ರೋಡ್‌ ಹಂಪ್‌ ಗಳಿಗೆ ಬಣ್ಣ;ರಬ್ಬರ್‌ ಹಂಪ್ಸ್‌ ಕಿರಿಕಿರಿಇನ್ನೂತಪ್ಪಿಲ್ಲ

Team Udayavani, Feb 8, 2019, 5:59 AM IST

ಮಹಾನಗರ: ನಗರದ ಪ್ರಮುಖ ರಸ್ತೆಗಳ ರೋಡ್‌ ಹಂಪ್ಸ್‌ ಮತ್ತು ಝೀಬ್ರಾ ಕ್ರಾಸ್‌ಗಳಿಗೆ ಹಾಕಿದ ಬಣ್ಣಗಳು ಕಾಣಿಸದೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಪಾಯ ತಂದೊಡ್ಡುವ ಪ್ರಮುಖ ಕಡೆಗಳಲ್ಲಿನ ರೋಡ್‌ ಹಂಪ್ಸ್‌ ಮತ್ತು ಝೀಬ್ರಾ ಕ್ರಾಸ್‌ಗಳಿಗೆ ಬಿಳಿ ಬಣ್ಣ ಬಳಿಯಲಾಗಿದೆ.

ಉರ್ವಸ್ಟೋರ್‌, ಕೊಟ್ಟಾರ, ಕೊಟ್ಟಾರ ಚೌಕಿ, ಲಾಲ್‌ಬಾಗ್‌ ಸಹಿತ ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿ ಬಣ್ಣಗಳು ಕಾಣದೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವಿತ್ತು. ಅಲ್ಲದೆ, ಪಿವಿಎಸ್‌, ಬಂಟ್ಸ್‌ಹಾಸ್ಟೆಲ್‌, ಜ್ಯೋತಿ ವೃತ್ತ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್‌ ಇದ್ದು, ಅವುಗಳಿಗೆ ಬಳಿದ ಬಿಳಿ ಬಣ್ಣವೂ ಮಾಸಿತ್ತು.

ಕೊಟ್ಟಾರ ಕ್ರಾಸ್‌, ಬಿಜೈ ಮಾರುಕಟ್ಟೆ ರಸ್ತೆ ಸಹಿತ ಮತ್ತಿತರ ಕಡೆಗಳಲ್ಲಿ ರಸ್ತೆ ಕಾಮಗಾರಿಗಾಗಿ ಮಣ್ಣನ್ನು ಅಗೆದಿದ್ದು, ಇದರಿಂದ ಝೀಬ್ರಾ ಕ್ರಾಸ್‌ಗಳು ಮಣ್ಣು ಮತ್ತು ಮಳೆ ನೀರಿನಿಂದಾಗಿ ಮಾಯವಾಗಿತ್ತು. ಇದೀಗ ಮೊದಲ ಹಂತದಲ್ಲಿ ನಗರದ ಕೆಲವು ಕಡೆಗಳಲ್ಲಿನ ಝೀಬ್ರಾ ಕ್ರಾಸ್‌ಗಳಿಗೆ ಮತ್ತು ರೋಡ್‌ ಹಂಪ್ಸ್‌ಗಳಿಗೆ ಬಿಳಿ ಬಣ್ಣ ಬಳಿಯಲಾಗಿದೆ.

ರಂಬ್ಲಿರ್‌ ಎದ್ದು ಸಮಸ್ಯೆ
ಡಾಮರ್‌ ರಸ್ತೆಯುಬ್ಬುಗಳ ಬದಲಾಗಿ ನಗರದ ವಿವಿಧೆಡೆ ಹಾಕಿರುವ ರಂಬ್ಲಿರ್‌ (ರಬ್ಬರ್‌ನಿಂದ ಮಾಡಿರುವ ರಸ್ತೆಯುಬ್ಬು) ಅಲ್ಲಲ್ಲಿ ಎದ್ದು ಹೋಗಿದ್ದು, ಈ ಬಗ್ಗೆ ಸಂಚಾರಿ ಪೊಲೀಸ್‌ ಇಲಾಖೆ ಗಮನನೀಡುತ್ತಿಲ್ಲ. ರಂಬ್ಲಿರ್‌ಗಳ ಜೋಡಣೆಗೆ ಅಳವಡಿಸಿದ್ದ ಬೋಲ್ಟ್ ಗಳು ರಸ್ತೆಗಳಲ್ಲಿ ಉಳಿದುಕೊಂಡಿವೆ. ಇವುಗಳು ವಾಹನಗಳ ಚಕ್ರಗಳು ಸಿಲುಕಿ ಅಪಾಯ ಒಡ್ಡುವ ಸಂಭವ ಹೆಚ್ಚಿದೆ. ಅಷ್ಟೇ ಅಲ್ಲದೆ, ರೋಡ್‌ ಉಬ್ಬುಗಳಿಗೆ ಯಾವುದೇ ಅಳತೆಗೋಲು ಇಲ್ಲ ಎಂಬುದುದು ಸಾರ್ವಜನಿಕರ ಅಳಲು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ