ಬಿಜೆಪಿಯ ಅನೈತಿಕ ಪ್ರಯತ್ನ ಫ‌ಲ ನೀಡಲ್ಲ: ದಿನೇಶ್‌

Team Udayavani, Feb 8, 2019, 1:21 AM IST

ಬೆಂಗಳೂರು: ಆಪರೇಷನ್‌ ಕಮಲ ಭೀತಿ ನಡುವೆಯೂ ಬಜೆಟ್ ಮಂಡನೆ ಆಗಿಯೇ ತೀರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಖಚಿತವಾಗಿ ಹೇಳುತ್ತಾರೆ. ಜತೆಗೆ ಸರ್ಕಾರ ಉರುಳಿಸಲು ಬಿಜೆಪಿ ನಡೆಸುತ್ತಿರುವ ಅನೈತಿಕ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿ, ಬಜೆಟ್ ಮಂಡನೆ ಬಗ್ಗೆ ಅವರು ‘ಉದಯವಾಣಿ’ ಜತೆ ಮಾತನಾಡಿದ್ದಾರೆ.

•ಬಜೆಟ್ ಮಂಡನೆ ಆಗುವ ವಿಶ್ವಾಸ ಇದೆಯಾ?

ಆಗಿಯೇ ಆಗುತ್ತದೆ. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ.

•ಅತೃಪ್ತ ಶಾಸಕರು ವಾಪಸ್‌ ಬರುವ ನಿರೀಕ್ಷೆ ಇದೆಯೇ?

ನಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡಿದ್ದೇವೆ. ಯಾರಾದರೂ ವಿಪ್‌ ಉಲ್ಲಂಘನೆ ಮಾಡಿದರೆ, ಅವರ ವಿರುದ್ಧ ಕಾನೂನು ಪ್ರಕಾರ ಪಕ್ಷಾಂತರ ವಿರೋಧಿ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ.

•ಅತೃಪ್ತರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ?

ಅವರು ಇದುವರೆಗೂ ನಮ್ಮ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ. ಆದರೆ ಅನಿಶ್ಚಿತತೆ ನಿರ್ಮಾಣ ಮಾಡಿದ್ದಾರೆ. ಶುಕ್ರವಾರದ ಶಾಸಕಾಂಗ ಪಕ್ಷದ ಸಭೆಗೆ ಗೈರಾದರೆ ಕ್ರಮ ಅನಿವಾರ್ಯ.

•ಸರ್ಕಾರ ಉರುಳಿಸಲು ನಿಮ್ಮ ಪಕ್ಷದಲ್ಲೇ ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತಿದೆ ?

ನಮ್ಮ ಪಕ್ಷದವರು ಯಾರೂ ಆ ಪ್ರಯತ್ನ ಮಾಡುತ್ತಿಲ್ಲ. ಇದುವರೆಗೂ ಸರ್ಕಾರ ಉರುಳಿ ಸಲು ಈ ರೀತಿಯ ಅನೈತಿಕ ಪ್ರಯತ್ನ ಯಾರೂ ಮಾಡಿರಲಿಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವ ವಿರುದ್ಧವಾಗಿ ಬಹಿರಂಗವಾಗಿಯೇ ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಮುಂಬೈನಲ್ಲಿ ಕಾಂಗ್ರೆಸ್‌ ಶಾಸಕರನ್ನು ಭೇಟಿ ಮಾಡಿದ್ದಾರೆ. ಬಿಜೆಪಿಯವರು ಸರ್ಕಾರ ಉರುಳಿಸುವ ಪ್ರಯತ್ನ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

•ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಹೇಳುತ್ತಿದ್ದಾರಲ್ಲಾ ?

ಸರ್ಕಾರಕ್ಕೆ ಬಹುಮತ ಇಲ್ಲ ಅಂದರೆ, ಸದನದಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ. ಅದರ ಬದಲು ಹೊರಗಡೆ ಹೇಳಿಕೊಂಡು, ಸದನದಲ್ಲಿ ಗಲಾಟೆ ಮಾಡಿಕೊಂಡು ತಿರುಗಾಡಿದರೆ, ಬಹುಮತ ಇಲ್ಲ ಎಂದಾಗುವುದಿಲ್ಲ.

•ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ಗಿಂತ ಕಾಂಗ್ರೆಸ್‌ ಹೆಚ್ಚು ಕಷ್ಟ ಪಡುತ್ತಿದೆ ?

ಹಾಗೇನಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ನಾಯಕರು ಜಂಟಿಯಾಗಿ ಚರ್ಚಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಕಾಂಗ್ರೆಸ್‌ನ ಹೆಚ್ಚು ಶಾಸಕರು ಇದರಲ್ಲಿ ಭಾಗಿಯಾಗಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಹಾಗಂತ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮ್ಮನೆ ಕುಳಿತುಕೊಂಡಿಲ್ಲ. ಪ್ರತಿಯೊಂದು ವಿಷಯದಲ್ಲೂ ಸಹಕಾರ ನೀಡುತ್ತಿದ್ದಾರೆ. ಅವರ ಕಡೆಯಿಂದ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತಿದ್ದಾರೆ.

•ಲೋಕಸಭೆವರೆಗೂ ಮಾತ್ರ ಮೈತ್ರಿನಾ?

ಐದು ವರ್ಷ ಸರ್ಕಾರ ಇರಬೇಕು ಎಂದು ವರಿಷ್ಠರು ತೀರ್ಮಾನಿಸಿದ್ದಾರೆ. ಲೋಕಸಭೆ ಚುನಾವಣೆ ಫ‌ಲಿತಾಂಶ ಏನೇ ಅದರೂ, ಸರ್ಕಾರ ಬದಲಾಗುವ ಬಗ್ಗೆ ಕಾಂಗ್ರೆಸ್‌ನಿಂದ ಯಾವುದೇ ಪ್ರಯತ್ನ ನಡೆಯುವುದಿಲ್ಲ.

ಶಂಕರ ಪಾಗೋಜಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ