ಬಜೆಟ್ ಪೂರ್ಣ ವಾಚನಕ್ಕೆ ಅವಕಾಶ ನೀಡದಿರಲು ಚಿಂತನೆ

Team Udayavani, Feb 8, 2019, 12:59 AM IST

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಭಾಷಣವನ್ನೂ ಮೊಟಕುಗೊಳಿಸುವಂತೆ ಪ್ರತಿರೋಧ ತೋರಲು ಸಜ್ಜಾಗಿದೆ.

ಗುರುವಾರ ವಿಧಾನಮಂಡಲ ಕಲಾಪ ಮುಂದೂಡಿಕೆ ನಂತರ ಶಾಸಕರ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಲಾಪದಲ್ಲಿ ಪಕ್ಷದ ನಡೆಯ ಬಗ್ಗೆ ಚರ್ಚಿಸಿ ಕೆಲ ನಿರ್ದೇಶನ ನೀಡಿದರು. ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲು ಅವಕಾಶ ನೀಡಬೇಕು. ಬಜೆಟ್ ಮಂಡನೆಯಾದ ಬಳಿಕ ಅದಕ್ಕೆ ಅನು ಮೋದನೆ ಪಡೆಯುವುದು ಸರ್ಕಾರಕ್ಕೆ ಸವಾಲಾಗಲಿದೆ. ಹಾಗಾಗಿ ಬಜೆಟ್ ಮಂಡನೆಗೆ ಅವಕಾಶ ನೀಡಿದರೂ ಪೂರ್ಣ ಭಾಷಣ ವಾಚಿಸಲು ಆಸ್ಪದ ನೀಡಬಾರದು ಎಂದು ಹಿರಿಯ ಶಾಸಕರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಭಾಷಣ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವಾಗ ಯಾರೊಬ್ಬರೂ ಅತಿರೇಕದ ವರ್ತನೆ ತೋರಬಾರದು. ಅಸಂವಿಧಾನಿಕ ಪದಗಳನ್ನು ಬಳಸದಂತೆ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ನೀಡುವ ಸೂಚನೆ ಜತೆಗೆ ಸನದಲ್ಲಿ ಯಡಿಯೂರಪ್ಪ ಅವರು ಕೈಗೊಳ್ಳುವ ನಿಲುವಿಗೆ ಎಲ್ಲರೂ ಬದ್ಧವಾಗಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಆರಂಭದಲ್ಲೇ ಬಜೆಟ್ ಪ್ರತಿ ಇಲ್ಲ

ಕುಮಾರಸ್ವಾಮಿ ಅವರು ಮಂಡನೆ ಮಾಡಲಿರುವ ಬಜೆಟ್ ಪ್ರತಿ ಮೊದಲಿಗೆ ಕೊಡದೆ ಬಜೆಟ್ ಭಾಷಣ ಪೂರ್ಣಗೊಳಿಸಿದ ನಂತರ ಕೊಡಲು ತೀರ್ಮಾನಿಸಲಾಗಿದೆ. ಸಂಸತ್‌ನ ಸಂಪ್ರದಾಯ ಇಲ್ಲೂ ಪಾಲಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್‌ ಕಚೇರಿ ಮೂಲಗಳು ತಿಳಿಸಿವೆ. ಇದನ್ನು ಖಂಡಿಸಿರುವ ಬಿಜೆಪಿ, ಬಜೆಟ್ ಮಂಡನೆ ಸಂದರ್ಭದಲ್ಲಿ ಸದಸ್ಯರು ಹಾಗೂ ಮಾಧ್ಯಮಗಳಿಗೆ ಬಜೆಟ್ ಪ್ರತಿ ನೀಡುವ ಸಂಪ್ರದಾಯವನ್ನು ಕಾರಣವಿಲ್ಲದೇ ಮುರಿದಿರುವುದು ಸರಿಯಲ್ಲ ಎಂದು ಟೀಕಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ