ಬೋರ್‌ವೆಲ್‌, ಪಾಲಿಕೆ ನೀರೇ ಆಧಾರ

Team Udayavani, Feb 8, 2019, 4:34 AM IST

ಚೇಳಾೖರು : ಮಹಾನಗರ ಪಾಲಿಕೆ ಗಡಿಗೆ ತಾಗಿಕೊಂಡಿರುವ ಚೇಳಾೖರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಂದಿ ನದಿಯ ಉಪ್ಪು ನೀರಿನ ಸಮಸ್ಯೆ ಇರುವುದರಿಂದ ಸ್ಥಳೀಯ ಕೆಲವು ಬಾವಿಗಳಲ್ಲಿನ ಕುಡಿಯುವ ನೀರು ಬಳಕೆ ಸಿಗದೇ ಇರುವುದರಿಂದ ಇಲ್ಲಿನ ಜನತೆಗೆ ಬೋರ್‌ವೆಲ್‌, ಪಾಲಿಕೆ ನೀರೇ ಆಧಾರ. ಪಂಚಾಯತ್‌ ಕೊರೆಯಿಸಿದ ಕೆಲವು ಬಾವಿಗಳ ನೀರು ಗ್ರಾಮಕ್ಕೆ ಜೀವನಾಧಾರ. ಚೇಳಾೖರು ಎಂಆರ್‌ಪಿಎಲ್‌ ಪುನರ್ವಸತಿ ಕಾಲನಿ ಇರುವ ಪ್ರದೇಶ, ಜತೆಗೆ ತಗ್ಗು ಪ್ರದೇಶದಲ್ಲಿ ಒಂದಿಷ್ಟು ಕೃಷಿ, ತೋಟ ಇದೆ. ಸಮೃದ್ಧ ನೀರಿನ ಪ್ರದೇಶವಾದ ಬಾಳ, ಕಳವಾರಿನಿಂದ ಬಂದ ಜನರಿಗೆ ಎಂಆರ್‌ಪಿಎಲ್‌ 27 ವರ್ಷಗಳ ಹಿಂದೆ ಆಶ್ರಯ ಕಲ್ಪಿಸಿದ್ದು ಚೇಳೈರಿನಲ್ಲಿ.

ಕಡಿಮೆ ನೀರು ಪೂರೈಕೆ
ಚೇಳಾೖರು ಪುನರ್ವಸತಿ ಕಾಲನಿಯಲ್ಲಿ ಸುಮಾರು 325ಕ್ಕೂ ಹೆಚ್ಚು ಮನೆಗಳಿವೆ. ಇವುಗಳಿಗೆ ನೀರು ಪೂರೈಸಲು ಓವರ್‌ ಹೆಡ್‌ ಟ್ಯಾಂಕ್‌ ಇದ್ದು, ಕಾಟಿಪಳ್ಳ ಮೂಲಕ ಮಹಾನಗರ ಪಾಲಿಕೆಯಿಂದ ನೀರು ಪೂರೈಸಲು ಪೈಪ್‌ಲೈನ್‌ ಅಳವಡಿಕೆಯಾಗಿದೆ. ಅಗತ್ಯಕ್ಕಿಂತ ಕಡಿಮೆ ನೀರು ಪೂರೈಕೆಯಾಗುತ್ತಿದೆ.

ಚೇಳಾೖರಿನಲ್ಲಿ ಮನೆಗಳ ಸಂಖ್ಯೆ 1300ಕ್ಕೂ ಹೆಚ್ಚಿದೆ. ಚೇಳೈರು ಹಾಗೂ ಮಧ್ಯ ಗ್ರಾಮದಲ್ಲಿ ಅಷ್ಟಾಗಿ ನೀರಿನ ಬವಣೆ ಇಲ್ಲದಿದ್ದರೂ ಈ ಹಿಂದೆ ತೋಡಿದ ಬಾವಿಗಳು ಕಾಲನಿ ಉಪಯೋಗಕ್ಕೆ ಸಿಗಲಿಲ್ಲ. ಇದೀಗ ಹೊಸ ಬಾವಿ ತೋಡಲಾಗಿದೆ. ಇದಕ್ಕೆ ಎಂಆರ್‌ಪಿಎಲ್‌ 23 ಲಕ್ಷ ರೂ ಅನುದಾನ ನೀಡಿದೆ. ಇದರ ಜತೆ ಬೋರ್‌ವೆಲ್‌ಗ‌ಳನ್ನೂ ಕೊರೆಸಲಾಗಿದೆ.

ನೀರು ಪೂರೈಕೆ ಸೀಮಿತ
ದಿನಕ್ಕೆ ಅರ್ಧ, ಒಂದು ಗಂಟೆ ಈ ನೀರಿನ ಪೂರೈಕೆ ಸೀಮಿತ. ಅದರಲ್ಲೂ ಒಂದಿಷ್ಟು ಕಲ್ಮಶ ಕೂಡ ಬರುತ್ತದೆ. 22 ವರ್ಷಗಳಿಂದ ಮಳೆಗಾಲ ಮುಗಿಯುತ್ತಲೇ ನೀರಿನ ಬವಣೆಯನ್ನು ಇಲ್ಲಿನ ಜನ ಎದುರಿಸುತ್ತಲೇ ಬಂದಿದ್ದಾರೆ.ಆದರೆ ಈ ಬಾರಿ ಒಂದಿಷ್ಟು ಕುಡಿಯುವ ನೀರಿನ ಯೋಜನೆ ಜಾರಿಯಾಗಿದ್ದು, ಸಮಸ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ. ಆದರೂ ಎಪ್ರಿಲ್‌, ಮೇ ತಿಂಗಳಲ್ಲಿ ಅಗತ್ಯ ಬಿದ್ದರೆ ಟ್ಯಾಂಕರ್‌ ಮೂಲಕ ನೀರಿನ ಸರಬರಾಜಿಗೆ ಪಂಚಾಯತ್‌ ಸಿದ್ಧಗೊಂಡಿದೆ.

23 ಲಕ್ಷ. ರೂ.ಅನುದಾನ
ಎಂಆರ್‌ಪಿಎಲ್‌ 23 ಲಕ್ಷ ರೂ. ನೀಡಿ ಬಾವಿ ಕೊರೆಯಲು ಸಹಕಾರ ನೀಡಿದೆ. ನೇತ್ರಾವತಿ ನೀರು ಪೂರೈಕೆಗೆ ಪಂಪ್‌ ಹೌಸ್‌ ಸಹಿತ ಎಲ್ಲ ವ್ಯವಸ್ಥೆ ಮಾಡಿ ಪಾಲಿಕೆಗೆ ನಿರ್ವಹಣೆಗೆ ಬಿಟ್ಟು ಕೊಟ್ಟಿತ್ತು. 3 ಲಕ್ಷ ಲೀ. ನಿತ್ಯ ಬಿಡಬೇಕು ಎಂಬ ಒಪ್ಪಂದವೂ ಆಗಿತ್ತು. ಆದರೆ 50 ಸಾವಿರ ಲೀ. ವರೆಗೆ ಬಿಡಲು ಮಾತ್ರ ಪಾಲಿಕೆ ಶಕ್ತವಾಗಿದೆ. ಇದರ ನಡುವೆ ಕಾಲನಿಗೆ ಬಿಡುವ ನೀರು ಕಾಟಿಪಳ್ಳ, ಕೃಷ್ಣಾಪುರಕ್ಕೂ ಟ್ಯಾಪಿಂಗ್‌ ಮಾಡಲಾಗುತ್ತದೆಯಾದ್ದರಿಂದ ಬೋರ್‌ವೆಲ್‌ ನೀರು ನೀಡುವುದು ನಮಗೆ ಅನಿವಾರ್ಯ. ಚೇಳಾೖರು ಇದೀಗ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ನೀರಿನ ಪೂರೈಕೆ ಒತ್ತಡವೂ ಹೆಚ್ಚುತ್ತ್ತ ಹೋಗುತ್ತಿದೆ. ಪಂ. ಸಾಧ್ಯವಾದಷ್ಟು ಮಟ್ಟಿಗೆ ನೀರಿನ ಪೂರೈಕೆ ಸಮಸ್ಯೆ ಎದುರಾ ಗದಂತೆ ಕ್ರಮ ಕೈಗೊಂಡಿದೆ.
– ಜಯಾನಂದ, ಅಧ್ಯಕ್ಷರು,
ಗ್ರಾ.ಪಂ.

ತೊಂದರೆ ಆಗದಂತೆ ಕ್ರಮ
ಗ್ರಾ.ಪಂ.ವ್ಯಾಪ್ತಿಯಲ್ಲಿ ಬಾವಿ, ಬೋರ್‌ವೆಲ್‌ ಮೂಲಕ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಎಪ್ರಿಲ್‌, ಮೇ ಸಂದರ್ಭ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ.
– ವಿಶ್ವನಾಥ್‌, ಪಿಡಿಒ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ