ಅತೃಪ್ತರಿಗೆ ಫೈನಲ್ ಚಾನ್ಸ್ : ವೇಣುಗೋಪಾಲ್ ‘ಆಫರ್’

Team Udayavani, Feb 12, 2019, 8:33 AM IST

ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್.

ಬೆಂಗಳೂರು: ಕಾಂಗ್ರೆಸ್ – ಜೆ.ಡಿ.ಎಸ್. ದೋಸ್ತಿ ಸರಕಾರದ ವಿರುದ್ಧ ಮುನಿಸಿಕೊಂಡು ಕಳೆದ ಕೆಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿರುವ ನಾಲ್ವರು ಕಾಂಗ್ರೆಸ್ ಶಾಸಕರಿಗೆ ತಮ್ಮ ಮುನಿಸನ್ನು ತೊರೆದು ಮಾತುಕತೆಗೆ ಬರುವಂತೆ ಇದೀಗ ಪಕ್ಷವು ಕೊನೇ ಅವಕಾಶವೊಂದನ್ನು ನೀಡಿದೆ.

ಎಲ್ಲಾ ಅತೃಪ್ತ ಶಾಸಕರು ತಮ್ಮ ಮುನಿಸನ್ನು ತೊರೆದು ತಕ್ಷಣವೇ ಬೆಂಗಳೂರಿಗೆ ಆಗಮಿಸಬೇಕು ಮಾತ್ರವಲ್ಲದೇ ಪಕ್ಷ ಹಾಗೂ ಸರಕಾರದ ಮೇಲೆ ತಮಗೆ ಯಾವುದೇ ರೀತಿಯ ಅತೃಪ್ತಿ ಇಲ್ಲ ಎಂಬುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೀಡಿರುವುದಾಗಿ ಇದೀಗ ತಿಳಿದುಬಂದಿದೆ. ಹಾಗೆಯೇ ಪಕ್ಷ ಹಾಕಿರುವ ಈ ಎಲ್ಲಾ ಷರತ್ತುಗಳಿಗೆ ಒಪ್ಪಿಕೊಂಡದ್ದೇ ಆದಲ್ಲಿ ಸ್ಪೀಕರ್ ಗೆ ಸಲ್ಲಿಸಿರುವ ಅನರ್ಹತೆ ಮನವಿಯ ಕುರಿತಾಗಿ ಪರಿಶೀಲಿಸಲಾಗುವುದು ಮತ್ತು ನಿಗಮ ಮಂಡಳಿ ಹಾಗೂ ಮಂತ್ರಿ ಸ್ಥಾನ ನೀಡುವ ಕುರಿತಾಗಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂಬ ಭರವಸೆಯನ್ನೂ ವೇಣುಗೋಪಾಲ್ ಅವರು ಅತೃಪ್ತರಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಮಂಗಳವಾರ ಸಂಜೆ ಒಳಗೆ ಅತೃಪ್ತರೆಲ್ಲರೂ ನಗರಕ್ಕೆ ಆಗಮಿಸಬೇಕು ಮಾತ್ರವಲ್ಲದೇ ಬುಧವಾರದಿಂದಲೇ ಸದನದ ಕಲಾಪಗಳಲ್ಲಿ ಪಾಲ್ಗೊಳ್ಳಬೇಕು ಎಂಬ ಶರತ್ತನ್ನೂ ಸಹ ಇದೇ ಸಂದರ್ಭದಲ್ಲಿ ಕೆ.ಸಿ.ವಿ. ಅತೃಪ್ತರ ಮುಂದೆ ಇರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ತಮಗೆ ಇಂದು ಮಧ್ಯಾಹ್ನದವರೆಗೂ ಸಮಯ ನೀಡುವಂತೆ ಅತೃಪ್ತ ಶಾಸಕರು ಕೇಳಿಕೊಂಡಿರುವುದಾಗಿ ವರದಿಯಾಗಿದೆ.

ಒಟ್ಟಿನಲ್ಲಿ ದೋಸ್ತಿ ಸರಕಾರದ ವಿರುದ್ಧ ಮುನಿಸಿಕೊಂಡು ಅಜ್ಞಾತವಾಗಿರುವ ಕಾಂಗ್ರೆಸ್ ಶಾಸಕರು ಪಕ್ಷ ನೀಡಿರುವ ‘ಆಫರ್’ಗೆ ಒಪ್ಪಿಕೊಳ್ಳುತ್ತಾರೋ ಅಥವಾ ತಮ್ಮ ಅತೃಪ್ತಿಯ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸುತ್ತಾರೋ ಎಂಬ ಕುತೂಹಲ ಇದೀಗ ಮೂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ