ವಿವಿಧೆಡೆ ಶಿವರಾತ್ರಿ ರಥೋತ್ಸವ, ಕೊಂಡೋತ್ಸವ

Team Udayavani, Mar 6, 2019, 7:28 AM IST

ಹುಣಸೂರು: ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ತಾಲೂಕಿನ ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರ ರಥೋತ್ಸವ ಹಾಗೂ ಕೊಳವಿಗೆ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಚಿಕ್ಕಹುಣಸೂರಿನ ಮಹದೇಶ್ವರ ದೇವಸ್ಥಾನ ಹಾಗೂ ಕಲ್ಲೂರಪ್ಪನಗುಡ್ಡದಲ್ಲಿ ಕೊಂಡೋತ್ಸವ ಜರುಗಿತು.

ಓಂಕಾರೇಶ್ವರ ರಥೋತ್ಸವ: ಹನಗೋಡು-ಹುಣಸೂರು ರಸ್ತೆಯ ರಾಮೇನಹಳ್ಳಿಬೆಟ್ಟದ ಮೇಲಿನ ಓಂಕಾರೇಶ್ವರಸ್ವಾಮಿ ರಥೋತ್ಸವ ಮಂಗಳವಾರ ಬೆಳಗ್ಗೆ ವಿಜೃಂಭಣೆಯಿಂದ ನಡೆಯಿತು. ಸೋಮವಾರ ರಾತ್ರಿ ಬೆಟ್ಟದ ಮೇಲಿನ ದೇವಾಲಯದಲ್ಲಿ ವಿಶೇಷ ಹೋಮ, ಹವನ, ಭಜನೆ, ಭಕ್ತರಿಂದ ಜಾಗರಣೆ ನಡೆಯಿತು. ಜಾಗರಣೆ ಮಾಡಿದ್ದ ಭಕ್ತರು ಬೆಳಗ್ಗೆ ನದಿಯಲ್ಲಿ ಮಿಂದೆದ್ದು ಪೂಜೆ ಸಲ್ಲಿಸಿದರು. 

ಬೆಟ್ಟದ ಮೇಲಿನ ದೇವಾಲಯಕ್ಕೆ ಬೆಟ್ಟ ಹತ್ತಿ, ಸರದಿಯಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು. ಹರಕೆ ಹೊತ್ತ ಮಂದಿ ಗ್ರಾಮದ ಬಳಿ ಇರುವ ಲಕ್ಷ್ಮಣತೀರ್ಥನದಿ ಬಳಿ ಮುಡಿಕೊಟ್ಟು, ಬಾಯಿಗೆ ಬೀಗ ಹಾಕಿಕೊಂಡು ಬೆಟ್ಟ ಹತ್ತಿ. ಉರುಳುಸೇವೆ ಮಾಡಿದರು.

ಅನ್ನ ಸಂತರ್ಪಣೆ: ಜಾತ್ರಾ ಸಮಿತಿ ವತಿಯಿಂದ ಭಕ್ತರಿಗೆ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡಿದರು. ಜಾತ್ರೆಯಲ್ಲಿ ಹುಣಸೂರಿನ ಗಾಡಿ ಕಾರ್ಖಾನೆ ನಾರಾಯಣಸ್ವಾಮಿ ಕುಟುಂಬದಿಂದ ಹಾಗೂ ರಾಮೇನಹಳ್ಳಿ ಗ್ರಾಮದ  ಜನರು ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಗೋವಿಂದನಹಳ್ಳಿ ಗ್ರಾಪಂ ವತಿಯಿಂದ ಬೆಟ್ಟಕ್ಕೆ ನೀರು, ದೀಪದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಲ್ಲೂರೇಶ್ವರ ಜಾತ್ರೆ: ಹನಗೋಡಿಗೆ ಸಮೀಪದ ಮಾದಳ್ಳಿಯ ಕಲ್ಲೂರಪ್ಪನಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಗೆ  ವಿಶೇಷ ಪೂಜೆ ನಡೆಯಿತು. ಜಾಗರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಬೆಳಗ್ಗೆ ದೀವಟಿಕೆ ಪೂಜೆ ಬಳಿಕ ಕೊಂಡೋತ್ಸವ ನಡೆಸಲಾಯಿತು. ಇದೇ ವೇಳೆ, ಹಿಂಡಗುಡ್ಲು ಗ್ರಾಮದ ಯುವ ಬಳಗದ ವತಿಯಿಂದ ಜಾಗರಣೆ ಪ್ರಯುಕ್ತ ಪ್ರಸಾದ ವಿನಿಯೋಗ ನಡೆಸಿಕೊಟ್ಟರು. 

ಕೊಳುವಿ ರಾಮಲಿಂಗೇಶ್ವರ ಉತ್ಸವ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕಂಟಿಕೊಂಡಿರುವ ಕೊಳುವಿಗೆಯ ಲಕ್ಷ್ಮಣ ತೀರ್ಥನದಿ ದಂಡೆಯಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳವಾರ ಬೆಳಗ್ಗೆ ದೇವರ ಉತ್ಸವ ನಡೆಯಿತು. ಮಧ್ಯಹ್ನ ಅನ್ನದಾಸೋಹ ನೆರವೇರಿತು. ಸುತ್ತ ಮುತ್ತಲ ಗ್ರಾಮಗಳು ಹಾಗೂ ಹಾಡಿಗಳಿಂದ ಸಾವಿರಾರು ಮಂದಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ವಿವಿಧೆಡೆ ಜಾಗರಣೆ, ಪೂಜೆ: ಹುಣಸೂರು ನಗರದ ಮೈಸೂರು ರಸ್ತೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಒಂದೆಡೆ ಇರುವ ಶಿವ, ಸುಬ್ರಹ್ಮಣ್ಯ, ಕೃಷ್ಣ, ಗಣೇಶ, ಆಂಜನೇಯ, ಮಂಜುನಾಥ, ಶಿರಡಿ ಸಾಯಿಬಾಬ ಮಂದಿರಗಳಲ್ಲಿ ಭಕ್ತರ ನೂಕು ನುಗ್ಗಲು ಉಂಟಾಗಿತ್ತು. ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪೂಜೆ ಸಲ್ಲಿದರು.

ರುದ್ರಹೋಮ: ಲಕ್ಷ್ಮಣತೀರ್ಥ ನದಿ ದಂಡೆಯ ಮೇಲಿರುವ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ರಾತ್ರಿ ಇಡೀ ನಡೆದ ರುದ್ರಹೋಮಕ್ಕೆ ಬೆಳಗಿನ ಜಾವ ಪೂರ್ಣಾಹುತಿ ನೀಡಲಾಯಿತು. ಅಯ್ಯಪ್ಪಸ್ವಾಮಿಬೆಟ್ಟ, ಮುನೇಶ್ವರಸ್ವಾಮಿ, ಶನೇಶ್ವರ, ಕನ್ಯಕಾಪರಮೇಶ್ವರಿ ದೇವಾಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಜಾಗರಣೆ ದಿನ ಶನೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.

ಹನಗೋಡಿಗೆ ಸಮೀಪದ ಹೆಬ್ಟಾಳದ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನದಾಸೋಹ, ನಗರಕ್ಕೆ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ರಾತ್ರಿ ಭಜನೆ ಹಾಗೂ ಬೆಳಗ್ಗೆ ಕೊಂಡೋತ್ಸವ, ಜಾತ್ರೆ ನಡೆಯಿತು. ಇನ್ನು ಮೈಸೂರು ರಸ್ತೆಯ ಬಿಳಿಕೆರೆಯ ಕೋಡಿ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಜನೆ ಆಯೋಜಿಸಲಾಗಿತ್ತು.

https://beta.udayavani.com/district-news/mysore-news/mysore-missed-the-hat-trick-this-time-and-got-clean-city

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ