ಹಳೆ ಕೊಡಿಮರ ತೆರವು ಕಾರ್ಯ

Team Udayavani, Feb 7, 2019, 6:47 AM IST

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ‌ದ ಕೊಡಿಮರವನ್ನು ಬುಧವಾರ ತೆರವುಗೊಳಿಸಲಾಯಿತು.

ಸ್ವರ್ಣಕವಚ ಸಹಿತ ನೂತನ ಕೊಡಿಮರದ ಪ್ರತಿಷ್ಠಾ ಕಾರ್ಯ ಮಾರ್ಚ್‌ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಳೆಯ ಕೊಡಿಮರವನ್ನು ಕ್ರೇನ್‌ ಸಹಾಯದಿಂದ ತೆರವು ಮಾಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಮಾಡಿ, ಬಳಿಕ ಕೆಲಸ ಶುರು ಮಾಡಲಾಯಿತು.

ಕೊಡಿಮರ ನೆಲದಿಂದ ಸುಮಾರು 5 – 6 ಅಡಿ ಆಳದಲ್ಲಿದ್ದು, ವೈಬ್ರೇಟರ್‌ ಸಹಾಯದಿಂದ ಕೊಡಿಮರದ ಸುತ್ತ ಕೊರೆಯಲಾಯಿತು. ಬಳಿಕ ಬಿ.ಸಿ. ರೋಡ್‌ನ‌ ವಿಜಯಲಕ್ಷ್ಮೀ ಸ್ಟೀಲ್‌ ಕಂಪೆನಿಯ ಗಜಲಕ್ಷ್ಮೀ ಕ್ರೇನ್‌ನಿಂದ ಹಳೆ ಕೊಡಿಮರವನ್ನು ಹೊರ ತೆಗೆಯಲಾಯಿತು. ಗೋಪುರದ ಕೆಲಸವೂ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೊಡಿಮರವನ್ನು ತೆಗೆಯುವುದು ಸವಾಲಿನ ಕೆಲಸವೇ ಆಗಿತ್ತು. ಗೋಪುರ, ರಾಜಗೋಪುರ ಸಹಿತ ದೇವಸ್ಥಾನದ ಗುಡಿಗಳಿಗೆ ಹಾನಿ ಆಗದಂತೆ ಕೊಡಿಮರವನ್ನು ಮೇಲಕ್ಕೆತ್ತಬೇಕಾಗಿತ್ತು. ಇದಕ್ಕಾಗಿ 150 ಅಡಿ ಉದ್ದದ ಲಿಫ್ಟರ್‌ ಹೊಂದಿರುವ ಕ್ರೇನನ್ನು ಬಳಸಿಕೊಳ್ಳಲಾಯಿತು. ಗೋಪುರ ಹಾಗೂ ರಾಜಗೋಪುರದ ನಡುವೆ ಕ್ರೇನನ್ನು ನಿಲ್ಲಿಸಲಾಗಿತ್ತು. ಇಲ್ಲಿಂದ 150 ಅಡಿ ಎತ್ತರಕ್ಕೆ ಲಿಫ್ಟರ್‌ ತೆರೆದುಕೊಂಡಿತು. ಅಲ್ಲಿಂದ ಕಬ್ಬಿಣದ ಹಗ್ಗಗಳನ್ನು ಇಳಿ ಬಿಟ್ಟು, ಕೊಡಿಮರಕ್ಕೆ ಕಟ್ಟಲಾಯಿತು. ಬಳಿಕ ಕೊಡಿಮರವನ್ನು ಮೇಲಕ್ಕೆತ್ತಿ ಹೊರಗಡೆ ಇಡಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ