ಕಳ್ಳರ ಅಂಗಡಿ ಬಂದ್…ಖರ್ಗೆ ಕೋಟೆಯಲ್ಲಿ ಪ್ರಧಾನಿ ಮೋದಿ ರಣಕಹಳೆ!

Team Udayavani, Mar 6, 2019, 8:23 AM IST

ಕಲಬುರಗಿ: ಕರ್ನಾಟಕ ಸರ್ಕಾರ ರೈತರ ವಿರೋಧಿಯಾಗಿದೆ..ಈ ಸರ್ಕಾರವನ್ನು ರೈತರು ಎಂದಿಗೂ ಕ್ಷಮಿಸುವುದಿಲ್ಲ. ರೈತರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗೋಡೆಯಾಗಿದೆ. ರಿಮೋಟ್ ನಿಂದ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ರೈತರ ಪಟ್ಟಿಯನ್ನೇ ಕೊಟ್ಟಿಲ್ಲ. ರೈತರ ಖಾತೆಗೆ ಕೇಂದ್ರದ ನಗದು ಜಮೆಗೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಡ್ಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತರ ಬದ್ಧ ವಿರೋಧಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ರೈತರ ಪರವಾಗಿ, ಬಂಜಾರಾ ಸಮುದಾಯ ಸೇರಿದಂತೆ ಎಲ್ಲರ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ.

ಕೇಂದ್ರ ಸರ್ಕಾರ ಒಂದು ರೂಪಾಯಿ ನೀಡಿದರೂ ಕೂಡಾ ಅದು ರೈತರ, ಬಡವರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಈ ಹಿಂದೆ ಸುಳ್ಳು ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ಮಾಡುತ್ತಿದ್ದರು. ಹೀಗಾಗಿ ಮೋದಿ ಇರುವವರೆಗೆ ಕಳ್ಳರ ಅಂಗಡಿ ಬಂದ್ ಆಗಲಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು. ಈಗ 56 ಇಂಚಿನ ಹೆಸರು ಕೇಳಿದರೆ ಸಾಕು ಕಾಂಗ್ರೆಸ್ ಪಕ್ಷದ ನಿದ್ದೆಗೆಡತೊಡಗಿದೆ ಎಂದು ನೇರವಾಗಿ ಚಾಟಿ ಬೀಸಿದರು.

ಸಾಲಮನ್ನಾ ಭರವಸೆ ಈಡೇರಿಸಿಲ್ಲ:

ಸಾಲಮನ್ನಾ ಹೆಸರಿನಲ್ಲಿ ರೈತರ ವೋಟು ಗಳಿಸಿದ ಸರ್ಕಾರ ಸಂಪೂರ್ಣ ಸಾಲಮನ್ನಾ ಮಾಡಿದೆಯಾ ಎಂದು ಪ್ರಶ್ನಿಸಿದ ಅವರು, ರೈತರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕರ್ನಾಟಕದ ಸರ್ಕಾರ ರೈತ ವಿರೋಧಿಯಾಗಿದೆ. ಸಾಲಮನ್ನಾ ಭರವಸೆ ಈಡೇರಿಸದೇ ರೈತರನ್ನು ವಂಚಿಸಿದೆ ಎಂದು ದೂರಿದರು.

8 ಕೋಟಿ ನಕಲಿ ಫಲಾನುಭವಿಗಳ ಮೂಲಕ ಭ್ರಷ್ಟಾಚಾರ!

ಕಬ್ಬಿನ ತ್ಯಾಜ್ಯದಿಂದ ಇಥೆನಾಲ್ ತಯಾರಿಸಲಾಗುತ್ತಿದೆ. ಜನ್ ಧನ್ ಯೋಜನೆ ಬಗ್ಗೆ ಇವರು ವ್ಯಂಗ್ಯವಾಡಿದರು, ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಹಣ ಈಗ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿದೆ. ಜನಿಸುವ ಮುನ್ನವೇ ಕೆಲವರಿಗೆ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಕೇವಲ ಕಾಗದದಲ್ಲೇ ನಕಲಿ ಫಲಾನುಭವಿಗಳ ಲೆಕ್ಕ ಇಡಲಾಗುತ್ತಿತ್ತು. ಹೀಗೆ ಸುಮಾರು 8 ಕೋಟಿ ನಕಲಿ ಫಲಾನುಭವಿಗಳ ಮೂಲಕ ಭ್ರಷ್ಟಾಚಾರ ನಡೆಸಲಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಬ್ರೇಕ್ ಹಾಕಿದೆ ಎಂದರು.

https://beta.udayavani.com/district-news/raichur-news/a-sincere-effort-to-develop

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ