ಇಂಡಿ ಪಂಪ್‌-ಉಣಕಲ್ಲ ರಸ್ತೆಗೆ ಭೂ ಗ್ರಹಣ!

Team Udayavani, Feb 28, 2019, 11:42 AM IST

ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿಯಲ್ಲಿ (ಸಿಆರ್‌ಎಫ್) ಕೈಗೊಂಡಿರುವ ಇಂಡಿ ಪಂಪ್‌-ಉಣಕಲ್ಲ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಗ್ರಹಣ ಹಿಡಿದಿದ್ದು, ಅರ್ಧಂಬರ್ಧ ನಿರ್ಮಾಣವಾಗಿರುವ ರಸ್ತೆ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.

ಇಂಡಿಪಂಪ್‌ನಿಂದ ಉಣಕಲ್ಲವರೆಗೆ ಸುಮಾರು 40 ಕೋಟಿ ವೆಚ್ಚದಲ್ಲಿ ಸಿಆರ್‌ಎಫ್ ನಿಧಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, ಅಲ್ಲಲ್ಲಿ ಭೂ ಸ್ವಾಧೀನ ಅನಿವಾರ್ಯವಾಗಿರುವುದು ವಿಳಂಬಕ್ಕೆ ಕಾರಣವಾಗಿದೆ. ರಸ್ತೆಗಾಗಿ ಸುಮಾರು 2 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಿದೆ. ಇಷ್ಟೊತ್ತಿಗಾಗಲೇ ಪೂರ್ಣಗೊಳ್ಳಬೇಕಾದ ರಸ್ತೆ ಭೂ ಸ್ವಾಧೀನ ವಿಳಂಬದಿಂದ ಸಾಕಷ್ಟು ಬಾಕಿ ಉಳಿದಿದೆ. ಭೂ ಸ್ವಾಧೀನ ಪ್ರಕ್ರಿಯೆ, ಮೂಲ ಸೌಲಭ್ಯಗಳ ಸ್ಥಳಾಂತರ ನಂತರ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಾದ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದರಿಂದ ಈ ರಸ್ತೆ
ಯಮನ ಸ್ವರೂಪಿಯಾಗಿ ಪರಿಣಮಿಸಿದೆ.

ಭೂ ಸ್ವಾಧೀನ ಸುಲಭವಿಲ್ಲ: ಕೆಲವು ಕಡೆ ಸರಕಾರಿ ಜಾಗ, ಮಹಾನಗರ ಪಾಲಿಕೆ ಜಾಗ ಇರುವೆಡೆ ಹೆಚ್ಚು ತೊಂದರೆಯಿಲ್ಲ. ಆದರೆ ತತ್ವದರ್ಶ ಆಸ್ಪತ್ರೆ ಪಕ್ಕದಲ್ಲಿ ಕೃಷಿ ಜಮೀನು, ಲೇಔಟ್‌ ಹಾಗೂ ಖಾಸಗಿ ಭೂಮಿಯಿದೆ. ಇನ್ನು ಹೆಗ್ಗೇರಿ ಭಾಗದಲ್ಲಂತೂ ರಸ್ತೆ ಅಕ್ಕಪಕ್ಕದಲ್ಲಿ ಮನೆಗಳಿರುವುದರಿಂದ ಭೂ ಸ್ವಾಧೀನ ಅಷ್ಟೊಂದು ಸುಲಭವಲ್ಲ ಎನ್ನುವಂತಾಗಿದೆ. ಈ ಎಲ್ಲಾ ವಿವರಗಳನ್ನು ಕ್ರೋಡೀಕರಿಸಿ ಭೂಸ್ವಾಧೀನಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಯಾವುದೇ ಸ್ಪಷ್ಟ ಚಿತ್ರಣ ದೊರೆತಿಲ್ಲ. ಭೂ ಸ್ವಾಧೀನಕ್ಕೆ ಸರಕಾರದಿಂದ ಅನುಮತಿ ಹಾಗೂ ಅನುದಾನ ಬೇಕಿರುವುದರಿಂದ ಸದ್ಯಕ್ಕೆ ನಿರೀಕ್ಷಿಸಿದಂತೆ ದೊಡ್ಡ ರಸ್ತೆ ನಿರ್ಮಾಣ ಅಸಾಧ್ಯ ಎನ್ನುವುದು ಸ್ಥಳೀಯ ಪಾಲಿಕೆ ಸದಸ್ಯರ ಅಭಿಪ್ರಾಯವಾಗಿದೆ.

ರಸ್ತೆ ಅರ್ಧಂಬರ್ಧ: ಯಾವುದೇ ಅಡೆತಡೆ ಇಲ್ಲದ ಕಡೆಗಳಲ್ಲಿ ರಸ್ತೆ ನಿರ್ಮಿಸಿ ಮುಂದೆ ಭೂ ಸ್ವಾಧೀನ ಸೇರಿದಂತೆ ಮೂಲ ಸೌಲಭ್ಯಗಳ ಸ್ಥಳಾಂತರ ಮಾಡದ ಕಡೆಗಳಲ್ಲಿ ಹಾಗೆ ಬಿಡಲಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಓಡಾಡಬೇಕಾದರೆ ಮೈಯಲ್ಲಾ ಕಣ್ಣಾಗಿಸಿಕೊಂಡು ಸಂಚರಿಸಬೇಕು. ವಾಯವ್ಯ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿಯ ಹಿಂಭಾಗದಲ್ಲಂತೂ ರಸ್ತೆಯ ಅಧ್ವಾನ ಹೇಳ ತೀರದು. ಅಲ್ಲಿ ರಸ್ತೆ ಬಾಕಿ ಇರುವಾಗಲೇ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕೆಲವೆಡೆ ರಸ್ತೆಗಿಂತ ಮೂರು ಅಡಿಗೂ ಎತ್ತರದಲ್ಲಿ ಚರಂಡಿ ನಿರ್ಮಿಸಲಾಗಿದೆ. ರಸ್ತೆಗಿಂತ ಅರ್ಧ ಅಡಿ ಮಾತ್ರ ಚರಂಡಿ ಇರಬೇಕೆನ್ನುವ ನಿಯಮ ಪಾಲನೆ ಕಾಣುತ್ತಿಲ್ಲ.

ರಸ್ತೆ ಮಧ್ಯೆ ಕಂಬ: ಭೂ ಸ್ವಾಧೀನ ಒಂದೆಡೆಯಾದರೆ ಮೂಲ ಸೌಲಭ್ಯಗಳ ಸ್ಥಳಾಂತರಗೊಂಡಿಲ್ಲ. ರಸ್ತೆಯುದ್ದಕ್ಕೂ ಬಹುತೇಕ ಕಡೆ ವಿದ್ಯುತ್‌ ಕಂಬಗಳು ಸ್ಥಳಾಂತರಗೊಳಿಸಲಿಲ್ಲ. ಪರಿಣಾಮ ವಿದ್ಯುತ್‌ ಕಂಬಗಳೆಲ್ಲಾ ರಸ್ತೆಯ ಮಧ್ಯೆ ಭಾಗದಲ್ಲಿದ್ದು, ಕಂಬಗಳನ್ನು ಬಿಟ್ಟು ರಸ್ತೆ ಕಾಮಗಾರಿ ನಡೆಸಲಾಗಿದೆ. ಕಂಬದ ಸುತ್ತಲೂ ಹೊಂಡ ಮಾಡಿ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಈ ರಸ್ತೆ ನಿರ್ಮಾಣ ಸ್ಥಳೀಯ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದ್ದು, ಅವ್ಯವಸ್ಥೆಯ ಆಗರವಾಗಿದೆ.

ಗುತ್ತಿಗೆದಾರರ ನಿರ್ಲಕ್ಷ: ಇಷ್ಟೆಲ್ಲಾ ಗೊಂದಲಗಳಿಂದ ರಸ್ತೆ ಕಾಮಗಾರಿ ಅಲ್ಲಲ್ಲಿ ಸ್ಥಗಿತಗೊಂಡಿದ್ದು, ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್‌ ಘಟಕದೆದುರು ರಸ್ತೆ ಅಗೆಯಲಾಗಿದ್ದು, ಸಿಕ್ಕ ರಸ್ತೆಯಲ್ಲೇ ದ್ವಿಮುಖವಾಗಿ ವಾಹನಗಳು ಸಂಚರಿಸಬೇಕಿದೆ. ಸ್ವಲ್ಪ ಯಾಮಾರಿದರೆ ಸಾಕು ತೆಗೆದಿರುವ ಹೊಂಡಕ್ಕೆ ವಾಹನಗಳು ಬೀಳ್ಳೋದು ನಿಶ್ಚಿತ. ಈ ಕುರಿತು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸುರಕ್ಷತೆ ಕ್ರಮ ಕೈಗೊಂಡಿಲ್ಲ.

ರಸ್ತೆ ನಿರ್ಮಾಣ ಹಾಗೂ ಗುತ್ತಿಗೆದಾರರಿಗೆ ಬಿಲ್‌ ಪಾಸ್‌ ಮಾಡುವುದೊಂದೇ ನಮ್ಮ ಕೆಲಸ ಎನ್ನುವ ಮನಸ್ಥಿತಿಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಎಂಜಿನಿಯರ್‌ಗಳು ಇದ್ದಂತೆ ಕಾಣುತ್ತಿದೆ. ಇನ್ನೂ ಸಿಆರ್‌ ಎಫ್ ಯೋಜನೆಯ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬಿಡುಗಡೆಯಾಗದಿರುವುದು ಗುತ್ತಿಗೆದಾರರಿಗೆ ಯಾವುದೇ ಸೂಚನೆ ನೀಡದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜನಪ್ರತಿನಿಧಿಗಳ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದಾಗಿದೆ.

ಭೂ ಸ್ವಾಧೀನ, ಮೂಲ ಸೌಲಭ್ಯಗಳ ಸ್ಥಳಾಂತರ ನಮ್ಮ ವ್ಯಾಪ್ತಿಗೆ ಬರಲ್ಲ. ಅದು ಮಹಾನಗರ ಪಾಲಿಕೆ ರಸ್ತೆಯಾಗಿರುವುದರಿಂದ ಅವರು ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ಸಿಆರ್‌ಎಫ್ಯೋ ಜನೆಯಲ್ಲಿ ರಸ್ತೆ ನಿರ್ಮಿಸುವುದು ಮಾತ್ರ ನಮ್ಮ ಪಾಲಿನ ಹೊಣೆಗಾರಿಕೆ. ಯಾವುದೇ ಅಡೆತಡೆ ಇಲ್ಲದ ಕಡೆಗಳಲ್ಲಿ ರಸ್ತೆ ನಿರ್ಮಿಸಿದ್ದೇವೆ. 
 ಎನ್‌.ಎಂ.ಕುಲಕರ್ಣಿ, ಇಇ, ರಾಷ್ಟ್ರೀಯ ಹೆದ್ದಾರಿ

ಹೆಸರಿಗೆ ಮಾತ್ರ ರಸ್ತೆ ಅಭಿವೃದ್ಧಿ ಕಾಣುತ್ತಿದೆ. ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು. ಅಲ್ಲಿಲ್ಲಿ ರಸ್ತೆ ನಿರ್ಮಿಸಿ ಹಾಗೇ ಬಿಟ್ಟಿದ್ದಾರೆ. ಮುಂದೆ ರಸ್ತೆ ಎಂದು ಸರಾಗವಾಗಿ ಹೋದರೆ ಯಮನ ಪಾದವೇ ಗತಿ.  ಭೂಮಿ ಸ್ವಾಧೀನ ಪಡಿಸಿಕೊಳ್ಳದೆ ಅರ್ಧಂಬರ್ಧ ರಸ್ತೆ ನಿರ್ಮಿಸಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ.
ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ
. ಸಂಜಯ ಪವಾರ, ಸಾರ್ವಜನಿಕ

ಹೇಮರಡ್ಡಿ ಸೈದಾಪುರ 

https://beta.udayavani.com/district-news/dharwad-news/dhararawada-shivaratri-music-festival-tomorrow

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ