ಆತ್ಮದ “ಆಟ’ ಪರಮಾತ್ಮನ ಹುಡುಕಾಟ!

Team Udayavani, Feb 8, 2019, 6:05 AM IST

ಒಂದಷ್ಟು ಮಂದಿ ಆತನ ಮೈಯೊಳಗೆ ಆತ್ಮ ಹೊಕ್ಕಿದೆ ಎನ್ನುತ್ತಾರೆ. ಇನ್ನೊಂದಷ್ಟು ಮಂದಿ ಆತ ಮಾನಸಿಕ ರೋಗಿ ಎಂಬ ಪಟ್ಟ ಕಟ್ಟುತ್ತಾರೆ. ಅದಕ್ಕೆ ಕಾರಣ ಪತ್ರಕರ್ತನಾಗಿದ್ದವ ಏಕಾಏಕಿ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ. ಇಬ್ಬರು ದೊಡ್ಡ ವ್ಯಕ್ತಿಗಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾನೆ. ಅಷ್ಟಕ್ಕೂ ಆತನ ಉದ್ದೇಶವೇನು? ಆತ್ಮದ ಕಾಟನಾ, ಮಾನಸಿಕ ರೋಗಿನಾ? ಕುತೂಹಲವಿದ್ದರೆ ನೀವು “ನಟಸಾರ್ವಭೌಮ’ ಚಿತ್ರ ನೋಡಬಹುದು. 

ಕೆಲವು ಸಿನಿಮಾಗಳನ್ನು ನೋಡಿ ಹೊರಬಂದಾಗ ಎರಡು ಗಂಟೆ ಏನು ನೋಡಿದೆವು ಎಂಬುದನ್ನು ರಿವೈಂಡ್‌ ಮಾಡಿಕೊಂಡರೂ ಕಣ್ಣ ಮುಂದೆ ಏನೂ ಬರೋದಿಲ್ಲ. ಆದರೆ, “ನಟಸಾರ್ವಭೌಮ’ ಸಿನಿಮಾ ನೋಡಿ ಹೊರಬಂದಾಗ ಸಾಕಷ್ಟು ಖುಷಿ ಕೊಡುವ ಅಂಶಗಳು, ಸನ್ನಿವೇಶಗಳು ರಿವೈಂಡ್‌ ಆಗುತ್ತವೆ. ಅದೇ “ನಟಸಾರ್ವಭೌಮ’ನ ಹೈಲೈಟ್‌. ಇದು ಔಟ್‌ ಆ್ಯಂಡ್‌ ಔಟ್‌ ಫ್ಯಾಮಿಲಿ ಎಂಟರ್‌ಟೈನರ್‌. ಚಿತ್ರದಲ್ಲಿ ಪುನೀತ್‌ ಒಂದು ಡೈಲಾಗ್‌ ಹೇಳುತ್ತಾರೆ, “ನಮಗೆ ಫ್ಯಾಮಿಲಿ ಆಡಿಯನ್ಸ್‌ ಜಾಸ್ತಿ’ ಎಂದು.

ಚಿತ್ರತಂಡ ಆ ಅಂಶಕ್ಕೆ ಸ್ವಲ್ಪ ಹೆಚ್ಚೇ ಗಮನವಹಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಿದೆ. ಹಾಗಾಗಿಯೇ, ಫ್ಯಾಮಿಲಿ ಆಡಿಯನ್ಸ್‌ ಏನೇನು ಬಯಸುತ್ತಾರೋ, ಆ ಅಂಶಗಳನ್ನು ನೀಡಲು ನಿರ್ದೇಶಕ ಪವನ್‌ ಒಡೆಯರ್‌ ಪ್ರಯತ್ನಿಸಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ. ಕಮರ್ಷಿಯಲ್‌ ಸಿನಿಮಾಗಳಲ್ಲಿ ಕಥೆ ಇರುವುದಿಲ್ಲ ಎಂಬ ಮಾತಿನ ನಡುವೆಯೇ “ನಟಸಾರ್ವಭೌಮ’ದಲ್ಲೊಂದು ಕಥೆ ಇದೆ ಮತ್ತು ಅದರದ್ದೇ ಆದ ದಿಕ್ಕಿನಲ್ಲಿ ಸಾಗುತ್ತದೆ ಕೂಡಾ.

ಚಿತ್ರದಲ್ಲೊಂದು ಆತ್ಮದ ಕಥೆ ಇದೆ. ಹಾಗಂತ ಇದು ಹಾರರ್‌ ಸಿನಿಮಾನಾ ಎಂದು ಕೇಳಿದರೆ ಈಗಲೇ ಉತ್ತರಿಸೋದು ಕಷ್ಟ. ಚಿತ್ರದಲ್ಲಿ ನಾಯಕ ತನ್ನದೆರುಗಿರುವ ಖಳರನ್ನು ಆಟವಾಡಿಸಿದಂತೆ, ನಿರ್ದೇಶಕ ಪವನ್‌ ಚಿತ್ರದ ಕ್ಲೈಮ್ಯಾಕ್ಸ್‌ವರೆಗೂ ಟ್ವಿಸ್ಟ್‌ ಕೊಡುತ್ತಾ, ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಆಟವಾಡಿಸಿದ್ದಾರೆ. ಅದೇ ಈ ಸಿನಿಮಾದ ಮಜಾ. ಹಾರರ್‌ ಸಿನಿಮಾ ಇಷ್ಟಪಡುವವರಿಂದ ಹಿಡಿದು ಮಾಸ್‌ ಪ್ರಿಯರವರೆಗೂ ರಂಜಿಸುತ್ತಾ ಸಾಗುವುದು “ನಟಸಾರ್ವಭೌಮ’ನ ಹೈಲೈಟ್‌. 

ಕಥೆಯ ವಿಷಯಕ್ಕೆ ಬರುವುದಾದರೆ ಇದೊಂದು ರಿವೆಂಜ್‌ ಸ್ಟೋರಿ. ಇದಕ್ಕೆ ಹಾರರ್‌, ಕಾಮಿಡಿ ಹಾಗೂ ಲವ್‌ ಅನ್ನು ಸೇರಿಸಿದ್ದಾರೆ. ಕಥೆ ತೀರಾ ಹೊಸದು ಎಂದು ಎನಿಸದೇ ಹೋದರೂ ನಿರ್ದೇಶಕ ಪವನ್‌ ಒಡೆಯರ್‌, ಚಿತ್ರಕಥೆ ಹಾಗೂ ನಿರೂಪಣೆಯಿಂದ ಇಡೀ ಸಿನಿಮಾವನ್ನು ಪ್ರೇಕ್ಷಕರಿಗೆ ಹತ್ತಿರವಾಗುವಂತೆ ಮಾಡಿದ್ದಾರೆ. ಅದು ಡೈಲಾಗ್‌ನಿಂದ ಹಿಡಿದು ಪ್ರತಿ ದೃಶ್ಯಗಳಲ್ಲೂ ಎಲ್ಲಾ ವರ್ಗವನ್ನು ರಂಜಿಸುವತ್ತ ಗಮನ ಕೊಡಲಾಗಿದೆ.

ಹಾಗಾಗಿಯೇ, ಅಭಿಮಾನಿಗಳು ಶಿಳ್ಳೆ ಹಾಕುವಂತಹ ಸಂಭಾಷಣೆಗಳು ಆಗಾಗ ನಾಯಕ ಸೇರಿದಂತೆ ಪ್ರತಿ ಪಾತ್ರಗಳ ಬಾಯಿಂದ ಬರುತ್ತಿರುತ್ತದೆ. ಚಿತ್ರದಲ್ಲಿ ಕಾಮಿಡಿ, ಫೈಟ್ಸ್‌, ಹಾಡು ಎಲ್ಲವೂ ಇದೆ. ಆದರೆ, ಯಾವುದೂ ಇಲ್ಲಿ ತುರುಕಿದಂತೆ ಭಾಸವಾಗುವುದಿಲ್ಲ. ಯಾವ ಪಾತ್ರಗಳಿಗೆ ಎಷ್ಟು ಮಾನ್ಯತೆ ಕೊಡಬೇಕೆಂಬ ಪಕ್ಕಾ ಲೆಕ್ಕಾಚಾರದೊಂದಿಗೆ ಸಿನಿಮಾವನ್ನು ಕಟ್ಟಿಕೊಟ್ಟ ಪರಿಣಾಮ ಇಲ್ಲಿ ಯಾವುದೂ ಅತಿ ಎನಿಸುವುದಿಲ್ಲ.

ಚಿತ್ರದ ಕೊನೆಯಲ್ಲಿ ಎಲ್ಲಾ ಅಂಶಗಳಿಗೂ ಸ್ಪಷ್ಟ ಉತ್ತರ ನೀಡಿ, ಪ್ರೇಕ್ಷಕರ ತಲೆಯಲ್ಲಿ ತಿರುಗುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇಡೀ ಸಿನಿಮಾ ಸುತ್ತುವುದು ನಾಯಕ ಪುನೀತ್‌ ರಾಜಕುಮಾರ್‌ ಸುತ್ತ. ಈ ಕಥೆಯೇ ನಾಯಕನಿಂದ ಹೆಚ್ಚಿನ ಪರ್‌ಫಾರ್ಮೆನ್ಸ್‌ ಬಯಸಿದೆ. ಅದನ್ನು ಪುನೀತ್‌ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ ಕೂಡಾ. ಹಾರರ್‌, ಕಾಮಿಡಿ, ಫ್ಯಾಮಿಲಿ, ಮಾಸ್‌, ಕ್ಲಾಸ್‌ … ಹೀಗೆ ಎಲ್ಲಾ ಶೇಡ್‌ಗಳಿರುವ ಪಾತ್ರ ಅವರಿಗಿಲ್ಲಿ ಸಿಕ್ಕಿದೆ.

ಪುನೀತ್‌ ರಾಜಕುಮಾರ್‌ ಅವರ ಡ್ಯಾನ್ಸ್‌ ನೋಡೋದೇ ಒಂದು ಚೆಂದ. ಆ ಮಟ್ಟಿಗೆ ಅದ್ಭುತವಾಗಿ ಕುಣಿದಿದ್ದಾರೆ. ಉಳಿದಂತೆ ಚಿತ್ರದಲ್ಲಿ ಇಬ್ಬರು ನಾಯಕಿಯರು. ರಚಿತಾ ರಾಮ್‌ ಹಾಗೂ ಅನುಪಮಾ. ಚಿತ್ರದಲ್ಲಿ ರಚಿತಾ ಅವರಿಗೆ ಹೆಚ್ಚಿನ ದೃಶ್ಯಗಳಿಲ್ಲ. ಇದ್ದಷ್ಟು ಹೊತ್ತು ರಚಿತಾ ಇಷ್ಟವಾಗುತ್ತಾರೆ. ಅನುಪಮಾ ಚಿತ್ರದ ಕಥೆಯ ಕೇಂದ್ರ ಬಿಂದು. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಹಿರಿಯ ನಟಿ ಬಿ.ಸರೋಜಾದೇವಿ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಉಳಿದಂತೆ ರವಿಶಂಕರ್‌, ಪ್ರಭಾಕರ್‌, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಮಾನ್‌ ಸಂಗೀತದ ಹಾಡುಗಳು ಇಷ್ಟವಾಗುತ್ತವೆ. ಛಾಯಾಗ್ರಾಹಕ ವೈದಿ ಕಣ್ಣಲ್ಲಿ “ನಟಸಾರ್ವಭೌಮ’ ಸುಂದರ.

ಚಿತ್ರ: ನಟಸಾರ್ವಭೌಮ
ನಿರ್ಮಾಣ: ರಾಕ್‌ಲೈನ್‌ ವೆಂಕಟೇಶ್‌
ನಿರ್ದೇಶನ: ಪವನ್‌ ಒಡೆಯರ್‌
ತಾರಾಗಣ: ಪುನೀತ್‌ರಾಜಕುಮಾರ್‌, ರಚಿತಾ ರಾಮ್‌, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್‌, ಚಿಕ್ಕಣ್ಣ ಮತ್ತಿತರರು.
 

* ರವಿಪ್ರಕಾಶ್‌ ರೈ


ಈ ವಿಭಾಗದಿಂದ ಇನ್ನಷ್ಟು

  • ನಿರ್ದೇಶಕ ಸುನಿ "ಸಿಂಪಲ್ಲಾಗ್‌ ಒಂದ್‌ ಲವ್‌ಸ್ಟೋರಿ'ಯಿಂದ ಇಲ್ಲಿವರೆಗೆ ಮಾಡಿಕೊಂಡು ಬಂದ ಸಿನಿಮಾಗಳನ್ನು ನೋಡಿದರೆ ಅಲ್ಲಿ ಲವ್‌, ಕಾಮಿಡಿ, ಒಂದಷ್ಟು ಪಂಚಿಂಗ್‌...

  • "ರಹಸ್ಯ ಭೇದಿಸೋಕೆ ಚಾಣಕ್ಯನ ಬುದ್ಧಿವಂತಿಕೆ ಬೇಕಾಗಿಲ್ಲ. ಭೇದಿಸೋ ಕಲೆ ಗೊತ್ತಿರಬೇಕು...' ಮಫ್ಲರ್‌ ಹಾಕಿಕೊಂಡು ಕೆಲ ತಿಂಗಳಿನಿಂದ ತನ್ನನ್ನೇ ಹಿಂಬಾಲಿಸುತ್ತಿರುವ...

  • "ಲೇ ಬೇವರ್ಸಿ ಇನ್ನು ಮುಂದೆ ನೀನಾಗಲಿ, ನಿನ್ನ ಹಂದಿಗಳಾಗಲಿ ಇನ್ನೊಂದು ಸಲ ನನ್ನ ಹೊಲಕ್ಕೇನಾದರೂ ಬಂದರೆ ಬೆಂಕಿ ಹಚ್ಚಿ ಸಾಯಿಸ್‌ ಬಿಡ್ತೀನಿ...' ಚಿತ್ರದ ಆರಂಭದಲ್ಲೇ...

  • ಎರಡು ವರ್ಷಗಳ ಹಿಂದೆ ನಡೆದ ಹಳೆಯ ಐನೂರು, ಒಂದು ಸಾವಿರ ರೂಪಾಯಿಗಳ ನೋಟು ಅಮಾನ್ಯಿàಕರಣ ವಿಷಯ ಅನೇಕ ಚಿತ್ರಗಳಿಗೆ ಸ್ಫೂರ್ತಿಯಾಗಿದ್ದಂತೂ ಸುಳ್ಳಲ್ಲ. ಈಗಾಗಲೇ ನೋಟು...

  • ಈ ದೇಶದ ಮಣ್ಣಲ್ಲಿ ಮುಚ್ಚಿ ಹೋಗಿರುವ ಅನೇಕ ಕಥೆಗಳಲ್ಲಿ ಒಂದನ್ನು ಹುಡುಕಿ ತೆರೆಮೇಲೆ ತೆರೆದಿಡುತ್ತೇವೆ ಎಂದು ಹೊರಟ ಬಹುತೇಕ ಹೊಸ ಪ್ರತಿಭೆಗಳ "ಲಾಕ್‌' ಚಿತ್ರ ಈ...

ಹೊಸ ಸೇರ್ಪಡೆ