ದಟ್ಟಾರಣ್ಯದ ಮಧ್ಯೆ ಕುಳಿತ ನರಸಿಂಹ

Team Udayavani, Jan 3, 2019, 7:51 AM IST

ಅಪರೂಪಕ್ಕೊಮ್ಮೆ ದೂರದ ದೇವರ ದರ್ಶನ ಮಾಡಿ ಬರುವುದರಿಂದ ಮನಸ್ಸಿಗೂ ಸಂತೋಷವಾಗುತ್ತದೆ ಎಂಬ ಮಾತು ಶೀಘ್ರದಲ್ಲಿ ನೆರವೇರುತ್ತೆ ಎಂದು ಯಾರೂ ಅಂದು ಕೊಂಡಿರಲಿಕ್ಕಿಲ್ಲ. ಅದೊಂದು ದಿನ ಕಾರ್ಪೊರೇಶನ್‌ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅನಂತ್‌ ಭಟ್‌ ಅವರು ತೀರ್ಥಯಾತ್ರೆಗೆ ಹೊರಡೋಣ ಎಂದಾಗ ನಾನು ಸಹಿತ ಬಿಜೈ ಶ್ರೀ ದೇವಿ ಮಹಿಳಾ ಮಂಡಳಿಯ 18 ಮಂದಿಯೊಂದಿಗೆ ಇತರ ಮೂವರು ಸೇರಿ ಕೊಂಡು ಹೊರಟೇ ಬಿಟ್ಟೆವು.

ಮಂಗಳೂರಿನಿಂದ ಖಾಸಗಿ ವಾಹನ ಮಾಡಿ ಕೊಂಡು ಹೊರಟ ನಾವು ಮಂತ್ರಾಲಯಕ್ಕೆ ಹೋಗುವ ದಾರಿಯಲ್ಲಿ ಅಧೋನಿ ಎಂಬಲ್ಲಿ ಇಳಿದು ವಿಜಯದಾಸರ ಕಟ್ಟೆಯಲ್ಲಿ ದಾಸವರೇಣ್ಯರಾದ ಶ್ರೀ ವಿಜಯದಾಸರು ಕುಳಿತು ತಪಃಗೈದು ದೇವರಲ್ಲಿ ಐಕ್ಯರಾದರು ಎಂಬ ಪ್ರತೀತಿ ಇರುವ ವಿಜಯದಾಸರ ಕಟ್ಟೆಗೆ ಭೇಟಿ ನೀಡಿದೆವು. ಅಲ್ಲಿ ಸ್ವಲ್ಪ ಹೊತ್ತು ಭಜನೆ ಮಾಡಿ ಅನಂತರ ರಾಮ- ಲಕ್ಷ್ಮಣರು ಸೀತೆಯೊಂದಿಗೆ ತಂಗಿದ್ದ ಮಂಗಾಪುರಕ್ಕೆ ಭೇಟಿ ಕೊಟ್ಟು ಅಲ್ಲಿಂದ ಮಂತ್ರಾಲಯಕ್ಕೆ ಬಂದೆವು. ಇಲ್ಲಿ ಗುರುರಾಯರ ದರ್ಶನ ಪಡೆದು ಬಳಿಕ ಅಲ್ಲಿಯೇ ಇರುವ ಪಂಚಮುಖಿ, ಬಿಚ್ಚಾಲಿಗೆ ಭೇಟಿ ಕೊಟ್ಟೆವು.

ಹನುಮಂತ, ಗರುಡ, ವರಾಹ, ಹಯಗ್ರೀವ, ನರಸಿಂಹರು 5 ದೇವರುಗಳ ಮುಖ ಒಂದೇ ದೇಹವಾಗಿ ಶ್ರೀ ಗುರುರಾಯರಿಗೆ ದರ್ಶನ ನೀಡಿದ ಪಂಚಮುಖೀ ನೋಡಲು ಅತ್ಯಾಕರ್ಷವಾಗಿದೆ. ಬಿಚ್ಚಾಲಿಯ ಏಕಶಿಲಾ ವೃಂದಾವನದಲ್ಲಿ ಅಪ್ಪಣ್ಣಾಚಾರ್ಯರಿಗೆ ದರುಶನ ನೀಡಿ ರಾಯರು ಅನುಗ್ರಹಿಸಿದ ಸ್ಥಳಕ್ಕೂ ಭೇಟಿ ಕೊಟ್ಟು ಬಳಿಕ ಆಲಾಪುರದ ಕ್ಷುದ್ರದೇವತೆಯಾಗಿರುವ ಜೋಗುಳಾಂಬೆಯ ದರ್ಶನ ಪಡೆದೆವು. ಹೆಣದ ಮೇಲೆ ಪಾದ ಊರಿನಿಂತು, ತಲೆಯ ಮೇಲೆ ಕಪಾಲ, ಹೆಣದಲ್ಲಿ ಚೇಳು, ಹಲ್ಲಿಗಳು ಓಡಾಡುವಂತೆ ಇರುವ ಆ ದೇವಿಯ ರೂಪ ಅತಿ ಭಯಂಕರವಾಗಿತ್ತು. ಅಲ್ಲಿಂದ ರೋಡ್‌ ಗಾರ್ಡನ್‌ಗೆ ತೆರಳಿದ ನಮ್ಮ ತಂಡ ಬಂಡೆಕಲ್ಲುಗಳಲ್ಲಿ ಕಬ್ಬಿಣದ ಸಲಾಕೆಗಳಿಂದ ತಯಾರಿಸಿದ ಮೃಗ, ಪಕ್ಷಿಗಳು, ಗಾಂಧಿ ತಾತನ ಚರಕ ಮೊದಲಾದವುಗಳನ್ನು ನೋಡಿ ಯಾಗಂಟಿ ಎಂಬ ಊರಿಗೆ ಬಂದೆವು.

ಪುರಾಣ ಪ್ರಸಿದ್ಧ ಸ್ಥಳ
ಯಾಗಂಟಿ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿಯ ಪುಷ್ಕರಿಣಿ ಕೂಡ ಗೋಪುರಗಳಿಂದ ಕೂಡಿದ್ದು, ನೋಡಲು ಆಕರ್ಷಣೀಯವಾಗಿದೆ. ವೈಕುಂಠದಿಂದ ಲಕ್ಷ್ಮೀಯನ್ನು ಅರಸುತ್ತಾ ಬಂದ ನಾರಾಯಣ ಪ್ರಥಮ ಹೆಜ್ಜೆಯನ್ನು ಇಲ್ಲಿ ಇಟ್ಟನಂತೆ ಎಂಬ ಪ್ರತೀತಿ ಇದೆ. ಇಲ್ಲಿ ವೆಂಕಟೇಶ ತಪಃಗೈದ ಗುಹಾಲಯ ಹಾಗೂ ಅದರಲ್ಲಿ 108 ಹೆಜ್ಜೆಗಳ ಗುರುತು ಕಾಣಬಹುದಾಗಿದೆ. ಮುಂದೆ ಅಗಸ್ತ್ಯ ಋಷಿಗಳು ತಪಃಗೈದ ಗುಹೆ, ರಾಮ ಮಂದಿರ, ಉಮಾಮಹೇಶ್ವರೀ ದೇವಸ್ಥಾನಗಳನ್ನು ನೋಡಿ ಬಂದೆವು.

ಬಳಿಕ ನಾವು 1882ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಬೇಲನ್‌ ಕೇವ್ಸ್‌ಗೆ ಭೇಟಿ ನೀಡಿದೆವು. ಇಲ್ಲಿ ಸುರಂಗ ಮಾರ್ಗವಿದ್ದು ಒಳಗೆ ಪಾತಾಳ ಗಂಗೆ ಕಾಣಸಿಗುತ್ತದೆ. ಹೋಗುವ ದಾರಿಯಲ್ಲಿ ಎ.ಸಿ., ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಶ್ವಾಸ ಸಂಬಂಧಿ ರೋಗಿಗಳು ಅಲ್ಲಿಗೆ ಹೋಗದಂತೆ ಎಚ್ಚರಿಕೆಯ ಫ‌ಲಕ ಹಾಕಿದ್ದಾರೆ. ಅಲ್ಲಿಂದ ಕದಿರೆ ಎಂಬಲ್ಲಿ ತಂಗಿ ರಾತ್ರಿ ಲಕ್ಷ್ಮೀ ನರಸಿಂಹ ದೇವರ ದರ್ಶನ ಮಾಡಿ ಬಂದೆವು. ಬಳಿ ಕ ಅಹೋಬಿಲ ಎಂಬಲ್ಲಿಗೆ ಭೇಟಿ ಕೊಟ್ಟು, ಅಲ್ಲಿನ ಅನ್ನಛತ್ರದಲ್ಲಿ ಉಂಡು, ವಿಶ್ರಾಂತಿ ಪಡೆದೆವು.

ಮರು ದಿನ ಬೆಳಗ್ಗೆ ಪ್ರಾತಃ ವಿಧಿಗಳನ್ನು ಮುಗಿಸಿ ನರಸಿಂಹ ದೇವರ ದರ್ಶನಗೈಯಲು ಹೊರಟೆವು. ಗರುಡಾದ್ರಿ- ವೇದಾದ್ರಿ ಪರ್ವತಗಳ ಮಧ್ಯದಲ್ಲಿ ಬಹಳ ಇಕ್ಕಟ್ಟಾದ, ಬಂಡೆಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ಸುಮಾರು ಎರಡೂವರೆ ಕಿ.ಮೀ. ದೂರ, ಅಲ್ಲಲ್ಲಿ ದಾರಿ, ಮತ್ತೆ ಮೆಟ್ಟಿಲು ಹೀಗೆ 700 ಮೆಟ್ಟಿಲುಗಳನ್ನು ಹತ್ತಿ ಜ್ವಾಲಾ ನರಸಿಂಹನ ದರ್ಶನ ಪಡೆದೆವು. ನಡೆಯಲಾಗದವರಿಗೆ ಡೋಲಿ ವ್ಯವಸ್ಥೆ ಇಲ್ಲಿದ್ದು, ನಡೆದುಕೊಂಡು ಬರುವವರಿಗೆ ದೊಡ್ಡ ದೊಣ್ಣೆಯನ್ನು ಕೊಡುತ್ತಾರೆ.

ದಟ್ಟ ಅರಣ್ಯದ ಮಧ್ಯೆ ಇರುವ ದೇವಸ್ಥಾನ ಪ್ರಾಚೀನವಾಗಿದ್ದು, ನೋಡಲು ಗುಹೆಯಂತಿದೆ. ಇಲ್ಲಿಗೆ ಹೋಗುವ ದಾರಿಯಲ್ಲಿ ಶ್ರೀ ರಾಮಾನುಜಾಚಾರ್ಯ ವೇದ ಪಾಠ ಶಾಲೆ, ಭಾರ್ಗವ ನರಸಿಂಹ, ವರಾಹ, ಪಾವನ ನರಸಿಂಹ ಮೊದಲಾದವುಗಳನ್ನು ಕಾಣಬಹುದು. ಇಲ್ಲಿ ರಕ್ತಕುಂಡ ಎಂಬ ಬಾವಿಯಿದೆ. ಜ್ವಾಲಾ ನರಸಿಂಹನನ್ನು ನೋಡಲು ಹೋಗುವ ದಾರಿಯಲ್ಲಿ ಭವನಾಶಿನಿ ಎಂಬ ನದಿಯ ನೀರು ತಲೆಗೆ ಬೀಳಿಸಿಕೊಂಡೇ ಸಾಗ ಬೇಕು. ದಾರಿ ಯುದ್ದಕ್ಕೂ ಊಟ, ವಸ ತಿಯ ವ್ಯವಸ್ಥೆಯ ಜವಾಬ್ದಾರಿಯನ್ನು ಕೆಲವರು ವಹಿಸಿಕೊಂಡಿದ್ದರಿಂದ ಯಾವುದೇ ತೊಂದರೆ ಇಲ್ಲದೆ ನಾವು ಮರಳಿ ಬಂದೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಅಹೋ ಬಿಲಕ್ಕೆ ಸುಮಾರು 683 ಕಿ.ಮೀ. ದೂರ
· ಖಾಸಗಿ ವಾಹನ, ಬಸ್‌, ರೈಲಿನ ವ್ಯವಸ್ಥೆ ಇದೆ.
· ಪ್ರವಾಸ ಹೊರಡುವಾಗ ಸಾಕಷ್ಟು ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ಹೋಗುವುದು ಉತ್ತಮ.
· ಊಟ, ವಸತಿಯ ಕುರಿತು ಮೊದಲೇ ಬುಕ್ಕಿಂಗ್‌ ಮಾಡಿದರೆ ಉತ್ತಮ.
· ಹೆಚ್ಚು ನಡೆಯಬೇಕಿರುವುದರಿಂದ ಇದಕ್ಕೆ ಮೊದಲೇ ಸಿದ್ಧತೆ ಮಾಡಿಕೊಂಡಿರಬೇಕು. 

ಸುಮಿತ್ರಾ ಆಚಾರ್ಯ, ಬಿಜೈ


ಈ ವಿಭಾಗದಿಂದ ಇನ್ನಷ್ಟು

  • ದೇಶದ ಜಲಪಾತಗಳ ಪೈಕಿ ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿ ಹಾಗೂ ವಿಭಿನ್ನವಾದ ಆಯಾಮವನ್ನು ಹೊಂದಿರುವ ಕಾರಣದಿಂದ ಹೊಗೇನಕಲ್‌ ಫಾಲ್ಸ್ ವೈಶಿಷ್ಟ್ಯಪೂರ್ಣ...

  • ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ...

  • ವಿಸ್ಮಯ ವಿನಾಯಕ್‌ ನಿರ್ದೇಶನದಲ್ಲಿ ಸಂದೇಶ್‌ರಾಜ್‌ ಬಂಗೇರ ಮತ್ತು ರೋಹನ್‌ ಕೋಡಿಕಲ್‌ ಅವರು ನಿರ್ಮಾಣ ಮಾಡುತ್ತಿರುವ 'ರಡ್ಡ್ ಎಕ್ರೆ ನಾಟ್ ಫಾರ್‌ ಸೇಲ್‌' ಸಿನೆಮಾವು...

  • ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ 'ಅಪ್ಪೆ ಟೀಚರ್‌'. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ...

  • ದೇವದಾಸ್‌ ಕಾಪಿಕಾಡ್‌ ಸದ್ಯ 'ಜಬರ್ದಸ್ತ್ ಶಂಕರ'ನ ಬ್ಯುಸಿಯಲ್ಲಿದ್ದಾರೆ. ಮಾಸ್‌ ಫಿಲ್ಮ್ ಆಗಿರುವುದರಿಂದ ಸಾಹಸ ದೃಶ್ಯಗಳಿಗೆ ಈ ಸಿನೆಮಾ ಸಾಕಷ್ಟು ಅವಕಾಶ ನೀಡಿದೆ....

ಹೊಸ ಸೇರ್ಪಡೆ