ಭಾರತ ಪ್ರವಾಸ: ಸ್ಟಾರ್ಕ್‌ ಇಲ್ಲ

Team Udayavani, Feb 8, 2019, 12:30 AM IST

ಮೆಲ್ಬರ್ನ್: ಏಕದಿನ ಹಾಗೂ ಟಿ20 ಸರಣಿಗಾಗಿ ಇನ್ನು ಕೆಲವೇ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡವನ್ನು ಗುರುವಾರ ಅಂತಿಮಗೊಳಿಸಲಾಗಿದೆ. ಗಾಯಾಳು ವೇಗಿ ಮಿಚೆಲ್‌ ಸ್ಟಾರ್ಕ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಮತ್ತು ವೇಗಿ ಪೀಟರ್‌ ಸಿಡ್ಲ್ ಅವರನ್ನು ಕಡೆಗಣಿಸಲಾಗಿದೆ.

ಸ್ಟಾರ್ಕ್‌ ಶ್ರೀಲಂಕಾ ವಿರುದ್ಧದ ಕ್ಯಾನ್‌ಬೆರ್ರಾ ಟೆಸ್ಟ್‌ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರಿಂದ ಭುಜ, ತೋಳು ಹಾಗೂ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಮಾರ್ಚ್‌ನಲ್ಲಿ ಪಾಕಿಸ್ಥಾನ ವಿರುದ್ಧ ಯುಎಇಯಲ್ಲಿ ನಡೆಯಲಿರುವ ಏಕದಿನ ಸರಣಿಯ ವೇಳೆ ಸ್ಟಾರ್ಕ್‌ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ. 

ಮತ್ತೋರ್ವ ಹಿರಿಯ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಬೆನ್ನು ನೋವಿಗೆ ಸಿಲುಕಿದ್ದು, ಭಾರತ ಪ್ರವಾಸವನ್ನು ತಪ್ಪಿಸಿ ಕೊಳ್ಳಲಿದ್ದಾರೆ. ಉಳಿದಂತೆ ಇತ್ತೀಚೆಗೆ ಭಾರತದ ವಿರುದ್ಧ ತವರಿನಲ್ಲಿ ಆಡಿದ ತಂಡದಲ್ಲಿದ್ದ 11 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. 

ಆಸ್ಟ್ರೇಲಿಯ ತಂಡವನ್ನು ಆರನ್‌ ಫಿಂಚ್‌ ಮುನ್ನಡೆಸಲಿದ್ದಾರೆ. ಸರಣಿ ವೇಳೆ 2 ಟಿ20 ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಾಗುವುದು. ಟಿ20 ಪಂದ್ಯಗಳು ಕ್ರಮವಾಗಿ ವಿಶಾಖಪಟ್ಟಣ (ಫೆ. 24) ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ (ಫೆ. 27). ಏಕದಿನ ಪಂದ್ಯಗಳ ತಾಣ ಹೈದರಾಬಾದ್‌ (ಮಾ. 2), ನಾಗ್ಪುರ (ಮಾ. 5), ರಾಂಚಿ (ಮಾ. 8), ಮೊಹಾಲಿ (ಮಾ. 10) ಮತ್ತು ಹೊಸದಿಲ್ಲಿ (ಮಾ. 13).

ಆಸ್ಟ್ರೇಲಿಯ ಟಿ20/ಏಕದಿನ ತಂಡ
ಆರನ್‌ ಫಿಂಚ್‌ (ನಾಯಕ), ಪ್ಯಾಟ್‌ ಕಮಿನ್ಸ್‌, ಅಲೆಕ್ಸ್‌ ಕ್ಯಾರಿ, ಜಾಸನ್‌ ಬೆಹೆಡಾಫ್ì, ನಥನ್‌ ಕೋಲ್ಟರ್‌ ನೈಲ್‌, ಪೀಟರ್‌ ಹ್ಯಾಂಡ್ಸ್‌ ಕಾಂಬ್‌, ಉಸ್ಮಾನ್‌ ಖ್ವಾಜಾ, ನಥನ್‌ ಲಿಯೋನ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಕೇನ್‌ ರಿಚರ್ಡ್‌ಸನ್‌, ಡಿ’ಆರ್ಸಿ ಶಾರ್ಟ್‌, ಮಾರ್ಕಸ್‌ ಸ್ಟೋಯಿನಿಸ್‌, ಆ್ಯಶrನ್‌ ಟರ್ನರ್‌, ಆ್ಯಡಂ ಝಂಪ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ