ರಾಜ್ಯದ 25 ಆಹಾರ ನಿರೀಕ್ಷಕರ ಆಮಾನತು

Team Udayavani, May 29, 2018, 7:40 AM IST

ಬೆಂಗಳೂರು: “ತತ್‌ಕ್ಷಣ ಪಡಿತರ ಚೀಟಿ ನೀಡುವ’ ಸರ್ಕಾರದ ಯೋಜನೆಯನ್ನು ದುರಪಯೋಗಪಡಿಸಿಕೊಂಡು ಅಸರ್ಮಪಕವಾಗಿ 7,296 ಪಡಿತರ ಚೀಟಿ ವಿತರಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 25 ಆಹಾರ ನಿರೀಕ್ಷಕರನ್ನು ಸರ್ಕಾರ ಆಮಾನತುಗೊಳಿಸಿದೆ.

ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿಗಳು ತ್ವರಿತವಾಗಿ ವಿಲೇವಾರಿಗೊಂಡು ಫ‌ಲಾನುಭವಿಗಳಿಗೆ ಆದಷ್ಟು ಬೇಗ ಪಡಿತರ ಚೀಟಿ ಸಿಗಬೇಕು ಎಂಬ ಉದ್ದೇಶದಿಂದ ಆಹಾರ ಇಲಾಖೆ 2018ರ ಫೆ.28ರಿಂದ “ತತ್‌ಕ್ಷಣ ಪಡಿತರ ಚೀಟಿ’ ನೀಡುವ ಯೋಜನೆ ಜಾರಿಗೆ ತಂದಿತ್ತು.

ಈ ಯೋಜನೆಯಂತೆ ಆಹಾರ ನಿರೀಕ್ಷಕರು ಅವರ ವ್ಯಾಪ್ತಿಯ ಗ್ರಾ.ಪಂ.ವ್ಯಾಪ್ತಿವಾರು ಮತ್ತು ನಗರ ಪ್ರದೇಶದ ವಾರ್ಡ್‌ಗಳವಾರು ಅರ್ಹ ಫ‌ಲಾನುಭವಿಗಳಿಂದ ಅರ್ಜಿ ಪಡೆದು, ಅರ್ಜಿದಾರರಿಂದ ಅರ್ಜಿ ಸ್ವೀಕೃತಿ ಪತ್ರ, ಕುಟುಂಬದ ವಾರ್ಷಿಕ ಪ್ರಮಾಣ ಪತ್ರ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಕಾರ್ಡಗಳ ವಿವರವನ್ನು ಪರಿಶೀಲಿಸಿ ಆನ್‌ಲೈನ್‌ ಮೂಲಕವೇ ಆಹಾರ ನಿರೀಕ್ಷಕರ ಲಾಗಿನ್‌ನಲ್ಲಿ ಅರ್ಜಿಯಲ್ಲಿನ ಒಬ್ಬ ಸದಸ್ಯರ ಆಧಾರ್‌ ಬಯೋ ದೃಡೀಕರಣದ ಮೂಲಕ ಅರ್ಜಿದಾರರ ವಿವರಗಳನ್ನು ತೆರೆದು ವಾರ್ಷಿಕ ವರಮಾನದ ವಿವರಗಳನ್ನು ನಮೂದಿಸಿ
ಆದಾಯ ಪ್ರಮಾಣ ಪತ್ರದ ನೈಜತೆಯನ್ನು ಆನ್‌ಲೈನ್‌ನಲ್ಲಿ ದೃಢೀಕರಿಸಿ ಪಡಿತರ ಚೀಟಿ ಅನುಮೋದಿಸಲು ಸೂಚಿಸಿ, ತತಕ್ಷಣ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಆದರೆ, ಒಂದೇ ಆದಾಯ ಪ್ರಮಾಣ ಪತ್ರದ ಸಂಖ್ಯೆ ನಮೂದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗಿರುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರ ಮೂಲಕ ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ತಪ್ಪು ಮಾಡಿರುವುದು ಸಾಬೀತಾದ 25 ಆಹಾರ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ಪರಿಶೀಲನೆ ಕಾರ್ಯ ಮುಂದುವರಿದಿದ್ದು, ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ