ಕೊಟ್ಟಿದ್ದು 14 ಸಾವಿರ ಕೋಟಿ, ವೆಚ್ಚ 13 ಸಾವಿರ ಕೋಟಿ ರೂ.

Team Udayavani, Feb 8, 2019, 6:07 AM IST

ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಹಣ ಹಂಚಿಕೆಯಾಗಿದ್ದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ. ಆ ಹಣ ಖರ್ಚು ಮಾಡುವಲ್ಲಿ ಉಳಿದ ಸ್ಥಳೀಯ ಸಂಸ್ಥೆಗಳಿಗಿಂತ ಹಿಂದುಳಿದಿದ್ದು ಕೂಡ ಬಿಬಿಎಂಪಿಯೇ!

ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ 2014-15ರಿಂದ 2017-18ರವರೆಗೆ ಬಿಬಿಎಂಪಿ, ಜಲಮಂಡಳಿ ಮತ್ತು ಬಿಎಂಆರ್‌ಸಿ ಸೇರಿ ಪ್ರಮುಖ ಮೂರು ಸಂಸ್ಥೆಗಳಿಗೆ ವಿವಿಧ ಯೋಜನೆಗಳಿಗಾಗಿ ರಾಜ್ಯ ಬಜೆಟ್‌ನಲ್ಲಿ 16,392 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು 14 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಖರ್ಚಾಗಿದ್ದು 13 ಸಾವಿರ ಕೋಟಿ ರೂ. ಆದರೆ, ಈ ಪೈಕಿ ಬಿಬಿಎಂಪಿ ಪ್ರದರ್ಶನ ನೀರಸವಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 8,869 ಕೋಟಿ ರೂ. ಮೀಸಲಿಟ್ಟಿದ್ದು, ಈ ಪೈಕಿ 7,648 ಕೋಟಿ ರೂ. ಬಿಡುಗಡೆ ಆಗಿದೆ. ಆದರೆ, ಅದರಲ್ಲಿ ಖರ್ಚಾಗಿರುವ ಹಣ ಪ್ರಸಕ್ತ ಹಣಕಾಸು ವರ್ಷ ಹೊರತುಪಡಿಸಿ 5,078 ಕೋಟಿ ರೂ. ಆದರೆ, ಇದೇ ಅವಧಿಯಲ್ಲಿ ಜಲಮಂಡಳಿ ಮತ್ತು ಬಿಎಂಆರ್‌ಸಿಯು ಹಿಂದಿನ ಬಾಕಿ ಸೇರಿ ಬಿಡುಗಡೆಯಾದ ಒಟ್ಟಾರೆ ಹಣವನ್ನು ಬಳಸಿ ಮುಂಚೂಣಿಯಲ್ಲಿವೆ. 

2015-16 ಹೊರತುಪಡಿಸಿದರೆ, 2014-15ರಿಂದ ಈವರೆಗೆ ಯಾವೊಂದು ವರ್ಷದಲ್ಲೂ ಬಿಡುಗಡೆಯಾದ ಹಣವನ್ನು ನೂರಕ್ಕೆ ನೂರರಷ್ಟು ಖರ್ಚು ಮಾಡಿದ ಉದಾಹರಣೆಗಳಿಲ್ಲ. ಈ ಮಧ್ಯೆ ಖರ್ಚಾಗದೆ ಬಾಕಿ ಉಳಿಸಿದ ಅನುದಾನ ಪ್ರತಿ ವರ್ಷ ಸೇರ್ಪಡೆಗೊಳ್ಳುತ್ತಲೇ ಇದೆ. ಕಳೆದೆರಡು ವರ್ಷಗಳಲ್ಲಿ ಮಹತ್ವಾಕಾಂಕ್ಷಿ ನಗರೋತ್ಥಾನ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಬಿಡುಗಡೆಯಾದ ಹಣದಲ್ಲಿ ಶೇ. 60ರಷ್ಟೂ ಬಳಸಿಲ್ಲ. ಇದು ಯೋಜನೆಗಳ ಅನುಷ್ಠಾನಕ್ಕೆ ಹಿಡಿದ ಕನ್ನಡಿ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ನಗರದ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಡುವ ಅನುದಾನ ಏರಿಕೆ ಕ್ರಮದಲ್ಲೇ ಸಾಗಿದೆ. ಯೋಜನೆಗಳ ಅನುಷ್ಠಾನ ನಿರೀಕ್ಷಿತ ವೇಗದಲ್ಲಿ ಪ್ರಗತಿ ಆಗುತ್ತಿಲ್ಲ. ಅಂಕಿ-ಅಂಶಗಳ ಪ್ರಕಾರ ಅನುದಾನ ಬಳಕೆಯಲ್ಲಿ ಜಲಮಂಡಳಿ ಮುಂದಿದ್ದು, ಕಳೆದ ಐದು ವರ್ಷಗಳಲ್ಲಿ ಸುಮಾರು ಶೇ. 290ರಷ್ಟು ಖರ್ಚು ಮಾಡಿದೆ (ಹಿಂದಿನ ವರ್ಷಗಳಲ್ಲಿ ಬಾಕಿ ಉಳಿದದ್ದೂ ಸೇರಿರುತ್ತದೆ). ಈ ನಿಟ್ಟಿನಲ್ಲಿ ಪಾಲಿಕೆ ಕೂಡ ತುಸು ಚುರುಕಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ.

ಖರ್ಚಾಗದಿರಲು ಕಾರಣ: ಬಿಬಿಎಂಪಿ ಹೀಗೆ ಸಮರ್ಪಕ ಅನುದಾನ ಖರ್ಚು ಮಾಡಲು ಸಾಧ್ಯವಾಗದಿರುವುದಕ್ಕೆ ತಾಂತ್ರಿಕ ಕಾರಣವೂ ಇದೆ. ವರ್ಷದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಸಾವಿರ ಯೋಜನೆಗಳು ಬರುತ್ತವೆ. ಅವೆಲ್ಲವುಗಳ ಅನುಷ್ಠಾನದ ಹೊಣೆ ಕಾರ್ಯನಿರ್ವಹಣಾ ಇಂಜಿನಿಯರ್‌ಗಳದ್ದಾಗಿರುತ್ತದೆ.

ಪ್ರಸ್ತುತ ಇರುವ ಕಾರ್ಯನಿರ್ವಹಣಾ ಇಂಜಿನಿಯರ್‌ಗಳ ಸಂಖ್ಯೆ ಅಂದಾಜು 50. ಒಬ್ಬ ಇಂಜಿನಿಯರ್‌ ಪ್ರತಿ ದಿನ ಮೂರು ಲಕ್ಷ ರೂ. ಬಿಲ್‌ ಮಾಡಿದರೂ, ವರ್ಷಕ್ಕೆ 600 ಕೋಟಿ ರೂ. ಆಗುತ್ತದೆ. ಅತಿ ಶ್ರಮ ಹಾಕಿ, ಇದರ ಮೂರುಪಟ್ಟು ಬಿಲ್‌ ಮಾಡಿದರೂ ಹೆಚ್ಚೆಂದರೆ 1,800 ಕೋಟಿ ರೂ. ಆಗುತ್ತದೆ. ಆದರೆ, ವಾರ್ಷಿಕ ಬಿಡುಗಡೆಯಾಗುವ ಹಣವೇ ಎರಡರಿಂದ ಮೂರು ಸಾವಿರ ಕೋಟಿ ಇರುತ್ತದೆ!

ಈ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಾಸ್ತವಿಕ ಯೋಜನೆ ಮತ್ತು ಅದಕ್ಕೆ ತಕ್ಕಂತೆ ಹಣ ಹಂಚಿಕೆ ಆಗಬೇಕು. ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಲೋಕೋಪಯೋಗಿ (ಪಿಡಬ್ಲ್ಯೂಡಿ)ಯಂತಹ ಇಲಾಖೆಗಳೂ ಒಳಗೊಳ್ಳುವಂತಾಗಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

2014-15ರಿಂದ 2017-18ರವರೆಗೆ ಬಜೆಟ್‌ನಲ್ಲಿ ನೀಡಲಾದ ಹಣ (ಕೋಟಿ ರೂ.ಗಳಲ್ಲಿ)
ಸಂಸ್ಥೆ    ಹಂಚಿಕೆ    ಬಿಡುಗಡೆ    ಖರ್ಚು (ಈ ಹಿಂದೆ ಖರ್ಚಾಗದೆ ಉಳಿದದ್ದೂ ಸೇರಿದೆ)

-ಬಿಬಿಎಂಪಿ    8,869    7,648    5,078 
-ಜಲಮಂಡಳಿ     1,576    730.14    2,140.47 
-ಬಿಎಂಆರ್‌ಸಿ    5,947.33    5,656.48    6,537.45
-ಒಟ್ಟಾರೆ    16,392.33    14,034.62    13,755.92

* ವಿಜಯಕುಮಾರ ಚಂದರಗಿ

https://beta.udayavani.com/district-news/bangalore-city-news/karnataka-state-budget-2019

ಈ ವಿಭಾಗದಿಂದ ಇನ್ನಷ್ಟು

  • ಈ ಬಾರಿ ಬೇಸಿಗೆ ಬೇಗ ಪ್ರಾರಂಭವಾಗಿದೆ. ಬಿಸಿಲಿನ ತೀವ್ರತೆಯೂ ಹೆಚ್ಚಿದೆ. ಮತ್ತೊಂದೆಡೆ ಮಳೆ ಪ್ರಮಾಣ ಇಳಿಮುಖವಾಗಿದೆ. ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ...

  • ಬೆಂಗಳೂರು: ರಾಜಧಾನಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿಯ ಪ್ರಮುಖ ಮೂಳವಾಗಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಳೆದ ಕೆಲ ದಿನಗಳಿಂದ...

  • ಬೆಂಗಳೂರು: "ನಾನು ಕಾಲೇಜು ದಿನಗಳಲ್ಲಿ ಕವಿತೆ ರಚಿಸುತ್ತಿದ್ದೆ.ಆದರೆ ಹುಡುಗಿಯರು ಕವಿತೆಗಳಿಗಿಂತ ಕತೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುವುದನ್ನು ಅರಿತುಕೊಂಡೆ....

  • ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳು, ವಾರೆಂಟ್‌ ಜಾರಿಯಾಗಿರುವ ಆರೋಪಿಗಳು, ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಸೇರಿ 800ಕ್ಕೂ...

  • ಬೆಂಗಳೂರು: "ನೀವು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ' ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕೆಎಸ್‌ಆರ್‌ಟಿಸಿ...

ಹೊಸ ಸೇರ್ಪಡೆ