ಕಡಬ ಕೇಂದ್ರಿತವಾಗಿ ಅನುಷ್ಠಾನವಾಗಲಿ ಶಾಶ್ವತ ನೀರು ಸರಬರಾಜು

Team Udayavani, Feb 8, 2019, 4:44 AM IST

ಕಡಬ: ಬೇಸಗೆಯ ಬಿಸಿ ಏರುತ್ತಿರುವಂತೆಯೇ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗುವುದು ಸಹಜ. ಕುಡಿಯುವ ನೀರಿಗಾಗಿ ಅವಲಂಬಿಸಿರುವ ಕೊಳವೆ ಬಾವಿಗಳು ಬತ್ತಿ ಹೋಗಿ ನೀರಿಲ್ಲದೆ ಜನ ಪರದಾಡುವಂತಾಗಿದೆ. ಕಡಬ ಕೇಂದ್ರಿತವಾಗಿ ಅನುಷ್ಠಾನವಾಗ ಬೇಕಿದ್ದ, ಪರಿಸರದ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಬಲ್ಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮೀಕ್ಷೆ ಹಂತದಲ್ಲಿಯೇ ಇದೆ.

ಕಡಬ ಪರಿಸರವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 5 ವರ್ಷಗಳ ಹಿಂದೆ ರಾಜ್ಯ ಸರಕಾರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಿತು.

ಕಡಬ ಸಹಿತ ಹತ್ತಿರದ 13 ಗ್ರಾಮಗಳಿಗೆ ದೊಡ್ಡ ಪ್ರಮಾಣದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಮುಂದಾಗಿತ್ತು. ಅದಕ್ಕಾಗಿ ಬೆಂಗಳೂರಿನ ಸ್ಪೇಸ್‌ ಜಿಯೋಟೆಕ್‌ ಸಂಸ್ಥೆಯ ತಂತ್ರಜ್ಞರು ಕಡಬ ಪರಿಸರದಲ್ಲಿ ಪ್ರಾಥಮಿಕ ಸಮೀಕ್ಷೆಯನ್ನೂ ನಡೆಸಿದ್ದರು. ನೀರಿನ ಮೂಲವಾಗಿರುವ ಕುಮಾರಧಾರಾ ಹೊಳೆಯ ಪಾಲೋಳಿ (ಪಿಜಕ್ಕಳ), ಪುಳಿಕಕ್ಕು (ಕೋಡಿಂಬಾಳ) ಹಾಗೂ ಗುಂಡ್ಯ ಹೊಳೆಯ ಹೊಸಮಠ (ಕುಟ್ರಾಪ್ಪಾಡಿ) ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ನೀರು ಸಂಗ್ರಹಿಸಲು ಟ್ಯಾಂಕ್‌ ನಿರ್ಮಿಸಲು ಅಗತ್ಯವಿರುವ ಎತ್ತರ ಪ್ರದೇಶಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

13 ಗ್ರಾಮಗಳಿವು
ಕಡಬ ಕೇಂದ್ರವಾಗಿ ಪರಿಸರದ 13 (ಕಡಬ, ಕೋಡಿಂಬಾಳ, ಕುಟ್ರಾಪ್ಪಾಡಿ, ಬಲ್ಯ, ಮರ್ಧಾಳ, 102ನೇ ನೆಕ್ಕಿಲಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಐತ್ತೂರು, ಕೊಣಾಜೆ, ಬಿಳಿನೆಲೆ, ಕೊಂಬಾರು ಹಾಗೂ ಶಿರಿಬಾಗಿಲು) ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಸರಬರಾಜಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ಸಮೀಕ್ಷೆ ನಡೆದು 5 ವರ್ಷಗಳು ಕಳೆದರೂ ಯೋಜನೆಯ ವಿಚಾರದಲ್ಲಿ ಮುಂದೆ ಯಾವುದೇ ಚಟುವಟಿಕೆಗಳು ಮಾತ್ರ ನಡೆಯಲೇ ಇಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆಗೆ ಹಿನ್ನಡೆಯಾಗಿದೆ ಎಂದು ನಾಗರಿಕರು ಹೇಳುತ್ತಾರೆ.

ನದಿಯ ನೀರು ಬಳಸಬಹುದು
ಕಡಬ ಪರಿಸರದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ನದಿಗಳ ನೀರನ್ನು ಬಳಸಲು ಸಾಧ್ಯವಿದೆ. ಹತ್ತಿರದಲ್ಲಿಯೇ ಹರಿಯುತ್ತಿರುವ ಕುಮಾರಧಾರಾ ಹಾಗೂ ಗುಂಡ್ಯ ಹೊಳೆಯ ಕೆಲವು ಕಡೆ ಆಳವಾದ ಜಾಗಗಳಲ್ಲಿ ಬೇಸಗೆಯಲ್ಲಿಯೂ ಹೇರಳ ನೀರು ಸಂಗ್ರವಿರುತ್ತದೆ. ಆ ನೀರನ್ನು ಬಳಸಿಕೊಂಡು ಪೈಪ್‌ಲೈನ್‌ ಮೂಲಕ ಎತ್ತರದ ಪ್ರದೇಶಗಳ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಜನರಿಗೆ ಪೂರೈಸಬಹುದಾಗಿದೆ.

ಜಲಧಾರೆ ಯೋಜನೆಗೆ ಚಿಂತನೆ
ಕಡಬ ಭಾಗದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ಒಂದು ಬಾರಿ ಸಮೀಕ್ಷೆ ನಡೆಸಲಾಗಿದ್ದರೂ, ಬಳಿಕ ಯಾವುದೇ ಪ್ರಗತಿಯಾಗಿಲ್ಲ. ಮುಂದೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬದಲು ಜಲಧಾರ ಎನ್ನುವ ಯೋಜನೆಯನ್ನು ಜಾರಿಗೊಳಿಸಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಆ ಯೋಜನೆಯಡಿ ಕಡಬ ಕೇಂದ್ರಿತವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ.
– ಸತ್ಯೇಂದ್ರ ಸಾಲಿಯಾನ್‌, ಜಿ.ಪಂ. ಎಇಇ, ಪುತ್ತೂರು

ಸಾಕಷ್ಟು ನಿರೀಕ್ಷೆ
ಕೊಳವೆ ಬಾವಿಗಳನ್ನು ಎಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ಸ್ವಲ್ಪಮಟ್ಟಿಗೆ ನೀರು ಸಿಕ್ಕಿದರೂ ಬೇಸಗೆಯಲ್ಲಿ ಬತ್ತಿ ಹೋಗುತ್ತಿದೆ. ಪರ್ಯಾಯ ವ್ಯವಸ್ಥೆ ಆಗಲೇಬೇಕಿದೆ. ನದಿಗಳಿಂದ ನೀರು ಸಂಗ್ರಹಿಸಿ ಪೂರೈಸುವ ಯೋಜನೆಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕಡಬ ಜಿ.ಪಂ. ವ್ಯಾಪ್ತಿಯಲ್ಲಿ ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 40 ಲಕ್ಷ ರೂ. ಅನುದಾನದಲ್ಲಿ ಹಳೆಯ ನೀರಿನ ಸ್ಥಾವರಗಳ ಪುನಶ್ಚೇತನ ಹಾಗೂ ಅಗತ್ಯವಿರುವಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
 – ಪಿ.ಪಿ. ವರ್ಗೀಸ್‌, ಜಿ.ಪಂ. ಸದಸ್ಯರು, ಕಡಬ

ನಾಗರಾಜ್‌ ಎನ್‌.ಕೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ