ಬಜಪೆ ಗ್ರಾ.ಪಂ.: ನೀರು ಇಂಗಲು, ಸ್ವಚ್ಛತೆಗೆ ದ್ರವ ತ್ಯಾಜ್ಯಗುಂಡಿ

Team Udayavani, Feb 8, 2019, 4:22 AM IST

ಬಜಪೆ : ನರೇಗಾ ಯೋಜನೆ ಯಡಿಯಲ್ಲಿ ದ್ರವತ್ಯಾಜ್ಯ ಗುಂಡಿಗೆ (ಸೋಕ್‌ ಪಿಟ್) ಅವಕಾಶವಿದ್ದು, ಬಜಪೆ ಗ್ರಾ.ಪಂ. ಇದನ್ನು ಸದ್ಬಳಕೆ ಮಾಡಲು ಮುಂದಾಗಿದೆ.

ಪರಿಸರ ಸ್ವಚ್ಛತೆ, ಆರೋಗ್ಯದ ದೃಷ್ಟಿ ಯಿಂದ ಗ್ರಾಮ ಪಂಚಾಯತ್‌ ನರೇಗಾ ಯೋಜನೆಯಡಿಯಲ್ಲಿ 21 ದ್ರವ ತ್ಯಾಜ್ಯಗುಂಡಿ ಈಗಾಗಲೇ ಐದನೇ ವಾರ್ಡ್‌ ನಲ್ಲಿ ನಿರ್ಮಿಸಲಾಗಿದೆ.

ತ್ಯಾಜ್ಯ ನೀರಿನ ಇಂಗು ಗುಂಡಿ
ಈ ದ್ರವತ್ಯಾಜ್ಯ ಗುಂಡಿಗೆ ಅಡುಗೆ ಮನೆಯ ತ್ಯಾಜ್ಯ ನೀರು, ಕೈತೊಳೆದ, ಸ್ನಾನ ಮಾಡಿದ ನೀರನ್ನು ಬಿಡಲಾಗುತ್ತದೆ. ಇದರಿಂದ ಆ ಗುಂಡಿಯಲ್ಲಿ ನೀರು ಇಂಗುವಂತೆ ಮಾಡಲಾಗುತ್ತದೆ. ಮನೆ ಪರಿಸರ ಅಥವಾ ಚರಂಡಿಗೆ ತ್ಯಾಜ್ಯ ನೀರು ಹೋಗುವುದನ್ನು ನಿಲ್ಲಿಸಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ.

ಜಲ ಮರುಪೂರಣಕ್ಕೆ ಸಾಧ್ಯ
ತ್ಯಾಜ್ಯ ನೀರು ಮನೆ ಪರಿಸರದಲ್ಲಿ ನಿಲ್ಲದಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಿಲ್ಲ. ಚರಂಡಿಗೆ ಮನೆ ನೀರು ಬಿಡದಿರುವುದರಿಂದ ದುರ್ವಾಸನೆಗೆ ಆಸ್ಪದ ಇಲ್ಲ. ಹಾಗಾಗಿ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗಲಿದೆ. ಇದರಿಂದ ಜಲ ಮರಪೂರಣವೂ ಸಾಧ್ಯವಾಗಲಿದೆ.

ಈ ಗುಂಡಿ ಮನೆಯ ಪಕ್ಕದಲ್ಲಿ ಮಾಡಲಾಗುತ್ತದೆ. ಇದು 6 ಅಡಿ ಅಗಲ, 4 ಅಡಿ ಉದ್ದ, 6 ಅಡಿ ಆಳವಿರುತ್ತದೆ. ನರೇಗಾ ಯೋಜನೆಯಡಿಯಲ್ಲಿ ಒಟ್ಟು 14ಸಾವಿರ ರೂ. ಇದಕ್ಕೆ ನೀಡಲಾಗುತ್ತದೆ.

ಅರೆಕಲ್ಲು, ಪೊರ್ಕೋಡಿ ದ್ವಾರ, ಅರ್ಲ, ಪಾದೆಮನೆ, ಕುಂಟಲ ಬಲ್ಲೆ, ಮುಂಡಾರು, ತಾರಿಕಂಬ್ಳ ಜಂಕ್ಷನ್‌, ಚೆಕ್‌ ಪೋಸ್ಟ್‌, ಕೊಂಚಾರ್‌, ಕೊಂಚಾರ್‌ ಮಸೀದಿ ಬಳಿ, ಕೊಂಚಾರ್‌ ಆಶ್ರಯ ಕಾಲನಿ, ಶಾಂತಿಗುಡ್ಡೆ, ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ಪಂಚಾಯತ್‌ ಸದಸ್ಯರಾದ ಆಯಿಷಾ ನೇತೃತ್ವದಲ್ಲಿ ವೇದಾವತಿ, ಸಾಹುಲ್‌ ಹಮೀದ್‌, ಸುರೇಂದ್ರ ಪೆರ್ಗಡೆ ಸಹಕಾರದಿಂದ ಮನೆಮನೆಗೆ ತೆರಳಿ ಜನರ ಅವರ ಮನವೊಲಿಸಿ 21 ಮನೆಗಳಲ್ಲಿ ನರೇಗಾ ಯೋಜನೆಯ ಮುಖಾಂತರ ಈ ಗುಂಡಿಯನ್ನು ನಿರ್ಮಿಸಲು ಸಾಧ್ಯವಾಗಿದೆ.

15 ಗುಂಡಿ ನಿರ್ಮಿಸುವ ಉದ್ದೇಶ
ಈಗಾಗಲೇ 21 ದ್ರವ ತ್ಯಾಜ್ಯ ಗುಂಡಿ ನಿರ್ಮಿಸಲಾಗಿದೆ. ಪರಿಸರದ ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವಲ್ಲಿ ಇದು ಮಹತ್ವದ ಯೋಜನೆಯಾಗಿದೆ. ಸ್ವಚ್ಛ ಭಾರತ ಪರಿಕಲ್ಪನೆಗೆ ಇದು ಒಂದು ಹೆಜ್ಜೆಯಾಗಿದೆ. 15 ಸೋಕ್‌ ಪಿಟ್ನ್ನು ಮಾಡುವ ಉದ್ದೇಶವಿದೆ.
 – ಆಯಿಷಾ, ಗ್ರಾ. ಪಂ. ಸದಸ್ಯೆ

ಆರೋಗ್ಯ ದೃಷ್ಟಿಯಿಂದ ಉತ್ತಮ
ಬಜಪೆ ಗ್ರಾಮಸ್ಥರ ಸಹಕಾರದಿಂದ ಈ ಯೋಜನೆಯಡಿಯಲ್ಲಿ ದ್ರವ ತ್ಯಾಜ್ಯ ಗುಂಡಿ ಮಾಡಲಾಗಿದೆ. ಪಂಚಾಯತ್‌ ಈ ಬಗ್ಗೆ ಸಹಕಾರ ನೀಡುತ್ತದೆ. ಇದು ಗ್ರಾ.ಪಂ.ನ ಸ್ವಚ್ಛತೆ ಹಾಗೂ ಆರೋಗ್ಯ ದೃಷ್ಟಿಯಲ್ಲಿ ಹೆಚ್ಚು ಮಹತ್ವ ಪಡೆದಿದೆ.
ಬಜಪೆ ಗ್ರಾ.ಪಂ. ಅಧ್ಯಕ್ಷೆ

•ಸುಬ್ರಾಯ ನಾಯಕ್‌ ಎಕ್ಕಾರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ