ಉತ್ಸವಗಳಿಂದ ಪ್ರತಿಭೆ ಅನಾವರಣ: ಎಸ್ತೆರ್‌

Team Udayavani, Feb 8, 2019, 6:41 AM IST

ಕೊಡಿಯಾಲಬೈಲ್‌ : ಕಾಲೇಜಿನಲ್ಲಿ ನಡೆಯುವ ಉತ್ಸವಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯಾಗಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬಳಸಿಕೊಳ್ಳಬೇಕು ಎಂದು ಚಲನಚಿತ್ರ ನಟಿ ಎಸ್ತೆರ್‌ ನೊರೊನ್ಹಾ ಹೇಳಿದರು.

ಸಂತ ಅಲೋಶಿಯಸ್‌ (ಸ್ವಾಯತ್ತ) ಕಾಲೇಜಿನ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ ‘ಅಲೋಶಿಯನ್‌ ಫೆಸ್ಟ್‌ -2019’ನ್ನು ಅವರು ಗುರುವಾರ ಉದ್ಘಾಟಿಸಿದರು.

ಖಜಾನೆಯನ್ನು ತೆರೆದಾಗ ಮಾತ್ರ ನಮಗೆ ಅದರಲ್ಲಡಗಿರುವ ಸಂಪತ್ತಿನ ಅರಿವಾಗುತ್ತದೆ. ನಾವೆಲ್ಲರೂ ನಮ್ಮ ಕುಟುಂಬ, ಸಮಾಜ, ದೇಶದ ಖಜಾನೆಗಳಾಗಿದ್ದೇವೆ ಎಂದರು.

ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ. ಈ ಉತ್ಸವದಲ್ಲಿ ಭಾಗಿಯಾಗಿ ನಿಮ್ಮ ಪ್ರತಿಭೆಗಳನ್ನು ಹೊರ ಹೊಮ್ಮಿಸುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು.

ಸಂತ ಅಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ ವಂ| ಡೈನೀಶಿಯಸ್‌ ವಾಜ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ವಂ| ಡಾ| ಪ್ರವೀಣ್‌ ಮಾರ್ಟಿಸ್‌, ಕುಲಸಚಿವ ಡಾ| ಎ. ಎಂ. ನರಹರಿ, ಡಾ| ನಾರಾಯಣ ಭಟ್, ಡಾ| ರತನ್‌ ತಿಲಕ್‌ ಮೊಹಂತ, ವಿದ್ಯಾರ್ಥಿ ನಾಯಕ ರೆಲ್‌ಸ್ಟನ್‌ ಲೋಬೊ, ನಿರ್ದೇಶಕರಾದ ಡಾ| ಆಲ್ವಿನ್‌ ಡೇಸಾ, ಡಾ| ಜಾನ್‌ ಡಿ’ಸಿಲ್ವ, ವಂ| ಪ್ರದೀಪ್‌ ಸಿಕ್ವೇರಾ, ಹಣಕಾಸು ಅಧಿಕಾರಿ ವಂ| ಮೆಲ್ವಿನ್‌ ಲೋಬೋ ಉಪಸ್ಥಿತರಿದ್ದರು. ಮುಖ್ಯ ಅತಿಥಿ ಎಸ್ತೆರ್‌ ನೊರೊನ್ಹಾ ಅವರು ಕೊಂಕಣಿ ಗೀತೆಯನ್ನು ಹಾಡಿದರು. ಡಾ| ನಾರಾಯಣ ಭಟ್ ಸ್ವಾಗತಿಸಿ, ರೆಲ್‌ಸ್ಟನ್‌ ಲೋಬೋ ವಂದಿಸಿದರು. ತಾನ್ಯಾ ಮಥಾಯಿ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ