ಭೂಲೋಕದ ಸ್ವರ್ಗಹೊಗೇನಕಲ್‌ ಫಾಲ್ಸ್‌

Team Udayavani, Feb 7, 2019, 8:51 AM IST

ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ಹೊಗೇನಕಲ್‌ ಫಾಲ್ಸ್ ವೈಶಿಷ್ಟ್ಯಪೂರ್ಣ ಜಲಪಾತವೆಂಬ ಹೆಸರು ಪಡೆದಿದೆ. ಪ್ರಕೃತಿ, ನೀರಿನ ಸೌಂದರ್ಯದ ಮಧ್ಯೆ ಬೋಟಿಂಗ್‌ ಒಂದು ಉತ್ತಮ ಮನೋರಂಜನೆಯನ್ನು ನೀಡುತ್ತದೆ.

ಕರ್ನಾಟಕ ಕಾಡು ಮೇಡುಗಳಿಂದ ಕೂಡಿದ ಜಲಪಾತಗಳ ನಾಡು ಎನ್ನುತ್ತಾರೆ. ಈ ಮಾತಿಗೆ ಅನ್ವರ್ಥ ಎಂಬಂತೆ ನಾಡಿ ನಲ್ಲಿ ನೂರಾರು ಜಲಪಾತಗಳಿವೆ. ಇಲ್ಲಿನ ಪರ್ವತ, ಗಿರಿ, ಶಿಖರಗಳಲ್ಲಿ ನದಿಗಳು ಹರಿಯುತ್ತಾ ಮುಂದಕ್ಕೆ ಚಲಿಸುವಾಗ ಅಲ್ಲಲ್ಲಿ ಭಿನ್ನ ರೀತಿಯ ಜಲಪಾತಗಳನ್ನು ಸೃಷ್ಟಿಸಿ, ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಇಂಥ ವೈಶಿಷ್ಟ್ಯಪೂರ್ಣ ಜಲಪಾತಗಳ ಪೈಕಿ ಕರ್ನಾಟಕದ ಗಡಿ ಭಾಗದ, ಕಾವೇರಿ ನದಿಗೆ ಹೊಂದಿಕೊಂಡಿರುವ ಹೊಗೇನಕಲ್‌ ಜಲಪಾತವೂ ಒಂದು. ಈ ಜಲಪಾತದಲ್ಲಿ ನೀರು ಹೊಗೆಯ ರೂಪದಲ್ಲಿ ಕೆಳಗೆ ಧುಮ್ಮಿಕ್ಕುತ್ತದೆ. ಈ ಕಾರಣ ದಿಂದಲೇ ಜಲಪಾತಕ್ಕೆ ಹೊಗೇನಕಲ್’ ಎಂಬ ಹೆಸರು ಬಂದಿದೆ.

ವೈರುಧ್ಯ ಎಂದರೆ, ಈ ಜಲಪಾತದ ವೀಕ್ಷಣೆಯ ಭಾಗವು ತಮಿಳುನಾಡಿಗೆ ಸೇರಿದ್ದು, ನೀರು ಧುಮುಕುವ ಸ್ಥಳ ಕರ್ನಾಟಕಕ್ಕೆ ಸೇರಿದೆ. ಇದು ಸುಮಾರು 72 ಅಡಿ ಎತ್ತರದ ಕಲ್ಲು ಬಂಡೆಗಳಿಂದ ರಭಸವಾಗಿ ಧುಮುಕುವಾಗ, ನೀರು ಹೊಗೆಯಾಗುತ್ತದೆ. ಅಗಲವಾಗಿ ಕೆಳಕ್ಕೆ ಬೀಳುವುದರಿಂದ ದೂರದಿಂದ ಈ ಜಲಪಾತದ ಸೌಂದರ್ಯವನ್ನು ನೋಡುವುದೇ ಬಲು ಚೆಂದ. ಹರಿವ ನೀರು ಕವಲುಗಳಾಗಿ ಕೆಳಕ್ಕೆ ಧುಮುಕುವುದರಿಂದ ಸಣ್ಣಪುಟ್ಟ ಜಲಪಾತಗಳಿಗೆ ಮರು ಜೀವ ಬಂದಿದೆ. ಅದರಲ್ಲೂ ಇಲ್ಲಿನ ಒಂದು ಕವಲು ಜಲಪಾತವಂತೂ ಸುಮಾರು 20 ಮೀಟರ್‌ ಅಗಲದಲ್ಲಿ ವಿಶಾಲವಾಗಿ ಹರಡಿರುವುದರಿಂದ ನೋಡುಗರ ಪಾಲಿನ ನಯಾಗರವೇ ಆಗಿದೆ.

ಇಲ್ಲಿನ ವಿಭಿನ್ನವಾದ ಕಪ್ಪು ಬಣ್ಣದ ಕಲ್ಲುಗಳು ವಿಶಿಷ್ಟ ಆಕಾರ ಹೊಂದಿವೆ. ಧುಮುಕುವ ನೀರು ಕೆತ್ತಿದ ಕಲಾಕೃತಿಗಳೇ ಆಗಿವೆ. ಜಲಪಾತದ ವೇಗಕ್ಕೆ ಉಂಟಾದ ಕಲ್ಲಿನ ಕಲಾಕೃತಿಗಳನ್ನು ಜಲಪಾತದ ತಳಭಾಗಕ್ಕೆ ತೆರಳಿ ನೋಡುವುದೇ ಪ್ರವಾಸಿಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಜಲಪಾತದ ನೀರು ಬೀಳುವ ಸ್ಥಳದಿಂದ ಸುಮಾರು 20 ಮೀಟರ್‌ ದೂರದವರೆಗೆ ಹೊಗೆಯಂತಹ ಇಬ್ಬನಿಯು ಎಲ್ಲರನ್ನೂ ಆಕರ್ಷಿಸುತ್ತದೆ.

ಪ್ರಯಾಣಿಕರನ್ನು ಕರೆದೊಯ್ಯಲು ಬಳಕೆಯಾಗುವ ಹರಿಗೋಲು ಸುಮಾರು 2.5 ಮೀ. ಉದ್ದವಿದ್ದು ಮತ್ತು ಅಷ್ಟೇ ಅಗಲ ಇರುತ್ತದೆ. ಇದನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಕೇವಲ ಒಂದು ದಿನದಲ್ಲಿ ಬಿದಿರಿನಿಂದ ದೋಣಿ ಹಾಗೂ ಹರಿಗೋಲನ್ನು ಇಲ್ಲಿನ ಅಂಬಿಗರು ಸಿದ್ಧಪಡಿಸುತ್ತಾರೆ. ಈ ದೋಣಿಗಳ ತಳಭಾಗ ನೀರು ನಿರೋಧಕವಾಗಿದೆ. ಹರಿಗೋಲಿನ ತಳಭಾಗವನ್ನು ಪ್ರಾಣಿಗಳ ತೊಗಲಿನಿಂದ ಮುಚ್ಚುವ ಪರಿಪಾಠವಿದೆ. ಕೆಲವೊಮ್ಮೆ ಪ್ಲಾಸ್ಟಿಕ್‌ ಹಾಳೆಗಳಿಂದ ಮುಚ್ಚಿರುತ್ತಾರೆ. ಈ ಜಲಪಾತದ ಸುತ್ತಮುತ್ತ ಪ್ಲಾಸ್ಟಿಕ್‌ ಬಳಕೆಗೆ ನಿಷೇಧವಿದ್ದು, ಇಲ್ಲಿನ ದೋಣಿಗಳ ತಳಭಾಗವನ್ನು ಪ್ಲಾಸ್ಟಿಕ್‌ನಿಂದ ಮುಚ್ಚುವುದಕ್ಕೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.

ಲೈಫ್ ಜಾಕೆಟ್ ಉಂಟು
ಸುರಕ್ಷತತೆಯ ದೃಷ್ಟಿಯಿಂದ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿಕೊಂಡೇ ಕುಳಿತುಕೊಳ್ಳಬೇಕೆಂಬ ನಿಯಮವಿದೆ. ಇಲ್ಲಿನ ದೋಣಿಗಳು ನೋಡಲು ವೃತ್ತಾಕಾರದಿಂದ ಕೂಡಿವೆ. ಜಲಪಾತದ ತಳಭಾಗಕ್ಕೆ ದೋಣಿಗಳು ತಲುಪುತ್ತಿದ್ದಂತೆ ಅಂಬಿಗರು ಅತ್ಯಂತ ವೇಗವಾಗಿ ತಮ್ಮ ಹರಿಗೋಲಿನ ಮೂಲಕ ದೋಣಿಯನ್ನು ವೃತ್ತಾಕಾರದಲ್ಲಿ ತಿರುಗಿಸುವ ಮೂಲಕ ಪ್ರವಾಸಿಗರಿಗೆ ಖುಷಿ ಮತ್ತು ರೋಮಾಂಚನ ಉಂಟು ಮಾಡುತ್ತಾರೆ. ಜಲಪಾತದ ಕಲ್ಲು ಬಂಡೆಗಳ ಮಧ್ಯೆ ನೀರನ್ನು ಸೀಳುತ್ತ ಸಾಗುವಾಗ ವಿವಿಧ ಕೋನಗಳಲ್ಲಿ ಪ್ರವಾಸಿಗರು ತಮ್ಮ ಮೊಬೈಲ್‌ ಹಾಗೂ ಕೆಮರಾಗಳ ಮೂಲಕ ಫೋಟೋಗಳನ್ನು ಚಿತ್ರೀಕರಿಸಿಕೊಳ್ಳಬಹುದು. ಆದರೆ ಜಲಪಾತದ ತಳಭಾಗಕ್ಕೆ ತಲುಪುವ ಸಂದರ್ಭದಲ್ಲಿ ಜಲಪಾತದ ನೀರು ದೋಣಿಯ ಮೇಲಕ್ಕೂ ಬೀಳುವುದರಿಂದ ಕೆಮರಾವನ್ನು ಹೆಚ್ಚು ಸುರಕ್ಷಿತವಾಗಿಟ್ಟುಕೊಳ್ಳುವುದು ಅಗತ್ಯ.

ಬೋಟಿಂಗ್‌
ಹೊಗೇನಕಲ್‌ ಜಲಪಾತ ವಿಶೇಷ ಎಂದರೆ ಬೋಟಿಂಗ್‌. ವಿವಿಧ ಕೋನಗಳಲ್ಲಿ ಕಲ್ಲು ಬಂಡೆಗಳ ನಡುವೆ ಧುಮ್ಮಿಕ್ಕುವ ನೀರನ್ನು ಬೋಟ್ ಮೂಲಕ ನೋಡಬಹುದು. ಅಷ್ಟೇ ಅಲ್ಲ, ಜಲಪಾತದ ಪಾದವನ್ನು ಮುಟ್ಟಿ ಬರಬಹುದು. ನದಿಯ ದಡದಲ್ಲಿ ಬೋಟ್ ನಿಲ್ಲುವ ಸ್ಥಳಕ್ಕೆ ಮತ್ತು ಜಲಪಾತದ ನೀರು ಬೀಳುವ ಸ್ಥಳಕ್ಕೆ ಸುಮಾರು ಒಂದು ಕಿ.ಮೀ. ದೂರವಿದೆ. ಇಲ್ಲಿನ ಬೋಟ್ ಚಾಲಕರು ವಿವಿಧ ತಂಡಗಳಲ್ಲಿ ಗರಿಷ್ಠ ಒಂದು ಬೋಟ್ ಒಳಗೆ ನಾಲ್ಕು ಮಂದಿಯಂತೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಾರೆ.

ರೂಟ್‌ ಮ್ಯಾಪ್‌
 ▷ಬೆಂಗಳೂರಿನಿಂದ ಹೊಗೇನೆಕಲ್‌ ಎನ್‌.ಎಚ್.7 ರಲ್ಲಿ ಹೋಗಬಹುದಾಗಿದ್ದು, ಸುಮಾರು 180 ಕಿ.ಮೀ. ಅಂತರವಿದೆ.
▷ಬೆಂಗಳೂರು- ಮಾಲೂರು – ಹೊಸೂರಿನಿಂದ ಧರ್ಮಪುರಿಗೆ ಹೋಗಬೇಕು.
▷ ಧರ್ಮಪುರಿನಯಿಂದ 47 ಕಿ.ಮೀ.ಅಂತರದಲ್ಲಿರುವುದೇ ಹೊಗೇನಕಲ್‌.
▷ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಊಟ, ತಿಂಡಿ ಹಾಗೂ ಬಸ್‌ಗಳು ಲಭ್ಯವಿವೆ.

ಪ್ರಕೃತಿಯ ಮಡಿಲಲ್ಲಿ ದೇವರಮನೆ

Team Udayavani, Jan 31, 2019, 7:57 AM IST

ಸಾಮಾನ್ಯವಾಗಿ ಎಲ್ಲ ಉದ್ಯೋಗಸ್ಥರೂ ರವಿವಾರ ಎಂಬ ರಿಲೀಫ್ ಗಾಗಿ ಕಾಯುತ್ತಿರುತ್ತಾರೆ. ಅದು ವಿರಾಮಕ್ಕಿರಬಹುದು, ಮೋಜಿಗಿರಬಹುದು, ಅತಿ ನಿದ್ದೆಗಿರಬಹುದು ಅಥವಾ ಎಲ್ಲಾದರು ಸುತ್ತಾಟಕ್ಕೆ ಆ ಒಂದು ದಿನವನ್ನು ಕಾಯುತ್ತಿರುತ್ತಾರೆ. ಅದರಂತೆ ಆ ದಿನಕ್ಕೆ ಕಾಯುತ್ತಿರುವ ನಾನು ಆ ದಿನ ಬಂದೇ ಬಿಟ್ಟಿತು.

ಅಂದು ರವಿವಾರ ಉಜಿರೆಯ ಶ್ರೀ ಧರ್ಮ ಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬಂದಿ ತಮ್ಮ ಈ ಶೈಕ್ಷಣಿಕ ವರ್ಷದ ಪಿಕ್ನಿಕ್‌ನ್ನು ಆಯೋಜಿಸಿದ ದಿನ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಬೆಟ್ಟ ಹಾಗೂ ಎತ್ತಿನ ಭುಜ ಸ್ಥಳಗಳು ಎಂದೊಡನೆ ನಮ್ಮ ಉತ್ಸಾಹ ಇನ್ನೂ ಹಿಮ್ಮಡಿಯಾಯಿತು. ರವಿವಾರ ಮುಂಜಾನೆ ಸೂರ್ಯ ಮೂಡಿರಲಿಲ್ಲ, ಅಷ್ಟರೊಳಗೆ ಎಸ್‌ಡಿಎಂ ಕಾಲೇಜಿನ ಅಂಗಳದಲ್ಲಿ ಎಲ್ಲ ಸಿಬಂದಿಗಳು ಸೇರಿದ್ದರು. ಆದರೆ ವಾಹನ ವಿಳಂಬವಾಗಿ ಸುಮಾರು 7 ಗಂಟೆಗೆ ಬಸ್‌ ಹತ್ತಿದೆವು. ಸುಖ ಪ್ರಯಾಣಕ್ಕಾಗಿ ಮೊದಲು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ಸ್ತುತಿಯೊಂದಿಗೆ ಪ್ರಯಾಣವನ್ನು ಆರಂಭಿಸಲಾಯಿತು.

ಉಜಿರೆ-ಮುಂಡಾಜೆ- ಚಾರ್ಮಾಡಿ ಮಾರ್ಗವಾಗಿ ನಮ್ಮ ಪಯಣ ಸಾಗಿತು. ಸುಮಾರು 2-3 ಗಂಟೆಗಳ ಪಯಣ. ನಮ್ಮ ಬಸ್ಸಿನಲ್ಲಿ ಹಳೆಬೇರು-ಹೊಸ ಚಿಗುರು ಎಂಬಂತೆ ಹಿರಿಯ ಹಾಗೂ ಕಿರಿಯ ಉಪನ್ಯಾಸಕರ ಸಮ್ಮಿಳಿತವಿದ್ದದ್ದು ವಿಶೇಷ. ಪ್ರಯಾಣದ ಸಮಯದಲ್ಲಿ ಸುಮ್ಮನೆ ಕುಳಿತು ಪಯಣಿಸುವುದಕ್ಕಿಂತ ಬಸ್ಸಿನ ನಡುವಿರುವ ಕಿರುಜಾಗವನ್ನೇ ನಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನಾಗಿಸಲಾಯಿತು.

ಚಾರ್ಮಾಡಿ ಘಾಟ್ ಪ್ರವೇಶಿಸಿದಾಕ್ಷಣ ಪ್ರಕೃತಿಯ ರಮ್ಯತೆಯನ್ನು ಆಸ್ವಾದಿಸುತ್ತಾ ಚುಮು-ಚುಮು ಚಳಿಯ ಹಿತಾನುಭವ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯಿತು. ಕೊಟ್ಟಿಗೆಹಾರ ಮಾರ್ಗವಾಗಿ ಸುಮಾರು 15-16 ಕಿ.ಮೀ. ಬಲಕ್ಕೆ ತಿರುಗಿದರೆ ದೇವರಮನೆ ಬೆಟ್ಟಕ್ಕೆ ಕಿರಿದಾದ ಏರಿಳಿತದ ಹಾದಿ ಸಿಗುತ್ತದೆ. ದಾರಿಮಧ್ಯೆ ಕಾಫಿತೋಟದ ನಡುವೆ ಪೂರ್ವನಿಗಧಿಯಂತೆ ನಮ್ಮ ಉಪಾಹಾರವನ್ನು ಮುಗಿಸಿ ಮತ್ತೆ ಪ್ರಯಾಣ ಮುಂದುವರಿಸಿ, ದೇವರಮನೆ ಬೆಟ್ಟ ತಲುಪಿದೆವು. ಅಲ್ಲೊಂದು  ಸುಂದರ ಸಂಪೂರ್ಣ ಕಲ್ಲಿನಲ್ಲಿಯೇ ಕಟ್ಟಿದ ಕಾಲಭೈರವೇಶ್ವರ ದೇವಸ್ಥಾನ, ಹೊರಗಡೆ ಎಷ್ಟೇ ಬಿಸಿಲ ಝಳವಿದ್ದರೂ ದೇವಸ್ಥಾನದ ಒಳಗಡೆ ಆಹ್ಲಾದಕರ ವಾತಾವರಣ. ಕಾಲ ಭೈರವೇಶ್ವರನಿಗೆ ನಮಸ್ಕರಿಸಿ ಅಲ್ಲಿಯೇ ಇರುವ ಬೆಟ್ಟವನ್ನು ಹತ್ತಲು ಆರಂಭಿಸಿದೆವು. ಅದ್ಭುತಸೌಂದರ್ಯ!! ಒಂದೆಡೆ ಎತ್ತರದ ಬೆಟ್ಟಗಳ ಸಾಲು, ಇನ್ನೊಂದೆಡೆ ಅಷ್ಟೇ ಆಳವಾದ ಕಂದಕಗಳ ಸಾಲು, ಅದರ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು. ಎಲ್ಲರೂ ಸ್ವಚಿತ್ರ (ಸೆಲ್ಫಿ) ತೆಗೆಯುವುದರಲ್ಲಿಯೇ ಮಗ್ನರಾಗಿದ್ದರು. ಅಂತೂ ಮನಸೋ ಇಚ್ಛೆ ಅಲ್ಲಿ ಸುತ್ತಾಡಿದ ಅನಂತರ ನಮ್ಮ ಇನ್ನೊಂದು ತಾಣವಾದ ಎತ್ತಿನ ಭುಜದತ್ತ, ಪ್ರಯಾಣಿಸಿದೆವು.

ಶಿಖರದ ತುದಿಗೆ ಹೋಗಬೇಕಾದರೆ ಜಾಗೃತೆ ವಹಿಸಬೇಕಾಗುತ್ತದೆ. ಆಯ ತಪ್ಪಿದರೆ ಅಪಾಯ. ಈ ನಡುವೆಯೂ ಶಿಖರದ ತುದಿಯನ್ನು ತಲುಪಿದೆವೂ. ಅಲ್ಲಿಂದ ಕೆಳಗೆ ನೋಡಿದರೆ ಮೈ ಜುಂ ಎನಿಸಿತು.

ದೂರದಿಂದ ನೋಡಿದಾಗ ಮಲಗಿರುವ ಎತ್ತಿನ ಭುಜದ ರೀತಿ ಈ ಬೆಟ್ಟಕಾಣುವುದರಿಂದ ಆ ರೀತಿಯ ಹೆಸರು ಬಂದಿದೆ. ಅತೀ ಎತ್ತರದಿಂದ ನಿಂತು ಸುತ್ತ-ಮುತ್ತ ಕಾಣುವ ಊರುಗಳನ್ನು, ಇನ್ನಿತರ ಗಿರಿಶಿಖರಗಳನ್ನು ನೋಡುತ್ತಾ ನಿಂತರೆ ಮೈ-ಮನ ಮರೆತು ಹೋಗುತ್ತದೆ. ಒಂದೆಡೆ ಸುಡುವ ಬಿಸಿಲು, ಇನ್ನೊಂದೆಡೆ ಹಿತವಾದ ಗಾಳಿಯು ಸೇರಿ ನಮ್ಮ ಪ್ರಯಾಸವನ್ನು ಮರೆಸಿದ್ದವು. ಅಷ್ಟೇ ಜಾಗೃತಿಯಿಂದ ಬೆಟ್ಟವನ್ನು ಇಳಿದು ಬಸ್‌ನಲ್ಲಿ ಕುಳಿತರೇ, ಎತ್ತಿನಭುಜದ ನೈಸರ್ಗಿಕ ವಿಸ್ಮಯ, ರಮ್ಯತೆ ನಮ್ಮನ್ನು ಆವರಿಸಿತ್ತು. ಇಂತಹ ನೈಸರ್ಗಿಕ ಸೌಂದರ್ಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಮಾಡುವುದು ಕಂಡು ಮನಸ್ಸಿಗೆ ಖೇದ ಎನಿಸಿತು.

ಸಾಹಸ ಚಾರಣಕ್ಕೆ ಎತ್ತಿನ ಭುಜ
ದೇವರಮನೆ ಕಾಡಿನಿಂದ ಸುಮಾರು 25 ಕಿ.ಮೀ. ಮೂಡಿಗೆರೆ-ಭೈರಾಪುರ ಮಾರ್ಗವಾಗಿ ಚಲಿಸ ಬೇಕು. ಎತ್ತಿನಭುಜ ಗಿರಿ ಸಮೀಪಿಸುತ್ತಿರುವುದು ದೂರದಿಂದಲೇ ಗೋಚರವಾಯಿತು. ಈ ಗಿರಿ ಗಿಂತ ಸರಿಸುಮಾರು 2-3 ಕಿ.ಮೀ. ಹಿಂದೆಯೆ ಒಂದು ನಾಣ್ಯ ಭೈರವ ದೇವಸ್ಥಾನ ಇದೆ. ಇಲ್ಲಿಯೇ ವಾಹನ ನಿಲ್ಲಿಸಿ ಎತ್ತಿನಭುಜಕ್ಕೆ ಚಾರಣ ಹೋಗಬೆಕು. ದೇವಸ್ಥಾನದ ಪರಿಸರದಲ್ಲಿ ನಾವು ತೆಗೆದು ಕೊಂಡು ಹೋದ ಊಟವನ್ನು ಮುಗಿಸಿ ಚಾರಣಕ್ಕೆ ಅಣಿಯಾದೆವು. ಕಲ್ಲು-ಮುಳ್ಳುಗಳ ದುರ್ಗಮವಾದ ಕಾಡು ಹಾದಿ ದೂರದಲ್ಲೆಲ್ಲೊ  ಎತ್ತರದ ಶಿಖರ ಕಾಣಿಸುತ್ತದೆ. ಆ ಶಿಖರದ ತುತ್ತತುದಿ ಏರ ಬೇಕೆಂದರೆ ಏಂಟೆದೆಬೇಕು ಅನಿಸುತ್ತದೆ. ಅಂತಹ ಕಲ್ಲಿನ ಶಿಖರವದು. ಪ್ರಾರಂಭದಲ್ಲಿ ಬೆಟ್ಟ ಏರು ವಲ್ಲಿರುವ ಉತ್ಸಾಹ ಕ್ರಮೇಣ ಕುಸಿಯತೊಗಿತು. ಸುಸ್ತಾಗಿದ್ದರೂ ಕೆಲವರಿಗೆ ಶಿಖರದ ತುದಿ ತಲುಪಬೇಕು ಎಂಬ ಹಂಬಲ.

ರೂಟ್‌ ಮ್ಯಾಪ್‌
▷ ಉಜಿರೆ-ಮುಂಡಾಜೆ- ಚಾರ್ಮಾಡಿ- ಕೊಟ್ಟಿಗೆಹಾರ ಮಾರ್ಗವಾಗಿ 15 ಕಿ.ಮೀ ಚಲಿಸಿದರೆ ದೇವರಮನೆ ಬೆಟ್ಟ

▷ಕಿರಿದಾದ ಬೆಟ್ಟಗಳು ಇರವುದರಿಂದ ಎಚ್ಚರ ಅಗತ್ಯ.

▷ದೇವರುಮನೆಯಿಂದ 25 ಕಿ.ಮೀ. ಮೂಡಿಗೆರೆ-ಭೈರಾಪುರ ಮಾರ್ಗವಾಗಿ ಚಲಿಸಿದರೆ ಎತ್ತಿನಭುಜ

▷ಊಟ, ತಿಂಡಿಗೆ ಹೊಟೇಲ್‌, ರೆಸ್ಟೋರೆಂಟ್‌ಗಳು ಕಡಿಮೆ, ಊಟ, ಉಪಾಹಾರ ನಾವೇ ತೆಗದುಕೊಂಡು ಹೋಗುವುದು ಒಳಿತು.

ಕಳಚೆ ಕಲ್ಲು , ಸೊಬಗು ಕಣ್ತುಂಬಿ ಕೊಂಡಾಗ…

Team Udayavani, Jan 24, 2019, 7:39 AM IST

ಕಾನೂರು ಜಲಪಾತವನ್ನು ನೋಡಿ ವಾಪಸ್‌ ಬರುತ್ತಿದ್ದಾಗ ಆಗಲೇ ಗಂಟೆ ಐದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕಾರವಾರದ ವ್ಯಾಪ್ತಿಗಳು ಸೇರುವ ಸ್ಥಳದಲ್ಲೇ  ಈ ಕಾನೂರು ಜಲಪಾತವಿದೆ. ಬೆಳಗ್ಗಿನಿಂದ ಸಾಕಷ್ಟು ಚಾರಣಿಸಿ ಸುಸ್ತಾಗಿದ್ದರಿಂದ ಹೆಜ್ಜೆಗಳನ್ನು ಲೆಕ್ಕಹಾಕುವ ಪರಿಸ್ಥಿತಿ ಉಂಟಾಗಿತ್ತು. ಆಗಲೇ ಸ್ನೇಹಿತನೊಬ್ಬ ಶುರುಹಚ್ಚಿಕೊಂಡಿದ್ದ… ಅದೇನೆಂದರೆ, ಇನ್ನು ಸ್ವಲ್ಪ ದೂರದಲ್ಲಿ ಕಳಚೆ ಅನ್ನೋ ಊರಿದೆ. ಅಲ್ಲಿರುವ ಕಲ್ಲು ನೋಡದಿದ್ದರೆ ನಮ್ಮ ಪ್ರವಾಸ ಅಪೂರ್ಣ ಅಂತ. ಈ ಪ್ರವಾಸಕ್ಕೆ ಬಹಳಷ್ಟು ದಿನಗಳಿಂದ ಸ್ಕೆಚ್ ಹಾಕಿದ್ದರಿಂದ ಮತ್ತೊಮ್ಮೆ ಇಲ್ಲಿಗೆ ಬರುವ ಸಾಧ್ಯತೆ ಕಡಿಮೆ ಎಂಬುದು ಖಚಿತವಾಗಿತ್ತು. ಹೀಗಿರುವಾಗ ಇನ್ನೊಂದು ಸ್ವಲ್ಪ ದೂರ ಅಷ್ಟೇ ಅಲ್ವಾ? ಸರಿ, ಹೋಗೇ ಬಿಡೋಣವೆಂದು ಎಲ್ಲರೂ ಒಪ್ಪಿದರು.

ಎಲ್ಲರೂ ಬೈಕನ್ನೇರಿ ಕಳಚೆಯತ್ತ ಸಾಗಿದೆವು. ಅಂದಹಾಗೆ, ಈ ಕಳಚೆಯೆಂಬ ಹಳ್ಳಿ ಇರುವುದು ಯಲ್ಲಾಪುರದ ತುದಿಯಲ್ಲಿ . ಕಾರವಾರದಿಂದ ಪ್ರಯಾಣಿಸುವವರು ಕೈಗಾ – ಬಾರೆ – ಯÇ್ಲಾಪುರ ರಸ್ತೆಯಲ್ಲಿ ಸಾಗಿ ನೇರವಾಗಿ ಕಳಚೆಗೆ ಹೋಗಬಹುದು. ಯಲ್ಲಾಪುರದಿಂದ ಅಂಕೋಲಾ ರಸ್ತೆಯಲ್ಲಿ ಸಾಗುವಾಗ ಸಿಗುವ ಮೊದಲ ಗ್ರಾಮವಾದ ಇಡಗುಂದಿಯಿಂದ ಬಲಕ್ಕೆ ಸಿಗುವ ಅರಣ್ಯ ಚೆಕ್‌ಪೋಸ್ಟ್‌ನಿಂದ ಕೈಗಾ ರಸ್ತೆಯಲ್ಲಿ ಸಾಗಬೇಕು. ದಟ್ಟ ಅರಣ್ಯವನ್ನು ಸೀಳಿ ಸಾಗುವ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳಿಂದ ಹಿತಾನುಭವ.

ರಸ್ತೆಗುಂಟ ಅಲ್ಲಲ್ಲಿ ಇಣುಕುತ್ತಿದ್ದ ರಸ್ತೆ ಫ‌ಲಕಗಳ ಕಾರಣ ಕಳಚೆ ಹಳ್ಳಿಯನ್ನು ಹುಡುಕುವುದು ಕಷ್ಟವಾಗಲಿಲ್ಲ. ದಾರಿಯಲ್ಲೇ  ಸಿಕ್ಕಿದ್ದ ಭಟ್ಟರ ಖಾನಾವಳಿಯಲ್ಲಿ ಊರಿನ ದಾರಿ ಕೇಳಲಾಗಿ ಹಿಂಗೇ ಮುಂದೆ ಹೋಗ್ರಿ ಎಂದು ಕೈತೋರಿಸಿದರು.

ಅಲ್ಲಿಂದ ಸ್ವಲ್ಪವೇ ದೂರ ಸಾಗಿದಾಕ್ಷಣ ಧುತ್ತನೆ ಎದುರಾಗಿದ್ದು ಈ ಕಲ್ಲು. ಲಗುಬಗನೇ ಮೆಟ್ಟಿಲನ್ನೇರಿ ಕಲ್ಲಿನ ಮೇಲ್ಭಾಗಕ್ಕೆ ಬಂದೆವು. ಹೌದು, ಸ್ನೇಹಿತ ಹೇಳಿದ್ದು ಸರಿಯಾಗೇ ಇತ್ತು. ಸುತ್ತಲೂ ಎಲ್ಲಿ ನೋಡಿದರಲ್ಲಿ ಹಸುರೋ ಹಸುರು, ಆ ದಟ್ಟ ಅರಣ್ಯವನ್ನು ಸೀಳಿ ನುಗ್ಗುವ ಕಾಳಿ ನದಿ, ಚೀಂವ್‌ ಗುಡುತ್ತಿರುವ ಖಗ ಸಮೂಹ, ಎಲ್ಲಿಂದಲೋ ಬಂದು ನಿಧಾನವಾಗಿ ಅಪ್ಪಿಕೊಳ್ಳುವ ತಂಗಾಳಿ… ಆಹಾ… ಸ್ವರ್ಗಕ್ಕೆ ಮೂರೇ ಗೇಣು. ಕಲ್ಲಿನ ಮೇಲಿನಿಂದ ನೋಡಿದಾಗ ಕೆಂಪು ಕಿತ್ತಳೆ ಹಣ್ಣಿನಂತೆ ಕಂಗೊಳಿಸುತ್ತಿದ್ದ ಮುಳುಗುತ್ತಿದ್ದ ಸೂರ್ಯನಂತೂ ನಮ್ಮ ಹಿತಾನುಭವಕ್ಕೆ ಹೊಸ ಭಾಷ್ಯ ಬರೆದಿದ್ದ.

ರುದ್ರರಮಣೀಯ ನೈಸರ್ಗಿಕ ತಾಣ
ಇಲ್ಲಿರುವುದು ಏಕಶಿಲೆಯ ಕಲ್ಲು. ಏಕಶಿಲೆ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಯಾಣ. 390 ಅಡಿ ಎತ್ತರದ ಯಾಣದ ಶಿಖರಕ್ಕೆ ಹೋಲಿಸಿದರೆ 80 ಅಡಿಯ ಕಳಚೆಯ ಕಲ್ಲಿನ ಗಾತ್ರ ಚಿಕ್ಕದಾಗಿದ್ದರೂ ರಚನೆಯಲ್ಲಿ ಸಾಮ್ಯತೆ ಇದೆ. ಅಲ್ಲಿಯಂತೆಯೇ ರುದ್ರರಮಣೀಯ ನೈಸರ್ಗಿಕ ತಾಣದಲ್ಲಿದೆ. ಶಿಲೆಯ ಮೈ ಪೂರ್ತಿ ಹಸುರು ಹೊದ್ದುಕೊಂಡಿದೆ. ಅಲ್ಲಲ್ಲಿ, ಪುಟ್ಟ ಪುಟ್ಟ ಗಿಡಗಳು ತಲೆದೂಗುತ್ತಿದ್ದವು. ದೂರದಿಂದ ನೋಡಿದರೆ, ಯಾರೋ ನಿಂತಂತೆಯೂ, ಹತ್ತಿರ ಹೋದಂತೆ ಸಿನೆಮಾ ಸೆಟ್ಹಾಕಿದ ಕಂಬದಂತೆಯೂ ಕಾಣಿಸುವ ಈ ಪ್ರಕೃತಿ ವೈಭವ, ಬುಡದ ಬಳಿ ನಿಂತು ಮೈಯನ್ನು ಸವರಿದಾಗ ಮಾತ್ರ ಕಲ್ಲು ಅನ್ನೋದು ತಿಳಿದದ್ದು. ಶಿಲೆಯ ಬೆನ್ನ ಮೇಲೆ ಪ್ರಕೃತಿ ಕೆತ್ತನೆ ಮಾಡಿದೆ. ಎಲ್ಲೂ ಕೂಡ ಸಮತಟ್ಟು, ನುಣ್ಣಗಿಲ್ಲ. ಶಿಲೆಯ ಹಿಂದಿರುವ ಕೊಡಸಳ್ಳಿ ಆಣೆಕಟ್ಟಿನ ಹಿನ್ನೀರಿನ ಸೊಬಗಿನಿಂದ ಇದರ ಸೌಂದರ್ಯ ಇಮ್ಮಡಿಸಿದೆ. ಎದುರಿಗೆ ನಿಂತಾಗ ನಿಶ್ಶಬ್ದದಲ್ಲಿ ಏಳುತ್ತಿದ್ದ ಗಾಳಿಯ ತರಂಗಗಳದ್ದೇ ಹೊಸ ಭಾಷೆಯಾಗಿತ್ತು. ನಮಗಾರಿಗೂ ಅದು ಅರ್ಥವಾಗದೇ ಇರುವುದರಿಂದ ಹಾಗೇ ನೋಡುತ್ತಾ ತಲ್ಲೀನರಾದೆವು.

ಆ ಹೊತ್ತಿಗೆ, ಹೊಟ್ಟೆ ಚುರುಗುಟ್ಟಿತು. ವಾಪಸ್‌ ಬರುವಾಗ ಭಟ್ಟರ ಖಾನಾವಳಿಯÇ್ಲೊಂದು ಸ್ಟಾಪ್‌ ಕೊಟ್ಟೆವು. ಭಟ್ಟರನ್ನು ಮಾತಿಗೆಳೆದೆರೆ- ಈ ಕಲ್ಲಿಗೆಷ್ಟು ವಯಸ್ಸಾಯಿತು, ನಂಗೆ ಗೊತ್ತಿಲ್ಲ. ನನ್ನ ಮುತ್ತಜ್ಜನ ಕಾಲದಿಂದ ಇಲ್ಲೈತಿ . ನಾವು ಊರೌರು ಇದ್ಕೆ ದೇವಕಲ್ಲು ಅಂತಿದ್ರು ಎಂದರು ಭಟ್ಟರು.

ಅಂದಹಾಗೆ, ಇಲ್ಲಿ ವರ್ಷಕ್ಕೊಮ್ಮೆ ಉತ್ಸವ ಕೂಡ ನಡೆಯುತ್ತದೆ. ದೀಪಾವಳಿಯಲ್ಲಿ ಜಾನುವಾರುಗಳ ರಕ್ಷಣೆ ಬಗ್ಗೆ ಸ್ಥಳೀಯರಿಂದ ಈ ಕಲ್ಲಿಗೆ ವಿಶೇಷ ಪೂಜೆಯೂ ಆಗುವುದುಂಟು. ಗುಡ್ಡದಲ್ಲಿ ಸ್ಥಿತವಾಗಿರುವ ಹುಲಿರಾಯ ತಮ್ಮ ಜಾನುವಾರುಗಳನ್ನು ರಕ್ಷಿಸುತ್ತಾನೆ ಎಂಬುದು ಊರವರ ಭಾವನೆ.

ವಾಪಸ್‌ ಬಂದ ಮೇಲೆ ಕಳಚೆಯ ಈ ಕಲ್ಲಿನ ಬಗ್ಗೆ ವಿಚಾರಿಸಲಾಗಿ ಎಲ್ಲೂ ಏನೂ ಮಾಹಿತಿಯೂ ದೊರೆಯಲಿಲ್ಲ. ಈ ಸ್ಥಳಕ್ಕೆ ಹೋದರೆ ಬೋನಸ್‌ ಉಂಟು. ಕಾನೂರು (ದೇವಕಾರ) ಜಲಪಾತ , ಕದ್ರಾ ಆಣೆಕಟ್ಟುಗಳನ್ನೂ ನೋಡಬಹುದು. ಕಳಚೆ ಕಲ್ಲಿರುವ ಪ್ರದೇಶಕ್ಕೆ ಭೇಟಿ ನೀಡುವವರಿಗೆ, ಶಿಲೆಯ ಮೇಲೆ ನಿರ್ಮಿಸಿರುವ ವೀಕ್ಷಕರ ಗ್ಯಾಲರಿ (ವ್ಯೂ ಪಾಯಿಂಟ್) ಯಲ್ಲಿ ನಿಂತು ಸೂರ್ಯಾಸ್ತ ವನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶವೂ ಉಂಟು.

ರೂಟ್‌ ಮ್ಯಾಪ್‌
▷ಮಂಗಳೂರಿನಿಂದ ಸುಮಾರು 305 ಕಿ.ಮೀ. ದೂರ.
▷ಕಾರವಾರ ಅಥವಾ ಯಲ್ಲಾಪುರ ಮಾರ್ಗವಾಗಿ ಹೋಗಬಹುದು.
▷ದಾರಿ ತೋರುವ ರಸ್ತೆ ಫ‌ಲಕಗಳು ಅಲ್ಲಲ್ಲಿ ಇವೆ.
▷ಹತ್ತಿರದಲ್ಲಿ ಹೊಟೇಲ್‌ ಇರುವುದರಿಂದ ಊಟೋಪಹಾರಕ್ಕೆ ಸಮಸ್ಯೆಯಿಲ್ಲ.
▷ಬಸ್‌ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ತೆರಳಿದರೆ ಸುತ್ತಮುತ್ತಲಿನ ಹಲವು ಸ್ಥಳಗಳಿಗೆ ಭೇಟಿ ನೀಡಬಹುದು.
▷ಹತ್ತಿರದಲ್ಲೇ ಇದೆ ಕಾನೂರು ಜಲಪಾತ.

ಸುನೀಲ ಬಾರ್ಕೂರು

ದುರ್ಗಮ ಹಾದಿಯಲ್ಲಿ ಮರೆಯಲಾಗದ ಪಯಣ

Team Udayavani, Jan 17, 2019, 7:42 AM IST

ಹತ್ತಿರ ಇದ್ದ ಫ್ರೆಂಡ್ಸ್‌ ಗಳು ಊರು ಬಿಟ್ಟಿದ್ದರು. ಕೈಯಲ್ಲಿ ಮಾಡೋಕೆ ಹೇಳಿಕೊಳ್ಳುವಂಥ ಕೆಲಸವಿರಲಿಲ್ಲ. ಲೈಫ್ ಈಸ್‌ ಬೋರಿಂಗ್‌ ಅಂತ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್‌ ಹಾಕಿ ಕೂತಿದ್ದೆ. ಅಷ್ಟರಲ್ಲಿ ಯಾರೋ ಒಬ್ಬರು ಎಲ್ಲಾದ್ರೂ ಹೋಗಿ ಬನ್ನಿ, ಚೇಂಜ್‌ ಸಿಗುತ್ತೆ ಅಂದ್ರು. ನನಗೂ ಸರಿ ಅನ್ನಿಸ್ತು. ಆಗನೇ ಹೊಸ ದಾಗಿ ಜತೆಯಾಗಿದ್ದ ಹುಡುಗರ ಜತೆ ಸೇರಿ ವರಂಗಕ್ಕೆ ಹೋಗೋಣ ಎಂದು ತೀರ್ಮಾನಿಸಿ ಬಿಟ್ಟೆವು. ಹಾಗೆಯೇ ಹತ್ತಿರದ ಸೀತಾ ಫಾಲ್ಸ್‌ ನೋಡೋಣ ಅಂದುಕೊಂಡೆವು. 

ಎಲ್ಲರೂ ಶನಿವಾರ ಬೆಳಗ್ಗೆ 6.30ಕ್ಕೆ ಹೊರಡುವ ಯೋಜನೆ ಇತ್ತಾದರೂ ಎಲ್ಲರೂ ಎದ್ದು ಬೈಕ್‌ಗಳಿಗೆ ಪೆಟ್ರೋಲ್‌ ತುಂಬಿಸಿಕೊಂಡು ಮಂಗಳೂರಿನಿಂದ ಹೊರಟಾಗ ಗಂಟೆ ಎಂಟು ದಾಟಿತ್ತು. ರಾಷ್ಟ್ರೀಯ ಹೆದ್ದಾರಿ ಪಡುಬಿದ್ರೆ ಮಾರ್ಗವಾಗಿ ಹೊರಟ ನಾವು ಯೋಜನೆ ಪ್ರಕಾರ ನಡೆಯಲೇ ಇಲ್ಲ. ಬೆಳ್ಮಣ್‌ನಲ್ಲಿ ಉಪಾಹಾರ ಮುಗಿಸಿ ಹೊರಡುವಾಗ ಗಂಟೆ 9.30 ಕಳೆದಿತ್ತು. ಬೈಕ್‌ನಲ್ಲಿ ಜಾಲಿ ರೈಡಿಂಗ್‌ ಮಾಡುತ್ತಾ, ಅಲ್ಲಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತ 10.15ರ ವೇಳೆಗೆ ವರಂಗ ಜೈನ ಬಸದಿ ಹತ್ತಿರ ಬಂದದ್ದೇ ತಿಳಿಯಲಿಲ್ಲ.

ಕೆರೆ ಮಧ್ಯೆ ಇರುವ ಬಸದಿಯನ್ನು ನೋಡಲು ದೋಣಿಯಲ್ಲಿ ಸಾಗಬೇಕು. ಪ್ರತಿಯೊಬ್ಬರಿಗೆ 10 ರೂ. ಪಾವತಿಸಿ ದೋಣಿ ಏರಿದೆವು. ಅಲ್ಲೇ ಇದ್ದ ಹಿರಿಯರು ಮುಗುಳುನಗೆ ಚಿತ್ರವನ್ನು ಎಲ್ಲಿ ಚಿತ್ರೀಕರಿಸಲಾಗಿತ್ತು ಎಂಬ ಮಾಹಿತಿ ನೀಡಿದರು. ದೇವಸ್ಥಾನದವರೆಗಿನ ಲೈಫ್ ಜಾಕೆಟ್ ಇಲ್ಲದೆ ದೋಣಿಯ ಪಯಣ ಎಲ್ಲರಲ್ಲೂ ಭಯ ಹುಟ್ಟಿಸುತ್ತಿತ್ತು. ಅಂತೂಇಂತೂ ಬಸದಿ ತಲುಪಿದಾಗ ಎಲ್ಲರೂ ಒಮ್ಮೆ ನಿಟ್ಟುಸಿರು ಬಿಟ್ಟೆವು. ಬಸದಿಯ ದೇವರಿಗೆ ನಮಸ್ಕರಿಸಿ, ಕೆಲವು ಫೋಟೋ ಕ್ಲಿಕ್ಕಿಸಿ ಮತ್ತೆ ಮರಳಿ ದೋಣಿಯನ್ನೇರಿ ಬಂದೆವು. ಅಲ್ಲಿಂದ ನಮ್ಮ ಸವಾರಿ ಸೀತಾ ಫಾಲ್ಸ್ ಕಡೆಗೆ ಸಾಗಿತು.

ವರಂಗದಿಂದ ಹೆಬ್ರಿ ಮಾರ್ಗದಲ್ಲಿ ಆಗುಂಬೆ ತಲುಪುವ ರಸ್ತೆಯಲ್ಲಿ ಬಲಕ್ಕೆ ಸಾಗಿದರೆ ಸೀತಾ ಫಾಲ್ಸ್ ಅಥವಾ ಕೂಡ್ಲು ಫಾಲ್ಸ್ನ ಸ್ವಾಗತ ಕಮಾನು ಸಿಗುತ್ತದೆ. ಇಲ್ಲಿಂದ ಕೇವಲ 14 ಕಿ.ಮೀ. ದೂರ ಎಂದು ಅಂಗಡಿಯವರು ಹೇಳಿದರು. ಹಾಗಾದರೆ 15 ನಿಮಿಷದಲ್ಲಿ ತಲುಪಬಹುದು ಎಂದಾಗ ಅಂಗಡಿಯಾತ ಮುಗುಳ್ನಕ್ಕ. ಆಗಲೇ ಸೂರ್ಯ ನೆತ್ತಿ ಸುಡಲು ಅಣಿಯಾಗಿದ್ದ. 14 ಕಿ.ಮೀ.ಗಳ ಪಯಣ ಆರಂಭಿಸಿದ ಕೆಲವು ಹೊತ್ತÇ್ಲೇ ಅಂಗಡಿಯಾತನ ನಗುವಿನ ಒಳ ಅರ್ಥ ಅರಿವಾಯಿತು. ಮಂಗಳೂರಿನಿಂದ ಹೆಬ್ರಿವರೆಗಿನ ಪ್ರಯಾಣವೂ ಅಷ್ಟು ದುರ್ಗಮವಾಗಿರಲಿಲ್ಲ. ಕೆಲವು ಕಡೆ ಮಣ್ಣಿನ ರಸ್ತೆಗಳು, ಇನ್ನೂ ಕೆಲವು ಕಡೆ ರಸ್ತೆಗಳೇ ಮಾಯವಾಗಿದ್ದವು. ಕೆಲವು ಕಡೆ ಬೈಕ್‌ ಕಂಟ್ರೋಲ್‌ಗೆ ಸಿಗದ ಪ್ರಸಂಗಗಳು ನಡೆದು ಹೋಯ್ತು. ಅಂತೂ ಇಂತೂ ಅಬ್ಟಾ ಬಂತಲ್ಲ ಅಂತ ಸೀತಾಫಾಲ್ಸ್‌ನ ಪಾರ್ಕಿಂಗ್‌ ತಾಣ ತಲುಪಿದಾಗ ಎಲ್ಲರಲ್ಲೂ ನಿರಾಳ ಭಾವ. ಇಷ್ಟು ದುರ್ಗಮ ಹೆದ್ದಾರಿಯನ್ನು ಸಾಗಿ ಬಂದ ನಮಗೆ ಮಗುದೊಂದು ಶಾಕ್‌ ಕಾದಿತ್ತು. ಪಾರ್ಕಿಂಗ್‌ನಿಂದ ಒಂದೂವರೆ ಕಿ.ಮೀ. ನಡೆದು ಸಾಗಬೇಕಿತ್ತು. ನಮ್ಮ ಬ್ಯಾಗ್‌ಗಳನ್ನು ಸೆಕ್ಯುರಿಟಿ ಚೆಕ್‌ ಮಾಡಿಸಿ, ತೆಗೆದುಕೊಂಡು ಹೋಗುತ್ತಿರುವ ಪ್ಲಾಸ್ಟಿಕ್‌ ಪರಿಕರಗಳ ಲೆಕ್ಕ ನೀಡಿ, ಪ್ರತಿಯೊಬ್ಬರಿಗೂ ತಲಾ 70 ರೂ. ಕೊಟ್ಟು ಟಿಕೆಟ್ ಪಡೆದು ಸಾಗಿದೆವು. 12.30ರ ಹೊತ್ತಿಗೆ ಊಟವಾದರೂ ಮಾಡ್ಕೊಂಡು ಬರಬಹುದಿತ್ತು ಎಂದು ಗೊಣಗುತ್ತಾ ನಮ್ಮ ಕಾಲು ದಾರಿಯ ಪ್ರಯಾಣ ಆರಂಭಿಸಿದೆವು. ಹೊಟ್ಟೆಗೆ ಸರಿಯಾಗಿ ಊಟವಿಲ್ಲದಿದ್ದರೂ ನಮ್ಮ ಹುಮ್ಮಸ್ಸು ಕಡಿಮೆ ಆಗಿರಲಿಲ್ಲ. ಹಾಡುತ್ತಾ ಕುಣಿಯುತ್ತಾ ಸೀತಾ ಉಗಮ ಸ್ಥಾನವನ್ನು ತಲುಪಿದೆವು. ಸೀತೆಯ ಮಡಿಲಲ್ಲಿ, ತಂಪಾದ ನೀರಿನಲ್ಲಿ ಮಿಂದು ಪ್ರಯಾಣದ ಆಯಾಸ ದೂರವಾಗಿಸಿಕೊಂಡೆವು. ಒಂದೇ ಧಾರೆಯಾಗಿ ಆಕಾಶದಿಂದ ಧುಮ್ಮಿಕ್ಕುವಂತೆ ಭಾಸವಾಗುವ ಸೀತೆಯನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದೆನಿಸುತ್ತಿತ್ತು. ಸಂಜೆ ನಾಲ್ಕು ಗಂಟೆಯೊಳಗೆ ಪಾರ್ಕಿಂಗ್‌ ಸ್ಥಳಕ್ಕೆ ಬರಬೇಕು ಎಂದು ಪೊಲೀಸರ ಆಜ್ಞೆಯಾಗಿದ್ದರಿಂದ ಆ ಹೊತ್ತಿಗೆ ಅಲ್ಲಿ ತಲುಪಿದೆವು. ಅಲ್ಲಿಂದ ಮತ್ತೆ ದುರ್ಗಮ ಹಾದಿಯಲ್ಲಿ ಬಂದು ದಾರಿಯಲ್ಲಿ ಸಿಕ್ಕ ಹೊಟೇಲೊಂದರಲ್ಲಿ ತಿಂಡಿತಿಂದು ಮರಳಿ ಮನೆ ಸೇರುವಾಗ ಕತ್ತಲಾಗಿತ್ತು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಸೀತಾಫಾಲ್ಸ್‌ಗೆ ಸುಮಾರು 109 ಕಿ.ಮೀ. ದೂರವಿದೆ. · ಮಂಗಳೂರಿನಿಂದ ಪಡುಬಿದ್ರೆ ಮಾರ್ಗವಾಗಿ ಅಥವಾ ಕಾರ್ಕಳ ದಾರಿಯಾಗಿ ತೆರಳಬಹುದು. · ಹತ್ತಿರದಲ್ಲಿ ಊಟ, ವಸತಿ ವ್ಯವಸ್ಥೆಯಿಲ್ಲ. · ಖಾಸಗಿ ವಾಹನ ಮಾಡಿಕೊಂಡು ತೆರಳಿದರೆ ಉತ್ತಮ. · ರಸ್ತೆ ಹದಗೆಟ್ಟಿರುವುದರಿಂದ ಬೈಕ್‌ನಲ್ಲಿ ಹೋಗುವುದು ಅಪಾಯಕಾರಿ.· ತಿಂಡಿ, ನೀರು ಕಟ್ಟಿಕೊಂಡು ಹೋದರೆ ಹೆಚ್ಚು ಅನುಕೂಲ · ಮಂಗಳೂರಿನಿಂದ ಬೆಳ್ಮಣ್‌ಗೆ ಅಲ್ಲಿಂದ ಸೀತಾಫಾಲ್ಸ್‌ ಕಮಾನುವರೆಗೆ ಸಾಕಷ್ಟು ಬಸ್‌ ಸೌಲಭ್ಯವಿದೆ.

•ಗಣೇಶ ಬರ್ವೆ ಮಣೂರು


ಈ ವಿಭಾಗದಿಂದ ಇನ್ನಷ್ಟು

  • ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ಹೊಗೇನಕಲ್‌ ಫಾಲ್ಸ್ ವೈಶಿಷ್ಟ್ಯಪೂರ್ಣ...

  • ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ...

  • ವಿಸ್ಮಯ ವಿನಾಯಕ್‌ ನಿರ್ದೇಶನದಲ್ಲಿ ಸಂದೇಶ್‌ರಾಜ್‌ ಬಂಗೇರ ಮತ್ತು ರೋಹನ್‌ ಕೋಡಿಕಲ್‌ ಅವರು ನಿರ್ಮಾಣ ಮಾಡುತ್ತಿರುವ 'ರಡ್ಡ್ ಎಕ್ರೆ ನಾಟ್ ಫಾರ್‌ ಸೇಲ್‌' ಸಿನೆಮಾವು...

  • ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ 'ಅಪ್ಪೆ ಟೀಚರ್‌'. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ...

  • ದೇವದಾಸ್‌ ಕಾಪಿಕಾಡ್‌ ಸದ್ಯ 'ಜಬರ್ದಸ್ತ್ ಶಂಕರ'ನ ಬ್ಯುಸಿಯಲ್ಲಿದ್ದಾರೆ. ಮಾಸ್‌ ಫಿಲ್ಮ್ ಆಗಿರುವುದರಿಂದ ಸಾಹಸ ದೃಶ್ಯಗಳಿಗೆ ಈ ಸಿನೆಮಾ ಸಾಕಷ್ಟು ಅವಕಾಶ ನೀಡಿದೆ....

ಹೊಸ ಸೇರ್ಪಡೆ