ್ದಾರೆ.  ಹವ್ಯಾಸಿ ರಂಗದ ಆಕರ್ಷಣೆ ಎನ್ನುವಂತೆ ಕೆಲ ಕಲಾವಿದೆಯರು ಬಹುಬೇಡಿಕೆಯನ್ನು ಪಡೆದು ರಂಗದಲ್ಲಿ ಮಿಂಚುತ್ತಿರುವುದು ಅವರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. 

ಓರ್ವ ಹವ್ಯಾಸಿ ಕಲಾವಿದ ವೃತ್ತಿ ಕಲಾವಿದರಿಗೆ ಸರಿಗಟ್ಟುವ ಮಟ್ಟಿಗೆ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎನ್ನುವ ಮಾತಿಗೆ ಅಪವಾದ ಎನ್ನುವಂತೆ ಈಗ ಕೆಲ ಹವ್ಯಾಸಿ ರಂಗದ ಪ್ರತಿಭೆಗಳು ಡೇರೆ ಮೇಳಗಳಿಗೆ ಅತಿಥಿ ಕಲಾವಿದರಾಗಿ ಹೋಗುವ ಮಟ್ಟಿಗೆ ತಮ್ಮ ಕಲಾ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. 

ಹವ್ಯಾಸಿ ಕಲಾವಿದನೊಬ್ಬ ಉತ್ತಮ ಪ್ರೇಕ್ಷಕನಾಗುತ್ತಾನೆ, ಕಲಾ ಲೋಕದ ಏಳಿಗೆಗೆ ನೆರವಾಗುತ್ತಾನೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಹವ್ಯಾಸಿ ರಂಗದ ನೂರಾರು ಸಂಘ ಸಂಸ್ಥೆಗಳು ಕಲಾವಿದರ ಏಳಿಗೆಗೆ , ಬಯಲಾಟ ಮೇಳಗಳಿಗೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. 

ಈಗೀಗ ಯುವ ಜನಾಂಗಕ್ಕೆ  ಪೌರಾಣಿಕ ಪ್ರಸಂಗಳ ಆಸಕ್ತಿ ಕಡಿಮೆಯಾಗುತ್ತಿರುವ ವೇಳೆಯಲ್ಲಿ ಹವ್ಯಾಸಿ ರಂಗದ ಯುವ ಹವ್ಯಾಸಿಗಳು ಪೌರಾಣಿಕ ಪ್ರದರ್ಶನಗಳನ್ನು  ತರಬೇತಿ ಪಡೆದು ಪ್ರದರ್ಶನ ನೀಡುತ್ತಿರುವುದು ಪೌರಾಣಿಕ ಪ್ರಸಂಗಗಳ ಉಳಿವಿಗೆ ,ಆ ಪ್ರಸಂಗಗಳ ಮೌಲ್ಯಗಳನ್ನು ಉಳಿಸಲು ಸಾಧ್ಯವಾಗಿದೆ ಎನ್ನಬಹುದು.

ಸಂಪ್ರದಾಯ ಬದ್ಧ ಯಕ್ಷಗಾನ ಈಗ ಕಾಣುವುದು ಕಷ್ಟ ಎನ್ನುವ ಅಪವಾದದ ನಡುವೆ ಹವ್ಯಾಸಿ ಸಂಘಗಳು ಪೌರಾಣಿಕ ಪ್ರಸಂಗಳನ್ನು ಆ ನಡೆಗಳಿಗೆ ಅನುಸಾರವಾಗಿ ಪ್ರದರ್ಶಿಸುವುದನ್ನು ಕಾಣಬಹುದಾಗಿದೆ. ಪ್ರಮುಖವಾಗಿ ವೇಷ ಭೂಷಣ, ಒಡ್ಡೋಲಗ, ಪ್ರಯಾಣ ಕುಣಿತ  ,ಅರ್ಥಗಾರಿಕೆಯಲ್ಲಿ ಚೌಕಟ್ಟನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 

ಮುಂದುವರಿಯುವುದು..

https://beta.udayavani.com/articles/web-focus/what-is-meant-by-risk-factor-in-investment

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ