ಗೋರೆಗಾಂವ್‌ ಕರ್ನಾಟಕ ಸಂಘದ ವಜ್ರ ಮಹೋತ್ಸವ ಸಮಾರೋಪ

Team Udayavani, Mar 6, 2019, 2:49 PM IST

ಮುಂಬಯಿ: ಸಂಘಟನೆಯನ್ನು ಮನುಷ್ಯನಿಗೆ  ಹೋಲಿಸಿದಾಗ 60 ವರ್ಷ ದಾಟಿದ ವ್ಯಕ್ತಿಗಿಂತ ಅರುವತ್ತು ವರ್ಷ ದಾಟಿದ ಸಂಘಟನೆಗಳು ಮನುಷ್ಯನಿಗಿಂತಲೂ ಅಧಿಕ ಕ್ರಿಯಾಶೀಲವಾಗಿರುತ್ತವೆ. ಗೋರೆಗಾಂವ್‌ ಕರ್ನಾಟಕ ಸಂಘ ವನ್ನು 60 ವರ್ಷಗಳ ಹಿಂದೆ ನಮ್ಮ ಹಿರಿಯರು ಸ್ಥಾಪಿಸಿದ್ದು ಅಂದಿನಿಂದ ಇಂದಿನ ತನಕ ಶಿಸ್ತು ಬದ್ಧವಾಗಿ ಕನ್ನಡಪರ ಕೆಲಸ ಗಳನ್ನು ಹಮ್ಮಿಕೊಂಡಿದ್ದು  ಇದೀಗ  ವಜ್ರಮಹೋತ್ಸವ ಸಮಾರಂಭದಿಂದ ಈ ಸಂಘವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲವಾಗಲು ಪೂರಕವಾಗಿದೆ  ಎಂದು ಗೋರೆಗಾಂವ್‌ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ  ಅವರು ನುಡಿದರು.

ಮಾ. 3 ರಂದು ಮಲಾಡ್‌ ಪಶ್ಚಿಮದ ಬಜಾಜ್‌ ಹಾಲ್‌ನಲ್ಲಿ ಜರಗಿದ ಗೋರೆಗಾಂವ್‌ ಕರ್ನಾಟಕ ಸಂಘದ ವಜ್ರ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಧಕರನ್ನು ಸಮ್ಮಾನಿಸಿ ಮಾತನಾಡಿದ ಅವರು, ಎಲ್ಲ ಕಾರ್ಯಕ್ರಮಗಳಲ್ಲಿ ಸಂಘದ ಎಲ್ಲ ಸದಸ್ಯರು ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ್ದು, ಆರು ದಶಕ ಗಳಿಂದ ಜನಸೇವೆ ಮಾಡುತ್ತಾ ಬಂದಿರುವ ಈ ಸಂಘದ ಶತ ಮಾನೋತ್ಸವ ಆಚರಣೆಯನ್ನೂ ನೋಡುವ  ಅವಕಾಶ ನಮಗೆ ದೊರೆಯಲಿ.  ಮಹಿಳಾ ಸದಸ್ಯರೇ ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲವಾಗಿರುವ ಈ ಸಂಘಕ್ಕೆ ಮಹಿಳೆಯರ ಕೊಡುಗೆ ಶ್ಲಾಘನೀಯ. ನಿಮ್ಮೆಲ್ಲರ ಸಹಾಯ ಪ್ರೋತ್ಸಾಹದಿಂದ ಅಧ್ಯಕ್ಷನಾಗಿ ಈ ಸಂಘದ 60ನೇ ವರ್ಷವನ್ನು ಆಚರಿಸುವ ಭಾಗ್ಯ ನನಗೆ ದೊರಕಿದ್ದು ಈ ಕಾರ್ಯವನ್ನು ಯಶಸ್ಸಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ತನ್ನ ವೈಯಕ್ತಿಕ ಕೃತಜ್ಞತೆ ಅರ್ಪಿಸುತ್ತಾ ಸಂಘದ ಕಾರ್ಯಾಲಯ ಪುನಃ ನಿರ್ಮಾಣ ಹಾಗೂ ಸಭಾಗೃಹದ ಕಾರ್ಯಕ್ಕೆ ಎಲ್ಲರ ಸಹಾಯದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ದಿವ್ಯ ಸಾಗರ್‌ ಸಮೂಹ ಸಂಸ್ಥೆಯ ಮುಖ್ಯಸ್ಥ ಮುದ್ರಾಡಿ ದಿವಾಕರ ಶೆಟ್ಟಿ ಅವರು  ಆಗಮಿಸಿ ಸಂಘದ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಮುಂಬಯಿ ಮಹಾನಗರದಲ್ಲಿ ತುಳು ಕನ್ನಡಿಗರ ಅನೇಕ ಸಂಘಟನೆಗಳಿದ್ದು ಕೇವಲ ಬೆರಳೆಣಿಕೆಯಷ್ಟು ಮಾತ್ರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಅದರಲ್ಲಿ  ಗೋರೆಗಾಂವ್‌ ಕರ್ನಾಟಕ ಸಂಘವೂ ಒಂದಾಗಿದೆ. ಕೂಡುವುದು ಮತ್ತು ಕೊಡುವುದು ಸಂಘದ ಕೆಲಸವಾಗಿದ್ದು ಈ ಸಂಘವು ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದೆ. ಇಲ್ಲಿನ ಮಹಿಳಾ ಸದಸ್ಯರ ಕಾರ್ಯ ಅಭಿನಂದನೀಯ. ಇಲ್ಲಿ ಹೆಚ್ಚಿನವರು ಹಿರಿಯರಾಗಿದ್ದು ಸಂಘದ ಅಭಿ ವೃದ್ಧಿªಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಇಂದು ಸಮ್ಮಾನ  ಸ್ವೀಕರಿಸಿದ ಎಲ್ಲರೂ ಸಮಾಜದ ದೇವರಂತೆ ಎಂದರು.

ಕನ್ನಡಪರ ಚಟುವಟಿಕೆ
ಇನ್ನೋರ್ವ ಮುಖ್ಯ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ತನ್ನ ಅಭಿಪ್ರಾಯವನ್ನು ತಿಳಿಸಿ, ಗೋರೆಗಾಂವ್‌ ಕರ್ನಾಟಕ ಸಂಘವು ಕೇವಲ ವಾರ್ಷಿಕೋತ್ಸವವನ್ನು ಮಾತ್ರ ಮಾಡದೆ ಅನೇಕ ಕನ್ನಡಪರ ಚಟುವಟಿಕೆಗಳನ್ನು ಮಾಡುತ್ತಿದ್ದು ಇದರ ಕಾರ್ಯಕಾರಿ ಸಮಿತಿ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಮಹಿಳಾ ವಿಭಾಗ ಮತ್ತು ಯುವ ವಿಭಾಗಗಳಿದ್ದ ಸಂಘವು ಪ್ರಗತಿಯಲ್ಲಿ ಸಾಗುವುದರಲ್ಲಿ ಸಂದೇಹವಿಲ್ಲ. ಸಂಘ ನಡೆಯಲು ಎಲ್ಲ ವರ್ಗದವರು ಬೇಕು. ಸಂಘವನ್ನು ಟೀಕಿಸುವವರೂ ಬೇಕು. ಆಗ ಮಾತ್ರ ಸಂಘದಲ್ಲಿ ಪ್ರಗತಿ ಸಾಧ್ಯ ಎನ್ನುತ್ತಾ ಸಮ್ಮಾನಿತರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಇನ್ನೋರ್ವ ಮುಖ್ಯ ಅತಿಥಿ ಬಿಎನ್‌ಪಿ ಪರಿಬಾಸ್‌ನ ನಿವೃತ್ತ ಸಿಓಓ ಚಂದ್ರಶೇಖರ ಸಿ. ಶೆಟ್ಟಿ ಅವರು  ಉಪಸ್ಥಿತರಿದ್ದು ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳನ್ನು ಸರಿತಾ  ಸುರೇಶ್‌ ನಾಯ್ಕ…, ಸುಮತಿ ಶೆಟ್ಟಿ ಮತ್ತು ಶಿವಾನಂದ ಶೆಟ್ಟಿ ಅವರು ಪರಿಚಯಿಸಿದರು. ಸಂಘದ ಪಾರುಪತ್ಯಗಾರರು, ವಜ್ರ ಮಹೋತ್ಸವ ಸಮಿತಿಯ ಕಾರ್ಯಾ ಧ್ಯಕ್ಷ  ಸುರೇಂದ್ರ ಸಾಲ್ಯಾನ್‌ ಅವರು  ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಾಧನೆ ವಿವರಿಸಿ ಎಲ್ಲರ ಸಹಕಾರ ಯಾಚಿಸಿ ಸ್ವಾಗತಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯರಾದ ವೈದ್ಯಕೀಯ ಕ್ಷೇತ್ರದಲ್ಲಿ ಡಾ|  ಕರುಣಾಕರ ಬಂಗೇರ,  ಶಿಕ್ಷಣ ಕ್ಷೇತ್ರದ ಸಾಧಕ ಡಾ| ವಿಶ್ವನಾಥ ಕಾರ್ನಾಡ್‌, ಸಮಾಜ ಸೇವಕ  ಜ್ಞಾನೇಶ್ವರ ವಿ. ಸೋಮೇಶ್ವರ, ಸಾಹಿತ್ಯ ಕ್ಷೇತ್ರದ ಸಾಧಕ ರತ್ನಾಕರ ಆರ್‌. ಶೆಟ್ಟಿ, ಸಂಘದ ಆಮಜಿ ಅಧ್ಯಕ್ಷ  ಎಸ್‌. ಎಂ. ಶೆಟ್ಟಿ, ರಂಗಭೂಮಿ ಕಲಾವಿದ ಉಮೇಶ್‌ ಶೆಟ್ಟಿ ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಅತಿಥಿ-ಗಣ್ಯರು ಹಾಗೂ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಗಣೇಶ್‌ ಕುಮಾರ್‌ ಕೆ. ಅವರು ಸಮ್ಮಾನ ಪತ್ರವನ್ನು ವಾಚಿಸಿದರು. ಸಂಘದ ಪಾರುಪತ್ಯಗಾರರೂ ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ರಾದ ಜಿ. ಟಿ. ಆಚಾರ್ಯ ಅವರು ಅಭಿನಂದನ ಭಾಷಣಗೈದರು. 

ಅತ್ಯಧಿಕ  ನಿಧಿ ಸಂಗ್ರಹಿಸಿದ ಸಂಘದ ಕೆಲವು ಸದಸ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಪಾರುಪತ್ಯಗಾರರಾದ ರಮೇಶ್‌ ಶೆಟ್ಟಿ ಪಯ್ನಾರ್‌, ಕೋಶಾಧಿಕಾರಿ ವಿಶಾಲಾಕ್ಷಿ ಉಳುವಾರ ಉಪಸ್ಥಿತರಿದ್ದರು.
ದಿನಪೂರ್ತಿ ನಡೆದ ಗೋರೆಗಾಂವ್‌ ಕರ್ನಾಟಕ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಂಘದ ವಜ್ರಮಹೋತ್ಸವ ನಿಧಿ ಸಂಗ್ರಹ  ಸಮಿತಿಯ ಕಾರ್ಯಾಧ್ಯಕ್ಷೆ ಉಷಾ ಎಸ್‌. ಶೆಟ್ಟಿ. ಸಂಘದ  ಜತೆ ಕಾರ್ಯದರ್ಶಿಗಳಾದ ಶಿವಾನಂದ ಶೆಟ್ಟಿ ಮತ್ತು ವಸಂತಿ ಕೋಟೆಕಾರ್‌, ಜೊತೆ ಕೋಶಾಧಿಕಾರಿ ಸುಮಿತ್ರಾ ಆರ್‌. ಗುಜರನ್‌, ಗ್ರಂಥಪಾಲಕ ಗುಣೋದಯ ಎಸ್‌. ಐಲ್‌, ಸದಸ್ಯರಾದ ಎಸ್‌. ಎಂ. ಶೆಟ್ಟಿ, ಯು. ಎಸ್‌. ಕಾರಂತ್‌,  ಮೀನಾ ಬಿ. ಕಳಾವಾರ್‌, ವೇದಾ ಸುವರ್ಣ, ವಾಣಿ ಶೆಟ್ಟಿ, ಸುಗುಣಾ ಬಂಗೇರ, ವಿಶ್ವನಾಥ ಕೆ ಶೆಟ್ಟಿ, ಭಾಸ್ಕರ್‌ ಟಿ. ಸಫಲಿಗ, ವಿಶೇಷ ಆಮಂತ್ರಿತರಾದ ಲಕ್ಷ್ಮೀ ಆರ್‌. ಶೆಟ್ಟಿ, ಸಚ್ಚೀಂದ್ರ ಕೆ. ಕೋಟ್ಯಾನ್‌, ಪ್ರತಾಪ್‌ ಎನ್‌. ಕೋಟ್ಯಾನ್‌, ಮಾಧವ ಸುವರ್ಣ, ವಿಟuಲ್‌ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್‌ ನಾಯ್ಕ…, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸುಚಲತಾ ಪೂಜಾರಿ, ಗ್ರಂಥಾಯಣದ ನಿರ್ದೇಶಕಿ ಪದ್ಮಜಾ ಪಿ. ಪಣ್ಣೂರು, ರಂಗಸ್ಥಳದ ನಿರ್ದೇಶಕ ಸುರೇಶ್‌ ಎಸ್‌. ಪೂಜಾರಿ, ಸದಸ್ಯರುಗಳು ಮತ್ತು ಕಾರ್ಯಕಾರಿ ಸಮಿತಿಯ ಹಾಗೂ ಸ್ವಾಗತ ಸಮಿತಿಯ ಸದಸ್ಯರುಗಳು ಮತ್ತಿತರರು ಸಹಕರಿಸಿದರು. ಸಭಾ ಕಾರ್ಯಕ್ರಮವನ್ನು ಗಣೇಶ್‌ ಕುಮಾರ್‌ ಕೆ.  ನಿರ್ವಹಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಜಯಕರ ಡಿ. ಪೂಜಾರಿಯವರು ವಂದಿಸಿದರು. ಮನೋರಂಜನೆಯ ಅಂಗವಾಗಿ ಅಮಿತ ಕಲಾ ಮಂದಿರ ಮೀರಾರೋಡ್‌ ಇವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು.

ನಮ್ಮ  ನಾಡಿನ ಭಾಷೆ, ನಡೆ, ನುಡಿ, ಸಂಸ್ಕೃತಿಯನ್ನು ಈ ಮಹಾನಗರದಲ್ಲಿ ಉಳಿಸುವಲ್ಲಿ ಗೋರೆಗಾಂವ್‌ ಕರ್ನಾಟಕ ಸಂಘವು ಪ್ರಶಂಸೆಗೆ ಪಾತ್ರವಾಗಿದೆ. ನಮ್ಮನ್ನು ಗುರುತಿಸಿ ಸಮ್ಮಾನಿಸಿ  ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ.
– ಡಾ|  ಕರುಣಾಕರ ಬಂಗೇರ.
  ಸಮ್ಮಾನಿತರು

ಇದು ಶಿಸ್ತುಬದ್ದ, ಕ್ರಮಬದ್ದ, ಸಮಯ ಪ್ರಜ್ಞೆಯುಳ್ಳ  ಸಂಘವಾಗಿದೆ. ಇಂತಹ ಶಿಸ್ತನ್ನು ಪಾಲಿಸಿದಲ್ಲಿ ಹೆಚ್ಚು ಕಾಲ ಬದುಕಬಹುದು. ಸಂಘವು ಇನ್ನಷ್ಟು ಅಭಿವೃದ್ಧಿ ಸಾಧಿಸಿ ನಾಡು-ನುಡಿಯ ಸೇವೆಯಲ್ಲಿ ತೊಡಗಲಿ.
– ಡಾ| ವಿಶ್ವನಾಥ ಕಾರ್ನಾಡ್‌,  ಸಮ್ಮಾನಿತರು

ವಜ್ರ ಮಹೋತ್ಸವದ ಈ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಶುಭ ಹಾರೈಕೆ. ಸಂಘದ ನಾಡು-ನುಡಿಯನ್ನು 
ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಎದೆತುಂಬಿ ಬರುತ್ತದೆ. ಸಂಘದ ಬಗ್ಗೆ ಎಲ್ಲರಿಗೂ ಪ್ರೀತಿಯಿರಲಿ .

– ರತ್ನಾಕರ ಆರ್‌. ಶೆಟ್ಟಿ,  ಸಮ್ಮಾನಿತರು

ನನಗೆ ಸಿಕ್ಕಿದ ಸಮ್ಮಾನವನ್ನು ನನ್ನೊಂದಿಗಿದ್ದು ಈಗ ನಮ್ಮನ್ನ‌ಗಲಿದ ಎಲ್ಲ  ಹಿರಿಯ ಕಲಾವಿದರಿಗೆ ಅರ್ಪಿಸುತ್ತಿದ್ದೇನೆ. ಸಂಘದ ನಾಡು-ನುಡಿಯಪರ ಕಾರ್ಯಕ್ರಮಗಳಿಗೆ 
ಕನ್ನಡಿಗರ ಸಹಕಾರ  ಸದಾಯಿರಲಿ

– ಉಮೇಶ್‌ ಶೆಟ್ಟಿ ,ಸಮ್ಮಾನಿತರು   

 ಚಿತ್ರ-ವರದಿ : ಈಶ್ವರ ಎಂ. ಐಲ್‌

https://beta.udayavani.com/news-section/nri-news/karnataka-sangh-dombivali-purandara-dasa-worship-bhajan-competition

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ