75 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲು ಶಾ ಸೂಚನೆ

Team Udayavani, Feb 8, 2019, 1:15 AM IST

ಬೆಂಗಳೂರು: ನಿರ್ದಿಷ್ಟ ಕಾಲಮಿತಿಯೊಳಗೆ ರಾಜ್ಯದ 75 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಅವರು ಗುರುವಾರ ಎಲ್ಲ ರಾಜ್ಯ ಘಟಕಗಳ ಪ್ರಮುಖರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಸೂಚಿಸಿದರು. ಒಂದೂವರೆ ಗಂಟೆಗೂ ಅಧಿಕ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಾ ಅವರು ಚರ್ಚೆ ನಡೆಸಿ, ರಾಜ್ಯದಲ್ಲಿ ಚುನಾವಣೆ ಸಿದ್ಧತೆಯ ಮಾಹಿತಿ ಪಡೆದರು. ಫೆ. 12ಕ್ಕೆ ‘ನನ್ನ ಮನೆ ಬಿಜೆಪಿ ಮನೆ’ ಅಭಿಯಾನದ ಆರಂಭದ ದಿನದಲ್ಲಿ ರಾಜ್ಯದ 55 ಸಾವಿರ ಬೂತ್‌ ಅಧ್ಯಕ್ಷರಿಂದ ರಾಜ್ಯಾಧ್ಯಕ್ಷರವರೆಗೆ 60 ಸಾವಿರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು. ಪದಾಧಿಕಾರಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ವಿಸ್ತರಿಸಿ 75 ಲಕ್ಷ ಮನೆಗಳ ಮೇಲೆ ಬಾವುಟ ಹಾರಿಸುವ ಗುರಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಿಂದ ಸಂಪರ್ಕಿಸಲಾಗಿದ್ದ ಸಂವಾದದಲ್ಲಿ ಪ್ರಮುಖರಾದ ಕೆ.ಎಸ್‌.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ.ರವಿ, ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ಡಾ.ವಾಮನ್‌ ಆಚಾರ್ಯ, ಗೋ.ಮಧುಸೂದನ್‌ ಭಾಗವಹಿಸಿದ್ದರು.

ನಮೋ ಆ್ಯಪ್‌ ಮೂಲಕ ದೇಣಿಗೆ ಸಂಗ್ರಹ: ಬೂತ್‌ ಮಟ್ಟದಿಂದ ರಾಜ್ಯಮಟ್ಟದವರೆಗಿನ ಕಾರ್ಯಕರ್ತರು 5-1000 ರೂ. ವರೆಗೆ ದೇಣಿಗೆ ನೀಡಬಹುದು. ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಡಿಜಿಟಲ್‌ ಮಾಧ್ಯಮದ ಮೂಲಕ ದೇಣಿಗೆ ನೀಡಬೇಕು ಎಂಬ ಷರತ್ತು ಅಮಿತ್‌ ಶಾ ವಿಧಿಸಿದ್ದಾರೆ ಎನ್ನಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ