ಪಕ್ಷಗಳ ಜಾಹೀರಾತು “ಖಯಾಲಿ’ಗೆ ಹೈಕೋರ್ಟ್‌ ಕಿಡಿ

Team Udayavani, Feb 8, 2019, 6:07 AM IST

ಬೆಂಗಳೂರು: ರಾಜಕೀಯ ಪಕ್ಷಗಳ ಜಾಹೀರಾತು “ಖಯಾಲಿ’ ಬಗ್ಗೆ ಕೆಂಡ ಕಾರಿರುವ ಹೈಕೋರ್ಟ್‌, ರ್ಯಾಲಿಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಎಲ್ಲೆಂದರಲ್ಲಿ ಜಾಹೀರಾತು ಫ‌ಲಕ, ಬ್ಯಾನರ್‌ ಹಾಕುವುದರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.

ನಗರದಲ್ಲಿ ಅನಧಿಕೃತ ಜಾಹೀರಾತುಗಳ ಹಾವಳಿ ನಿಯಂತ್ರಿಸಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಲ್‌.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಬಿಬಿಎಂಪಿಗೆ ಈ ಸೂಚನೆ ನೀಡಿತು.

ಅರ್ಜಿ ವಿಚಾರಣೆ ವೇಳೆ ರಾಜಕೀಯ ಪಕ್ಷಗಳು ರ್ಯಾಲಿ ಸಂದರ್ಭದಲ್ಲಿ ಆ ಕುರಿತು ಜಾಹೀರಾತು ಫ‌ಲಕಗಳನ್ನು ಅಳವಡಿಸುತ್ತವೆ. ಆ ಬಗ್ಗೆ ಯಾವ ಕ್ರಮ ಜರುಗಿಸಲಾಗಿದೆ? ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು. ಅಲ್ಲದೆ, ರಾಜಕೀಯ ಪಕ್ಷಗಳು ತನಗೆ ಸೇರಿದ ಪ್ರದೇಶಗಳಲ್ಲಿ ಜಾಹೀರಾತುಗಳನ್ನು ಅಳವಡಿಸಲಿ.

ಅದು ಬಿಟ್ಟು ಸಾರ್ವಜನಿಕ ಪ್ರದೇಶದಲ್ಲಿ ಅಳವಡಿಸಿ, ಅಲ್ಲಿನ ಸೌಂದರ್ಯ ವಿರೂಪಗೊಳಿಸುವುದು ಸರಿಯಲ್ಲ. ಅಂತಹ ಕೆಲಸದಲ್ಲಿ ತೊಡಗಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ತಪ್ಪಿತಸ್ಥರನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಬಿಬಿಎಂಪಿಗೆ ಮೌಖೀಕವಾಗಿ ಸೂಚಿಸಿತು. 

ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸೋಮವಾರ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ಭರವಸೆ ನೀಡಿದರು. ಅಲ್ಲದೆ, ಜಾಹೀರಾತು ಬೈಲಾ ಕರಡನ್ನು ಅಂತಿಮಗೊಳಿಸಿ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೈಲಾ ಕುರಿತು ರಾಜ್ಯ ಸರ್ಕಾರ ಬಿಬಿಎಂಪಿ ಬಳಿ ಕೆಲವೊಂದು ಸ್ಪಷ್ಟೀಕರಣ ಕೇಳಿತ್ತು.

ಆ ಸ್ಪಷ್ಟೀಕರಣ ಸೇರಿದಂತೆ ಎಲ್ಲಾ ಮಾಹಿತಿ ಒಳಗೊಂಡ ಜಾಹೀರಾತು ಬೈಲಾ ಕರಡನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ ಕರಡು ಆಧಾರದ ಮೇಲೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬಿಬಿಎಂಪಿ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.

ಇದೇ ವೇಳೆ ನಗರ ಪೊಲೀಸ್‌ ಇಲಾಖೆ ಪ್ರಮಾಣಪತ್ರ ಸಲ್ಲಿಸಿ, ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ 2018ರ ಡಿ.8ರಿಂದ 2019ರ ಫೆ.5ರವರೆಗೆ ದಾಖಲಿಸಿದ ಪ್ರಕರಣಗಳ ಕುರಿತು ಮಾಹಿತಿ ನೀಡಿತು. ಜಾಹೀರಾತು ಕಂಪನಿಗಳ ಪರ ವಕೀಲರು ವಾದಿಸಿ, ಜಾಹೀರಾತು ಕ್ಷೇತ್ರದಲ್ಲಿ ಸಾವಿರಾರು ಜನ ಉದ್ಯೋಗ ಮಾಡುತ್ತಿದ್ದಾರೆ.

ಬಿಬಿಎಂಪಿಯು ಜಾಹೀರಾತು ಅಳವಡಿಕೆಯನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಅವರೆಲ್ಲಾ ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಜೀವನಾಧಾರದ ಹಿತದೃಷ್ಟಿಯಿಂದ ಸೂಕ್ತ ಆದೇಶ ಹೊರಡಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರವು ಜಾಹೀರಾತು ಬೈಲಾವನ್ನು ಅಂತಿಮಗೊಳಿಸುವವರೆಗೂ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿತು.

https://beta.udayavani.com/district-news/bangalore-city-news/indiranagar-residents-who-listen

ಈ ವಿಭಾಗದಿಂದ ಇನ್ನಷ್ಟು

  • ಈ ಬಾರಿ ಬೇಸಿಗೆ ಬೇಗ ಪ್ರಾರಂಭವಾಗಿದೆ. ಬಿಸಿಲಿನ ತೀವ್ರತೆಯೂ ಹೆಚ್ಚಿದೆ. ಮತ್ತೊಂದೆಡೆ ಮಳೆ ಪ್ರಮಾಣ ಇಳಿಮುಖವಾಗಿದೆ. ಪರಿಣಾಮ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ...

  • ಬೆಂಗಳೂರು: ರಾಜಧಾನಿ ಬೆಂಗಳೂರಿನ ತ್ಯಾಜ್ಯ ವಿಲೇವಾರಿಯ ಪ್ರಮುಖ ಮೂಳವಾಗಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕಳೆದ ಕೆಲ ದಿನಗಳಿಂದ...

  • ಬೆಂಗಳೂರು: "ನಾನು ಕಾಲೇಜು ದಿನಗಳಲ್ಲಿ ಕವಿತೆ ರಚಿಸುತ್ತಿದ್ದೆ.ಆದರೆ ಹುಡುಗಿಯರು ಕವಿತೆಗಳಿಗಿಂತ ಕತೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುವುದನ್ನು ಅರಿತುಕೊಂಡೆ....

  • ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳು, ವಾರೆಂಟ್‌ ಜಾರಿಯಾಗಿರುವ ಆರೋಪಿಗಳು, ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಸೇರಿ 800ಕ್ಕೂ...

  • ಬೆಂಗಳೂರು: "ನೀವು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ' ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಕೆಎಸ್‌ಆರ್‌ಟಿಸಿ...

ಹೊಸ ಸೇರ್ಪಡೆ