ಉಪ್ಪಿ ಹೊಸ ರುಚಿ; ಸದ್ದಿಲ್ಲದೆ ಹೊಸ ಚಿತ್ರ ಒಪ್ಪಿದ ಉಪೇಂದ್ರ

Team Udayavani, Feb 7, 2019, 10:12 AM IST

ನಟ ಉಪೇಂದ್ರ ಅವರು ಸಿನಿಮಾಗೆ ಗುಡ್‌ಬೈ ಹೇಳಿ, ಸಂಪೂರ್ಣ ರಾಜಕೀಯಕ್ಕೆ ಎಂಟ್ರಿಯಾಗಿಬಿಡುತ್ತಾರೆ ಅಂದುಕೊಂಡವರಿಗೆ ಕ್ಲೈಮ್ಯಾಕ್ಸ್‌ನಲ್ಲೊಂದು ಹೊಸ ಬದಲಾವಣೆ ಇಟ್ಟರು. ಪುನಃ ಸಿನಿಮಾದತ್ತ ಮುಖ ಮಾಡಿದರು. ಹಾಗೆ ಸಿನಿಮಾಗೆ ವಾಲಿದ್ದೇ ತಡ, ಅವರು ‘ಐ ಲವ್‌ ಯು’ ಎನ್ನುವ ಮೂಲಕ ಜೋರು ಸುದ್ದಿಯಾಗಿಬಿಟ್ಟರು. ಸದ್ದಿಲ್ಲದೆಯೇ, ‘ಐ ಲವ್‌ ಯು’ ಸಿನಿಮಾ ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿರುವ ಉಪೇಂದ್ರ, ಇದೀಗ ಸದ್ದಿಲ್ಲದೆಯೇ ಹೊಸದೊಂದು ಸಿನಿಮಾಗೆ ಜೈ ಎಂದಿದ್ದಾರೆ.

ಹೌದು, ಉಪೇಂದ್ರ ಹೆಸರಿಡದ ಚಿತ್ರಕ್ಕೆ ಹೀರೋ ಆಗಿದ್ದಾರೆ. ಅಂದಹಾಗೆ, ಆ ಚಿತ್ರವನ್ನು ಮೌರ್ಯ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ‘ಚಮಕ್‌’, ‘ಅಯೋಗ್ಯ’ ಮತ್ತು ‘ಬೀರ್‌ಬಲ್‌’ ಚಿತ್ರವನ್ನು ನಿರ್ಮಿಸಿದ್ದ ಚಂದ್ರಶೇಖರ್‌ಗೆ ಉಪೇಂದ್ರ ಅವರೊಂದಿಗೆ ಮೊದಲ ಕಾಂಬಿನೇಷನ್‌ ಇದು. ಉಪೇಂದ್ರ ಅವರ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಆ ಚಿತ್ರದ ಹೆಸರು ಏನಿರಬಹುದು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಒಂದಷ್ಟು ಕುತೂಹಲ ಕೆರಳಿಸಿದೆ.

ಇದಕ್ಕೆ ಕಾರಣ, ಉಪೇಂದ್ರ. ಅವರು ಯಾವುದೇ ಚಿತ್ರ ಒಪ್ಪಿದರೂ, ಅಲ್ಲೊಂದು ವಿಶೇಷವಿರುತ್ತೆ. ಕಥೆಯಲ್ಲೊಂದು ಹೊಸತನ ಇರುತ್ತೆ. ಹಾಗೆಯೇ ಶೀರ್ಷಿಕೆಯಲ್ಲೂ ಹೊಸದೇನೋ ಇರುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸಾಮಾನ್ಯವಾಗಿ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳಲ್ಲಿ ವಿಡಂಬನೆ ಹೆಚ್ಚು. ಅದರಲ್ಲೂ ರಾಜಕಾರಣವನ್ನು ಹೆಚ್ಚು ಫೋಕಸ್‌ ಮಾಡಿ ಚಿತ್ರ ಮಾಡಿರುವುದುಂಟು. ಉಪೇಂದ್ರ ಅವರ ಶೈಲಿಯ ಚಿತ್ರಗಳನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ಈಗ ಹೊಸ ಚಿತ್ರದ ಸುದ್ದಿ ಓದುತ್ತಿದ್ದಂತೆಯೇ, ಈ ಚಿತ್ರದ ಕಥೆ ಏನಿರಬಹುದು, ಉಪೇಂದ್ರ ಅವರ ಪಾತ್ರ ಹೇಗಿರಬಹುದು, ಚಿತ್ರದ ಶೀರ್ಷಿಕೆ ಏನಾಗಿರಬಹುದು ಎಂಬ ಆಲೋಚನೆಯಲ್ಲಿರುವುದಂತೂ ಸತ್ಯ. ಆ ಎಲ್ಲಾ ಉತ್ತರಗಳಿಗೆ ಸ್ವಲ್ಪ ದಿನ ಕಾಯಬೇಕೆಂಬುದು ಚಿತ್ರತಂಡದ ಮಾತು.

ಅಂದಹಾಗೆ, ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಗುರುಕಿರಣ್‌ ಅವರ ಸಂಗೀತವಿದೆ. ಉಪೇಂದ್ರ ಅವರ ಹಿಂದಿನ ಚಿತ್ರಗಳಿಗೆ ಗುರುಕಿರಣ್‌ ಸಂಗೀತದ ಸ್ಪರ್ಶವಿತ್ತು. ಅವರಿಬ್ಬರ ಕಾಂಬಿನೇಷನ್‌ ಮೋಡಿ ಮಾಡಿದ್ದು ಎಲ್ಲರಿಗೂ ಗೊತ್ತು. ಬಹಳ ದಿನಗಳ ಬಳಿಕ ಗುರುಕಿರಣ್‌ ಅವರು ಉಪೇಂದ್ರ ಅವರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು, ಭರತ್‌ ಪರಶುರಾಮ್‌ ಅವರು ಚಿತ್ರದ ಛಾಯಾಗ್ರಹಣ ಮಾಡುತ್ತಿದ್ದಾರೆ. ರಾಮ್‌ ಕೆ. ಲಕ್ಷ್ಮಣ್‌ ಅವರು ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಮಾಹಿತಿ ಇಷ್ಟು. ಚಿತ್ರದಲ್ಲಿ ಉಪೇಂದ್ರ ಅವರಿಗೆ ಯಾರು ನಾಯಕಿಯಾಗುತ್ತಾರೆ. ಇನ್ನುಳಿದಂತೆ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಇನ್ನೂ ಸಮಯವಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ