ತಾಲೂಕು ಭಾಗ್ಯ ಬೇಕಿರುವುದೇನು? ವೈದ್ಯಕೀಯ ವಲಯದಲ್ಲಿ ಅಭಿವೃದ್ಧಿ ಅಗತ್ಯ

Team Udayavani, Mar 17, 2017, 11:29 PM IST

ಕಡಬ: ತಾಲೂಕು ಕೇಂದ್ರವಾದ ಇಲ್ಲಿ ವೈದ್ಯಕೀಯ ಸೇವೆ ವ್ಯವಸ್ಥೆ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ. ಸುಮಾರು 8 ವರ್ಷಗಳ ಹಿಂದೆ 6 ಹಾಸಿಗೆಗಳ ಪ್ರಾಥಮಿಕ ಆರೋಗ್ಯ ಕೇಂದ್ರ 30 ಹಾಸಿಗೆಗಳ  ಸಮುದಾಯ ಆಸ್ಪತ್ರೆಯಾಯಿತು. ಇತ್ತೀಚೆಗೆ ಇದಕ್ಕೆ 4.85 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಹಾಗೆಂದು ಖಾಸಗಿ ವೈದ್ಯ ಸೇವೆಗಳೂ‌ ಚಿಕಿತ್ಸಾಲಯದ ಮಟ್ಟದಿಂದ ಮೇಲೇರಿಲ್ಲ.

30 ಹಾಸಿಗೆಗಳ ಆಸ್ಪತ್ರೆ
ಆರು ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು  ಸರಕಾರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿತು. ದಿನಂಪ್ರತಿ ಸುಮಾರು 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಉಳಿದಂತೆ ಹೆಚ್ಚಿನ ಚಿಕಿತ್ಸೆಗೆ ಜನರು ಪುತ್ತೂರು ಮತ್ತು ಮಂಗಳೂರಿಗೆ ತೆರಳಬೇಕು. 2007ರಲ್ಲಿ ಸರಕಾರವು ದ.ಕ. ಜಿಲ್ಲೆಯ ಕಡಬ, ಧರ್ಮಸ್ಥಳ ಹಾಗೂ ಉಪ್ಪಿನಂಗಡಿ ಸೇರಿದಂತೆ ರಾಜ್ಯದ ಒಟ್ಟು 24 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಗತ್ಯ ಹೆಚ್ಚುವರಿ ಹುದ್ದೆಗಳ ಸಮೇತ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿತ್ತು.

ಅದರಂತೆ ಕಡಬ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಶಿಶು ತಜ್ಞರು ಸೇರಿದಂತೆ 4 ಮಂದಿ ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು- ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ ಹಾಲಿ ಲಭ್ಯವಿರುವ ಹುದ್ದೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಕೇಂದ್ರದ ಕಟ್ಟಡ ಕಾಮಗಾರಿ ಶೇ. 60ರಷ್ಟು ಪೂರ್ಣಗೊಂಡ ಬಳಿಕ ಭರ್ತಿ ಮಾಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಕಟ್ಟಡ ಕಾಮಗಾರಿ ಶೀಘ್ರವೇ ಮುಗಿದು, ತಜ್ಞ ವೈದ್ಯರು ಹಾಗೂ ಅಗತ್ಯ ಸವಲತ್ತು ಸಿಕ್ಕರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 

ದೊಡ್ಡಮಟ್ಟದ ಆಸ್ಪತ್ರೆಗಳಿಲ್ಲ
ಸಣ್ಣ ಪುಟ್ಟ ಚಿಕಿತ್ಸಾಲಯಗಳನ್ನು ಬಿಟ್ಟರೆ ಇಲ್ಲಿ ದೊಡ್ಡಮಟ್ಟದ ಖಾಸಗಿ ಆಸ್ಪತ್ರೆಗಳೂ ಇಲ್ಲ. ಮರ್ದಾಳದಲ್ಲಿ ಖಾಸಗಿ ಟ್ರಸ್ಟ್‌ ವತಿಯಿಂದ 400 ಹಾಸಿಗೆಗಳ ಆಸ್ಪತ್ರೆಗೆ ಶಂಕುಸ್ಥಾಪನೆ ಕಳೆದ ತಿಂಗಳು ನೆರವೇರಿದೆ. ಹಾಗೆಯೇ ಕಡಬದ ಸೈಂಟ್‌ ಜೋಕಿಮ್ಸ್‌ ಚರ್ಚ್‌ನ ಬಳಿ ಬೆಂಗಳೂರು ಮೂಲದ ಕೆಥೋಲಿಕ್‌ ಕ್ರೈಸ್ತ ಧರ್ಮಭಗಿನಿಯರ ನೇತೃತ್ವದ ಆಸ್ಪತ್ರೆ ಆರಂಭಿಸುವ ವಿಚಾರ ಪ್ರಾಥಮಿಕ ಹಂತದಲ್ಲಿದೆ. ಕಡಬ ತಾಲೂಕು ಕೇಂದ್ರವಾಗಿ ಅಭಿವೃದ್ಧಿಯಾದರೆ ವೈದ್ಯಕೀಯ ಸೇವೆಗಳೂ ಬೆಳೆಯಬಹುದು. ಪ್ರಸ್ತುತ ಇಲ್ಲಿ ತಜ್ಞ ದಂತ ವೈದ್ಯರನ್ನು ಹೊರ ತುಪಡಿಸಿದರೆ ಇನ್ನಿತರ ಯಾವುದೇ ವೈದ್ಯ ಕೀಯ ವಿಭಾಗದಲ್ಲಿ ಪರಿಣಿತ ವೈದ್ಯರು ಲಭ್ಯರಿಲ್ಲ ಎಂಬುದು ವಾಸ್ತವ.

8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ – 8 ಗ್ರಾಮಗಳ ವ್ಯಾಪ್ತಿ ಈ ಆಸ್ಪತ್ರೆಯದ್ದು. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಯೇನೆಕಲ್‌, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶ ದವರೂ ಇಲ್ಲಿಗೇ ಚಿಕಿತ್ಸೆಗೆ ಬರುತ್ತಿರುವುದರಿಂದ ವ್ಯಾಪ್ತಿ ಹೆಚ್ಚಾಗಿದೆ.

ಸವಲತ್ತು ನೀಡುವುದಕ್ಕೆ ಆದ್ಯತೆ 
ಕಡಬದಲ್ಲಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಹಾಗೂ ಅಗತ್ಯ ಸವಲತ್ತುಗಳನ್ನು ನೀಡುವುದು ನಮ್ಮ ಮೊದಲ ಗುರಿ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಇಲ್ಲಿ ಆರಂಭಗೊಳ್ಳಲಿವೆ. ಅದೇ ರೀತಿ ಆರೋಗ್ಯ ಇಲಾಖೆಯ ತಾಲೂಕುಮಟ್ಟದ ಸೌಲಭ್ಯಗಳು ಕೂಡ ಲಭಿಸಿಲು   ಕಾಲಾವಕಾಶ ಅಗತ್ಯವಿದೆ. ಹಂತ ಹಂತವಾಗಿ ಕಡಬಕ್ಕೂ ಕೂಡ ತಾಲೂಕು ಆಸ್ಪತ್ರೆಯ ಮಾನ್ಯತೆ ಹಾಗೂ ಸವಲತ್ತುಗಳು ಸಿಗಲಿವೆ.
-ಡಾ| ರಾಮಕೃಷ್ಣ ರಾವ್‌,  ಜಿಲ್ಲಾ ಆರೋಗ್ಯಾಧಿಕಾರಿ

– ನಾಗರಾಜ್‌ ಎನ್‌.ಕೆ. ಕಡಬ

ಕಾರ್ಬನ್‌ ಕ್ರೆಡಿಟ್‌ಗೆ ಪಾಲಿಕೆ ಪ್ರಯತ್ನ

Team Udayavani, Mar 17, 2017, 10:46 PM IST

ಮಹಾನಗರ: ಪರಿಸರ ಮಾಲಿನ್ಯ ತಡೆಗೆ ಪಚ್ಚನಾಡಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾರಂಭಿಸಿ ಯುನಿಕ್‌ ವೇಸ್ಟ್‌ ಪ್ರೊಸೆಸಿಂಗ್‌ ಕಂಪೆನಿಯ ಮೂಲಕ ಕಾರ್ಬನ್‌ ಕ್ರೆಡಿಟ್‌ ಪಡೆಯಲು ಮಹಾನಗರ ಪಾಲಿಕೆ ಅರ್ಜಿ ಸಲ್ಲಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಈ ಸಂಬಂಧ ದಾಖಲೆಯನ್ನು ನೀಡುವುದಷ್ಟೇ ಬಾಕಿ ಇದೆ. ಮಾಲಿನ್ಯ ನಿಯಂತ್ರಣ ಪ್ರಕ್ರಿಯೆಯ ಮೂಲಕ ಪಾಲಿಕೆಯು ಆರ್ಥಿಕ ಸದೃಢತೆಯನ್ನು ಹೊಂದುವ ದೃಷ್ಟಿಯಿಂದ ಈ ಹಿಂದೆಯೇ ವಿಶೇಷ ಕಲ್ಪನೆಯಾದ ಕಾರ್ಬನ್‌ ಕ್ರೆಡಿಟ್‌ ಅನ್ನು ಪಡೆಯಲು ಪ್ರಯತ್ನ ಆರಂಭಿಸಿತ್ತು.

ನಗರ ಪ್ರದೇಶಗಳಲ್ಲಿ ವಾಸಿಸುವವರ ಪ್ರಮಾಣ ಹೆಚ್ಚಾಗಿದ್ದು, ವಲಸೆಯೂ ಹೆಚ್ಚಿದೆ. ಇದರಿಂದ ಜನಸಂಖ್ಯೆ ಏರುತ್ತಿದ್ದು, ಮಾಲಿನ್ಯ ಪ್ರಮಾಣವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅತಿ ಬಳಕೆ ಮತ್ತು ಕೊರತೆಯಿಂದ ಜಲ, ವಾಯು ಮತ್ತು ಭೂಮಿ ವಿವಿಧ ರೀತಿಯಲ್ಲಿ ಮಲಿನಗೊಳ್ಳುತ್ತಿದೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಇದನ್ನು ತಡೆಗಟ್ಟಿ ಪರಿಸರದ ಆರೋಗ್ಯವನ್ನು ಕಾಪಾಡಲು ಪ್ರೇರಣೆ ನೀಡುವುದೇ ಕಾರ್ಬನ್‌ ಕ್ರೆಡಿಟ್‌ ಉದ್ದೇಶ. ತ್ಯಾಜ್ಯಗಳ ಕೊಳೆಯುವಿಕೆಯಿಂದ ಪರಿಸರಕ್ಕೆ ವಿಷಾನಿಲ (ಮಿಥೇನ್‌ ಇತ್ಯಾದಿ)ಸೇರಿ ಉಸಿರಾಡುವ ಗಾಳಿಯು ಕಲುಷಿತಗೊಳುತ್ತದೆ. ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಕಾಡತೊಡಗುತ್ತದೆ. ಇಂಥ ಸಾಧ್ಯತೆಗಳನ್ನು ತಡೆದು ನಗರವನ್ನು ಸ್ವಚ್ಛವಾಗಿಡಲು ಮಂಗಳೂರಿನ 60 ವಾರ್ಡ್‌ಗಳಿಂದ ಹಾಗೂ ಸಮುದ್ರಗಳ ಬಳಿಯಿಂದ ಕಸ ಸಂಗ್ರಹಿಸಿ ಸಾಗಿಸುವ ಕೆಲಸವನ್ನು  ಆ್ಯಂಟನಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸೆಲ್‌ ಕಂಪೆನಿಗೆ ನೀಡಲಾಗಿದೆ.

ಬಳಿಕ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯವನ್ನಾಗಿ ಯುನಿಕ್‌ ವೇಸ್ಟ್‌ ಪ್ರೊಸೆಸಿಂಗ್‌ ಕಂಪೆನಿ ವಿಂಗಡಿಸಿ ಸಂಸ್ಕರಿಸಿದ ಬಳಿಕ ಮಾರುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕವು ಗೊಬ್ಬರ ತಯಾರಿಸುವ ಮೂಲಕ ಮಾಲಿನ್ಯ ತಡೆಗಟ್ಟಲು ಪ್ರಯತ್ನಿಸುತ್ತಿದೆ. ಇದಕ್ಕೆ ಪೂರಕವಾಗಿ ಪಾಲಿಕೆಯ ಸೂಚನೆಯಂತೆ ಕಾರ್ಬನ್‌ ಕ್ರೆಡಿಟ್‌ ಪಡೆಯಲು ಯು.ಡಬ್ಲ್ಯುಪಿಸಿಎಲ್‌ ಸಂಸ್ಥೆಯು ಅರ್ಜಿ ಸಲ್ಲಿಸಿತ್ತು. 

2 ಬಾರಿ ಭೇಟಿ- ಸಭೆ
ಕಾರ್ಬನ್‌ ಕ್ರೆಡಿಟ್‌ ಸಂಬಂಧಿಸಿ ಈ ಹಿಂದೆ ಕನ್ಸಲ್ಟೆಂಟ್ಸ್‌ ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ತೆರಳಿದ್ದು, 6 ತಿಂಗಳ ಹಿಂದೆ  ದಿಲ್ಲಿಯಿಂದ ಅಂತಾರಾಷ್ಟ್ರೀಯ ಮಟ್ಟದ ಪರಿಣಿತರೂ ಆಗಮಿಸಿ ಪರೀಕ್ಷಿಸಿದ್ದರು. ಬಳಿಕ ಪಾಲಿಕೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿತ್ತು. ಪ್ರಸ್ತುತ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಾಖಲೆ ದೊರೆಯಬೇಕಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಗಳು.

ಏನಿದು ಕಾರ್ಬನ್‌ ಕ್ರೆಡಿಟ್‌
ಅಭಿವೃದ್ಧಿಗೊಂಡ ರಾಷ್ಟ್ರಗಳು ತಮ್ಮ ಆಭಿವೃದ್ಧಿಗಾಗಿ ನಿಸರ್ಗದ ಮೇಲಿನ ಪರಿಣಾಮವನ್ನೂ ಲೆಕ್ಕಿಸದೇ ಹಲವು ಕಾರ್ಖಾನೆ ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಿದರು. ಇದರಿಂದಾಗಿ ವಾಯುಮಾಲಿನ್ಯ ಹೆಚ್ಚಾಗತೊಡಗಿತು. ಈ ಮಧ್ಯೆ ಇದರ ಸಮಸ್ಯೆಯನ್ನು ಮನಗಾಣಲಾಯಿತು. ಈ ಹಿನ್ನೆಲೆಯಲ್ಲಿ ಸುಮಾರು 170 ದೇಶಗಳಲ್ಲಿ ಕೈಟೋ ಪ್ರೊಟೊಕಾಲ್‌ ರೂಪಿಸಿ ಗ್ರೀನ್‌ ಹೌಸ್‌ ಗ್ಯಾಸ್‌ ಅನ್ನು ತಡೆಗಟ್ಟಲು ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದಾಗಿ 2008- 12ರವರೆಗೆ ಸುಮಾರು 5.2ರಷ್ಟು ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಯುಎನ್‌ಎಫ್‌ಸಿಸಿಸಿಯ ಕಾನ್ಫರೆನ್ಸ್‌ ಪಾರ್ಟಿಯ ನಿರ್ದೇಶನದಲ್ಲಿ ಕ್ಲೀನ್‌ ಡೆವೆಲಪ್‌ಮೆಂಟ್‌ ಮೆಕ್ಯಾನಿಸಂ (ಸಿಡಿ ಎಂ) ಅನ್ನು  ಜಾರಿಗೊಳಿಸಿದೆ. 

ಇದರಿಂದೇನು ಲಾಭ?
ಕಾರ್ಬನ್‌ ಕ್ರೆಡಿಟ್‌ ಕಾರ್ಯರೂಪಕ್ಕೆ ಬಂದಲ್ಲಿ ತಡೆಯುಂಟಾದ ಮಾಲಿನ್ಯದ ಪ್ರಮಾಣದ ಮೇಲೆ ದೊರಕುವ ಆರ್ಥಿಕ ಸಹಾಯದಲ್ಲಿ ಘಟಕ ನಿರ್ವಹಿಸುವ ಸಂಸ್ಥೆಯೊಂದಿಗೆ ಪಾಲಿಕೆಗೂ ಒಡಂಬಡಿಕೆಯಂತೆ ಶೇ. 50ರಷ್ಟು ಪಾಲು ದೊರೆಯಲಿದೆ. ಇದಕ್ಕೆ ಸಂಬಂಧಿಸಿ ಹೆಚ್ಚಿನ ದಾಖಲೆಗಳನ್ನು ಸಂಬಂಧಪಟ್ಟ ಕನ್ಸಲ್ಟೆನ್ಸಿಗೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆಯ ದಾಖಲೆ ಕೋರಿ ಪಾಲಿಕೆಯು ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ದೊರಕಿದ್ದು, ಈ ದಾಖಲೆಗಳು ಇನ್ನಷ್ಟೇ ದೊರೆಯಬೇಕಿವೆೆ.

– ಭರತ್‌ರಾಜ್‌ ಕಲ್ಲಡ್ಕ

ದುರಸ್ತಿ ಭಾಗ್ಯವಿಲ್ಲದ ಸೆಂಟ್ರಲ್‌ ಮಾರ್ಕೆಟ್‌ಗೆ ಬಣ್ಣ  ಭಾಗ್ಯ!

Team Udayavani, Mar 16, 2017, 12:48 AM IST

ಮಹಾನಗರ: ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿರುವ ಸೆಂಟ್ರಲ್‌ ಮಾರುಕಟ್ಟೆಗೆ ಈ ಬಾರಿಯೂ ದುರಸ್ತಿ ಭಾಗ್ಯ ಒಲಿಯದೆ, ಕೇವಲ ಸುಣ್ಣಬಣ್ಣದಲ್ಲಷ್ಟೆ ತೃಪ್ತಿಪಡುವಂತಾಗಿದೆ. ಪಾಲಿಕೆಯ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿರುವ ಈ  ಮಾರುಕಟ್ಟೆಯು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಅದನ್ನು ದುರಸ್ತಿಪಡಿಸಬೇಕು ಎಂದು ಇಲ್ಲಿನ ವ್ಯಾಪಾರಿಗಳು ದೀರ್ಘ‌ ಕಾಲದಿಂದ ಆಗ್ರಹಿಸುತ್ತಿದ್ದರೂ ಪಾಲಿಕೆ ಸ್ಪಂದಿಸಿಲ್ಲ. ಜತೆಗೆ ಇಲ್ಲಿ ಸ್ವಚ್ಛತೆಯ ವಿಷಯವನ್ನೂ ಕಡೆಗಣಿಸಲಾಗುತ್ತಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳನ್ನೇ ಹೊಣೆ ಮಾಡುತ್ತಿದ್ದಾರೆ.

ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡವು ಅಪಾಯದ ಸ್ಥಿತಿಯಲ್ಲಿದ್ದು, ಮಾರ್ಕೆಟ್‌ನ ಅಸೋಸಿಯೇಶನ್‌ ಹಾಗೂ ಪಾಲಿಕೆ ನಡುವಿನ ಭಿನ್ನಭಿಪ್ರಾಯವೇ ಇದರ  ನವೀಕರಣಕ್ಕೆ ತೊಡಕಾಗಿದೆ ಎಂಬ ಆರೋಪವೂ ಇದೆ. ಪಾಲಿಕೆಯು ಆಗಾಗ ತೇಪೆ ಕಾರ್ಯಗಳನ್ನು ಮಾಡಿ ಕೈ ತೊಳೆದು ಕೊಳ್ಳುತ್ತಿದೆ. ಈ ಬಾರಿಯಾದರೂ ನವೀಕರಣವಾದೀತು ಎಂದು ವ್ಯಾಪಾರಿಗಳು  ಭಾವಿಸಿದ್ದುದು ಈಗ  ಹುಸಿಯಾಗಿದ್ದು, ಪಾಲಿಕೆಯಿಂದ ಪೈಂಟಿಂಗ್‌ ಕೆಲಸವನ್ನಷ್ಟೇ ಮಾಡಲಾಗಿದೆ. ಭಿನ್ನಾಭಿಪ್ರಾಯದ ಕಾರಣ ಮಾರ್ಕೆಟ್‌ ಪಕ್ಕದಲ್ಲಿಯೇ ಇರುವ ಇನ್ನೊಂದು ಕಟ್ಟಡ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಮೊದಲು ಆ ಕಟ್ಟಡವನ್ನು ದುರಸ್ತಿಗೊಳಿಸಿ ಅಲ್ಲಿಗೆ ವ್ಯಾಪಾರಿಗಳನ್ನು ಸ್ಥಳಾಂತರಿಸಿದ ಬಳಿಕ ಸೆಂಟ್ರಲ್‌ ಮಾರ್ಕೆಟ್‌ ಅನ್ನು ನವೀಕರಿಸಬೇಕು ಎಂದು ಅಸೋಸಿಯೇಶನ್‌ ಹೇಳುತ್ತಿದೆ. ಆದರೆ ಪಾಲಿಕೆಯು ಮಾರ್ಕೆಟ್‌ ಹೊರತು ಬೇರೆ ಕಟ್ಟಡವನ್ನು ದುರಸ್ತಿ ಮಾಡುತ್ತಿಲ್ಲ  ಎಂದು  ಹೇಳುತ್ತಿರುವುದೇ ಈ ಗೊಂದಲಕ್ಕೆ ಕಾರಣ.

ಸ್ವಚ್ಛತೆ ಕಡೆಗಣನೆ
ಮಾರ್ಕೆಟ್‌ನ ಅಲ್ಲಲ್ಲಿ ಕಸದ ರಾಶಿ, ಕೊಳೆತ ತರಕಾರಿಗಳು ಕಂಡು ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರೆ ಅಲ್ಲಿನ ಮಾರುಕಟ್ಟೆ ಸಮಿತಿಗೆ ನೋಟಿಸ್‌ ನೀಡಲಾಗಿದೆ ಎಂಬ  ಉತ್ತರ ಸಿಗುತ್ತದೆ. ಸ್ಥಳೀಯ ವರ್ತಕರಿಗೆ ಕಸ ಹಾಕಲೆಂದೇ ಮನಪಾದ ಲಾರಿಯೊಂದು ಅಲ್ಲೇ ನಿಂತಿರುತ್ತದೆ. ಆದರೆ ವರ್ತಕರು ಅದನ್ನು ಬಳಸದೆ ಸಿಕ್ಕಸಿಕ್ಕಲ್ಲಿ ಚೆಲ್ಲುತ್ತಿದ್ದಾರೆ ಎಂದು ಸ್ಥಳೀಯ ಜನಪ್ರತಿನಿಧಿಯೊಬ್ಬರು ಹೇಳುತ್ತಾರೆ.

ಹೊಸ ಮಾರ್ಕೆಟ್‌ ಪ್ರಸ್ತಾವನೆ
ಹೊಸ ಮಾರ್ಕೆಟ್‌ ಪ್ರಸ್ತಾವನೆಯಲ್ಲಿರುವುದರಿಂದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ದೊಡ್ಡ ಮೊತ್ತದ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬಾರಿ ಕೇವಲ ಪೈಂಟಿಂಗ್‌ ಕೆಲಸ ಮುಗಿಸಲಾಗಿದೆ. 
– ಮೊಹಮ್ಮದ್‌ ನಝೀರ್‌, ಆಯುಕ್ತರು, ಮನಾಪ

ಮಡಂತ್ಯಾರು-ಕೊಮಿನಡ್ಕ ರಸ್ತೆಗೆ ಬೇಕಿದೆ ಡಾಮರು ಭಾಗ್ಯ

Team Udayavani, Mar 15, 2017, 12:10 AM IST

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಹಲವಾರು ರಸ್ತೆಗಳು ಜನರು ನಡೆದಾಡಲು ಕೂಡ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಇಂತಹ ರಸ್ತೆಗಳಲ್ಲಿ ಮಡಂತ್ಯಾರು ಕೊಮಿನಡ್ಕ ರಸ್ತೆ ಕೂಡ ಒಂದು. ಮಡಂತ್ಯಾರಿನಿಂದ ಕಕ್ಯಪದವಿಗೆ ತೆರಳುವ ಮುಖ್ಯರಸ್ತೆ ಇದಾಗಿದ್ದು ಮಡಂತ್ಯಾರಿನಿಂದ ಕೊಮಿನಡ್ಕವರೆಗೆ 2.5 ಕಿ.ಮೀ.ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜನರ ನಿತ್ಯ ಸಂಚಾರಕ್ಕೆ ಅನನುಕೂಲವಾಗಿದೆ. ಮಡಂತ್ಯಾರು ಕಕ್ಯಪದವು ರಸ್ತೆ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿದ್ದು  ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ  ರಸ್ತೆ ಮಾತ್ರ ಹಾಗೆಯೇ ಉಳಿದಿದೆ. ದಶಕಗಳ ಹಿಂದೆ ಡಾಮರು ಹಾಕಲಾಗಿದ್ದು ಅನಂತರ ಈ ರಸ್ತೆಗೆ ತೇಪೆ ಮಾತ್ರ ಹಾಕಲಾಗುತ್ತಿದೆ. ಒಂದೇ ಮಳೆಗೆ ತೇಪೆ ಕಿತ್ತು ಹೋಗುತ್ತಿದೆ. ಹಲವು ಬಾರಿ ಮನವಿ, ಗ್ರಾಮಸಭೆಯಲ್ಲಿ ನಿರ್ಣಯ ಮಾಡಲಾಗಿದ್ದರೂ ಯಾವುದೇ ಉಪಯೋಗವಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಚುನಾವಣೆ ವೇಳೆ ಭರವಸೆ
ಪ್ರತೀ ಚುನಾವಣೆ ಸಮಯದಲ್ಲಿಯೂ ಜನಪ್ರತಿನಿಧಿಗಳು ಮತಯಾಚನೆಗೆ ಬರುವಾಗ ಅವರೊಂದಿಗೆ ಭರವಸೆಯ ಮಹಾಪೂರವೇ ಬರುತ್ತದೆ. ಆದರೆ ಗೆದ್ದ ಬಳಿಕ ಭರವಸೆ ಮರೆತಂತೆ ವರ್ತಿಸುತ್ತಾರೆ ಎನ್ನುತ್ತಾರೆ ಈ ಭಾಗದ ಜನತೆ.

ಪುಣ್ಯ ಕ್ಷೇತ್ರಗಳ ಬೀಡು
ಮಡಂತ್ಯಾರಿನಿಂದ ಕಕ್ಯಪದವು ರಸ್ತೆಯಲ್ಲಿ ಹಲವಾರು ಪುಣ್ಯಕ್ಷೇತ್ರಗಳಿವೆ. ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನ, ಮಡವು ಬಾಲಸುಬ್ರಹ್ಮಣ್ಯ ದೇವಸ್ಥಾನ, ಅಜಿಲಮೊಗರು ಮಸೀದಿ ಇದೆ. ಕಕ್ಯಪದವು ಪಾಂಡವರಕಲ್ಲಿನಿಂದ ಮಡಂತ್ಯಾರು, ಪುಂಜಾಲಕಟ್ಟೆ, ಬೆಳ್ತಂಗಡಿ, ಉಜಿರೆಗೆ ತೆರಳಬೇಕಾದರೆ ಇದೇ ರಸ್ತೆಯನ್ನು ಬಳಸಬೇಕು. ಕಕ್ಯಪದವು – ಮಡಂತ್ಯಾರು ನಡುವೆ ಬಸ್‌ ಸಂಚಾರ ಕೂಡ ಕಡಿಮೆಯಿದ್ದು ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುವ ಪರಿಸ್ಥಿತಿ. ರಸ್ತೆಯಲ್ಲಿ ಹೊಂಡ ಗುಂಡಿಗಳೆ ತುಂಬಿಕೊಂಡಿದ್ದು ನಿತ್ಯ ಸಂಕಟ ಪಡುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಘನವಾಹನ ಸಂಚಾರದಿಂದ ಹಾನಿ
ಈ ರಸ್ತೆಯ ಮಡಂತ್ಯಾರು ಪಾಂಡವರ ಕಲ್ಲು ಪರಿಸರದಲ್ಲಿ ಅಧಿಕ ಭಾರ ಹೊತ್ತ ಲಾರಿಗಳ ಓಡಾಟ ಹೆಚ್ಚಾಗಿದ್ದು ರಸ್ತೆ ಹದಗೆಡಲು ಇದುವೇ ಮುಖ್ಯ ಕಾರಣ. ಬೆರ್ಕಳ, ಪಾಂಡವರಕಲ್ಲು, ಪಾರೆಂಕಿ ರಸ್ತೆಯಲ್ಲಿ ಮರಳು, ಕೆಂಪು ಕಲ್ಲು, ಜಲ್ಲಿ ಹೊತ್ತ ಲಾರಿಗಳ ಓಡಾಟ ನಿರಂತರವಾಗಿದೆ. ಇದನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿಲ್ಲ ಎನ್ನುವುದು ಜನರ ಆರೋಪ. 

ತೇಪೆ ಬೇಡ, ಮರುಡಾಮರಾಗಲಿ
ಮಡಂತ್ಯಾರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ಈ ರಸ್ತೆಗೆ ತೇಪೆ ಹಾಕಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ತೇಪೆ ಹಾಕುವುದಕ್ಕಿಂತ ಪೂರ್ಣ ಡಾಮರು ಹಾಕಿ  ಯೋಗ್ಯ ರಸ್ತೆಯನ್ನು ನೀಡಲಿ ಎನ್ನುವ ಬೇಡಿಕೆ ಜನರದು.

ಅನುದಾನದ ಕೊರತೆ
ಮಡಂತ್ಯಾರು ಕೊಮಿನಡ್ಕ ರಸ್ತೆ ಅನುದಾನದ ಕೊರತೆಯಿಂದ ಹಾಗೆಯೇ ಉಳಿದಿದೆ. ಶಾಸಕರ ಜತೆಗೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ನರೇಂದ್ರ, ಕಾರ್ಯ ನಿರ್ವಹಣಾಧಿಕಾರಿ, ಬೆಳ್ತಂಗಡಿ

– ಪ್ರಮೋದ್‌ ಬಳ್ಳಮಂಜ

ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಬಿಜೆಪಿ ಸದಸ್ಯರು

Team Udayavani, Mar 1, 2017, 7:23 PM IST

ಲಾಲ್‌ಬಾಗ್‌: ಎಸ್‌.ಎಫ್‌. ಸಿ. ವಿಶೇಷ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಲೋಪಗಳಾಗಿವೆ ಎಂದು ಈ ಹಿಂದಿನ ಪಾಲಿಕೆ ಆಯುಕ್ತರು ಸರಕಾರಕ್ಕೆ ನೀಡಿರುವ ವರದಿ ಹಾಗೂ ಕಾಮಗಾರಿ ಆಗದೇ ಕಾಮಗಾರಿ ಪೂರ್ಣವಾಗಿದೆ ಎಂದು ‘ಥರ್ಡ್‌ ಪಾರ್ಟಿ ವರದಿ’ ನೀಡಿರುವ ಬಗ್ಗೆ ಬಿಜೆಪಿ ಸದಸ್ಯರ ಪ್ರಸ್ತಾಪ ಮಹಾನಗರ ಪಾಲಿಕೆಯ ಮಂಗಳವಾರದ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಸಮಗ್ರ ತನಿಖೆಗೆ ಆಗ್ರಹಿಸಿ ಮೇಯರ್‌ ಪೀಠದ ಎದುರು ನಿಂತು ಆಗ್ರಹಿಸಿದರು.

ಮೇಯರ್‌ ಹರಿನಾಥ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌.ಎಫ್.ಸಿ. ವಿಶೇಷ ಅನುದಾನದ 58 ಕಾಮಗಾರಿಗಳ ಪೈಕಿ 1.06 ಕೋಟಿ ರೂ. ಗಳ 19 ಕಾಮಗಾರಿಗಳು ಪೂರ್ಣಗೊಂಡಿದ್ದು, ಮಂಜೂರಾತಿ ನೀಡುವುದಾಗಿ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಅವರು ಕಾರ್ಯಸೂಚಿ ಮಂಡಿಸಿದರು. 
ಇದಕ್ಕೆ ಬಿಜೆಪಿ ಸದಸ್ಯ ಹರೀಶ್‌ ಶೆಟ್ಟಿ ಆಕ್ಷೇಪಿಸಿ, ಈ 19 ಕಾಮಗಾರಿಗಳಲ್ಲಿ 8 ಲಕ್ಷ ರೂ. ಗಳಲ್ಲಿ ದಂಬೇಲ್‌ ಹೊಳೆ ಬದಿ ರಸ್ತೆ ಅಭಿವೃದ್ಧಿ ಹಾಗೂ 2 ಲಕ್ಷ ರೂ. ವೆಚ್ಚದಲ್ಲಿ ನಾಗಬ್ರಹ್ಮ ಸನ್ನಿಧಿ ಬಳಿ ಚರಂಡಿ ಕಾಮಗಾರಿ ನಡೆದಿರುವುದಾಗಿ ಕಾರ್ಯಸೂಚಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಹ ಯಾವುದೇ ಕಾಮಗಾರಿ ಅಲ್ಲಿ ನಡೆದಿಲ್ಲ ಎಂದು ಹೇಳಿದರು. ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, 19 ಕಾಮಗಾರಿಗಳು ನಿರ್ಮಿತಿ ಕೇಂದ್ರದಿಂದ ಪೂರ್ಣಗೊಂಡು ಈ ಬಗ್ಗೆ 3ನೇ ಸಂಸ್ಥೆಯಿಂದ ವರದಿ ಸಲ್ಲಿಕೆಯಾಗಿದೆ ಎಂದು ಉತ್ತರಿಸಿದರು. ರೂಪಾ ಡಿ. ಬಂಗೇರ, ತಿಲಕ್‌ರಾಜ್‌, ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು ಸಹಿತ ಬಿಜೆಪಿ ಸದಸ್ಯರು ಧ್ವನಿಗೂಡಿಸಿ, ಕಾಮಗಾರಿ ನಡೆಯದೇ ವರದಿ ನೀಡುವುದಾದರೂ ಹೇಗೆ ಎಂದು ಪ್ರಶ್ನಿಸಿ ಮೇಯರ್‌ ಪೀಠದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ರೂಪಾ ಡಿ. ಬಂಗೇರ ಮಾತನಾಡಿ, ಮಂಗಳೂರು ಉತ್ತರ ವಿ.ಸಭಾ ಕ್ಷೇತ್ರಕ್ಕೆ ಮೂಲ ಸೌಕರ್ಯ ಒದಗಿಸಲು ಎಸ್‌.ಎಫ್.ಸಿ. ನಿಧಿಯ 3 ಕೋ.ರೂ.ಗಳ ಪೈಕಿ 58 ಕಾಮಗಾರಿಗಳಲ್ಲಿ   38 ಕಾಮಗಾರಿಗಳು ನಡೆದಿವೆ. ಅವುಗಳ ಗುಣಮಟ್ಟದಲ್ಲಿ ಲೋಪದೋಷಗಳಿವೆ ಎಂದು ಹಾಗೂ 3ನೇ ಪಾರ್ಟಿಯಿಂದ ಪರಿಶೀಲನೆ ಆಗಿಲ್ಲ ಎಂಬುದಾಗಿ ಹಿಂದಿನ ಮನಪಾ ಆಯುಕ್ತರಾದ ಹೆಬ್ಸಿಭಾ ರಾಣಿ ಕೊರ್ಲಪಾಟಿ ಅವರು, ಸರಕಾರಕ್ಕೆ ವರದಿ ನೀಡಿದ್ದಾರೆ.  ಈಗ ಆ 38 ಕಾಮಗಾರಿಗಳ ಪೈಕಿ 19 ಕಾಮಗಾರಿಗಳನ್ನು ಇಲ್ಲಿ ಸೇರಿಸಲಾಗಿದೆ. ಇವುಗಳಲ್ಲಿ ಸದಸ್ಯರು ಉಲ್ಲೇಖೀಸುತ್ತಿರುವ 2 ಪ್ರಕರಣ ಸೇರಿವೆ ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದರು. ಮೇಯರ್‌ ಹರಿನಾಥ್‌ ಪ್ರತಿಕ್ರಿಯಿಸಿ, ಈ ಬಗ್ಗೆ ಸರಕಾರವು ಜಿಲ್ಲಾಧಿಕಾರಿ ಮೂಲ ಕ ತನಿಖಾ ವರದಿ ಪಡೆದಿದ್ದು, ಸರಕಾರ ಕ್ರಮಕೈಗೊಳ್ಳಲಿದೆ ಎಂದರು.

ನಗರಕ್ಕೆ ನೀರಿನ ಸಮಸ್ಯೆ ಇಲ್ಲ: ಮೇಯರ್‌
ತುಂಬೆಯ ಹೊಸ ಕಿಂಡಿ ಅಣೆಕಟ್ಟಿನಲ್ಲಿ 5 ಮೀ. ವರೆಗೆ ನೀರು ನಿಲ್ಲಿಸಿರುವುದರಿಂದ ಮೇ ತಿಂಗಳವರೆಗೆ ಯಾವುದೇ ಸಮಸ್ಯೆಯಾಗದು ಎಂದು ಮೇಯರ್‌ ಹರಿನಾಥ್‌ ತಿಳಿಸಿದ್ದಾರೆ. ರೂಪಾ ಡಿ. ಬಂಗೇರ ಮಾತನಾಡಿ, ಕಳೆದ ವರ್ಷ ಮೇವರೆಗೆ ಮಂಗಳೂರಿಗೆ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳ ಮಾತನ್ನು ನಂಬಿ ಜನತೆ ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಈ ಬಾರಿ ಸಮಸ್ಯೆ ಇದೆಯೇ ಎಂದು ಖಚಿತವಾಗಿ ತಿಳಿಸಿ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌, ಸಾಕಷ್ಟು ನೀರಿದೆ. ಹಾಗಾಗಿ ಮೇ ತಿಂಗಳವರೆಗೆ ಸಮಸ್ಯೆ ಉದ್ಭವವಾಗದು. ತುಂಬೆಯ ಹೊಸ ಕಿಂಡಿ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ನಿಲ್ಲಿಸಲು ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಗೆ ಪರಿಹಾರ ನೀಡಲು 7 ಕೋಟಿ ರೂ. ಸರಕಾರದಿಂದ ಮಂಜೂರು ಆಗಿದೆ ಎಂದರು.

ಪುರಭವನ: ಮಧ್ಯಮ ವರ್ಗದ ಸಭಾಂಗಣ ಇಂದು ಉದ್ಘಾಟನೆ

Team Udayavani, Feb 27, 2017, 11:00 AM IST

ಸ್ಟೇಟ್‌ಬ್ಯಾಂಕ್‌: ಮಂಗಳೂರು ಪುರಭವನ ‘ದುಬಾರಿ’ ಎಂಬ ಕೂಗು ಎದ್ದಿರುವಾಗಲೇ, ಪುರಭವನದ ಪಕ್ಕದಲ್ಲಿ ಮಧ್ಯಮವರ್ಗದ ಸಭಾಂಗಣವೊಂದು ಪಾಲಿಕೆ ವತಿಯಿಂದ ಈಗ ತಲೆ ಎತ್ತಿ ನಿಂತಿದೆ. ಪುರಭವನಕ್ಕೆ ಪೂರಕವಾಗಿ ಭೋಜನ ಗೃಹವೆಂಬಂತೆ ರೂಪುಗೊಂಡ ಈ ಸಭಾಂಗಣವು ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕಲಾಪಗಳಿಗೂ ವೇದಿಕೆ ಒದಗಿಸಲಿದೆ.

ನಗರದ ಪುರಭವನ ನವೀಕರಣಗೊಂಡ ಬಳಿಕ ತುಳು ನಾಟಕ, ಯಕ್ಷಗಾನ ಸಂಘಟಕರಿಗೆ ಕೊಂಚ ದುಬಾರಿಯಾಗಿದ್ದು, ಇಲ್ಲಿ ಪ್ರದರ್ಶನಗಳು ಕೂಡ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆೆ. ಜತೆಗೆ ಪ್ರತೀ ವರ್ಷ ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಘಟನೆಗಳು ಕೂಡ ಪುರಭವನದಿಂದ ದೂರ ಸರಿದಿವೆ. ಇದಕ್ಕೆ ಪರಿಹಾರ ಉಪಾಯವನ್ನು ಕಂಡುಹುಡುಕಿರುವ ಮಹಾನಗರ ಪಾಲಿಕೆ ಪುರಭವನದ ಹಿಂಬದಿಯಲ್ಲಿ ಭೋಜನ ಶಾಲೆಯನ್ನು ಸಭಾಂಗಣವಾಗಿಯೂ ವಿನ್ಯಾಸಗೊಳಿಸಲು ನಿರ್ಧರಿಸಿತ್ತು. ಫೆ. 27ರಂದು ಸಂಜೆ 5 ಗಂಟೆಗೆ ಇದರ ಉದ್ಘಾಟನೆ ನೆರವೇರಲಿದೆ.

ಪುರಭವನದಲ್ಲಿ ಸಾಂಸ್ಕೃತಿಕ, ಕಲಾ, ಸರಕಾರಿ ಕಾರ್ಯಕ್ರಮಗಳು ಹಾಗೂ ಮದುವೆ ಸಮಾರಂಭಗಳಿಗೆ ಒಳಾಂಗಣವನ್ನು ಸುಸಜ್ಜಿತಗೊಳಿಸಿದ್ದರೂ, ಸಭಿಕರಿಗೆ ಊಟೋಪಚಾರಕ್ಕೆ ವ್ಯವಸ್ಥೆಯಿರಲಿಲ್ಲ. ಹೀಗಾಗಿ 500 ಜನರಿಗೆ ಭೋಜನ ವ್ಯವಸ್ಥೆ ಕಲ್ಪಿಸಲು ಭೋಜನಗೃಹ ನಿರ್ಮಾಣವಾಗಿದೆ. ಇದಕ್ಕೆ ಒಟ್ಟು 1.65 ಕೋ.ರೂ. ಖರ್ಚಾಗಿದೆ. ಇದೇ ಭೋಜನ ಗೃಹವು ಸಭಾಂಗಣವಾಗಲಿದೆ. 

ಬಾಡಿಗೆ ಕಡಿಮೆ ಮಾಡಲು ಆಗ್ರಹ
ಪುರಭವನ ನವೀಕರಣಗೊಳ್ಳುವ ಮೊದಲು ಉಚಿತ ನಾಟಕ ಪ್ರದರ್ಶನಕ್ಕೆ 3,000 ರೂ. ಬಾಡಿಗೆ ಹಾಗೂ 1,500 ರೂ. ಮರುಪಾವತಿಯಾಗುವ ಠೇವಣಿಯಿತ್ತು. ಆದರೆ ಈಗ ಉಚಿತ ನಾಟಕ/ಯಕ್ಷಗಾನ ಪ್ರದರ್ಶನಕ್ಕೆ 10,000 ರೂ. ಬಾಡಿಗೆ ಹಾಗೂ 15,000 ರೂ. ಠೇವಣಿ ಇದೆ. ಜತೆಗೆ ಶೇ.14.5 ಸೇವಾ ತೆರಿಗೆ ಪಾವತಿಸಬೇಕು. 

ತಾಳಮದ್ದಳೆ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥೆ, ಸಭೆ, ಸಮ್ಮಾನ, ಖಾಸಗಿ ಶಾಲೆಗಳ ಕಾರ್ಯಕ್ರಮಕ್ಕೂ ಇದೇ ಬಾಡಿಗೆ ಅನ್ವಯ. ಟಿಕೆಟ್‌ ಯಕ್ಷಗಾನ, ನಾಟಕ, ಜಾದೂ ಪ್ರದರ್ಶನಕ್ಕೆ 20,000 ರೂ. ಬಾಡಿಗೆ ಹಾಗೂ 30,000 ರೂ. ಠೇವಣಿ, ರಸಮಂಜರಿ ಕಾರ್ಯಕ್ರಮಗಳಿಗೆ 30,000 ರೂ. ಬಾಡಿಗೆ ಹಾಗೂ 45,000 ರೂ. ಠೇವಣಿ ನೀಡಬೇಕು. ಹವಾನಿಯಂತ್ರಿತ ವ್ಯವಸ್ಥೆ ಬೇಕಿದ್ದರೆ 55,000 ರೂ. ಬಾಡಿಗೆ ಇದೆ. ಇಷ್ಟು ದೊಡ್ಡ ಮೊತ್ತ ಪಾವತಿಸಿ ಪ್ರದರ್ಶನ ಏರ್ಪಡಿಸುವುದು ಸಂಘಟಕರಿಗೆ ಕಷ್ಟವಾಗಿದ್ದು, ಇದರ ಬಾಡಿಗೆ ಕಡಿಮೆ ಮಾಡಿ ಎನ್ನುವುದು ಕಲಾಭಿಮಾನಿಗಳ ಒತ್ತಾಯ.

15 ದಿನದೊಳಗೆ ದರ ಪಟ್ಟಿ ಪ್ರಕಟ
ಭೋಜನಗೃಹವನ್ನು ಸಭಾಂಗಣ ರೂಪದಲ್ಲಿ ನಿರ್ಮಿಸಲಾಗಿದೆ. 500 ಜನರು ಇದರಲ್ಲಿ ಕುಳಿತುಕೊಳ್ಳಲು ಸೌಕರ್ಯ ಮಾಡಲಾಗುತ್ತದೆ. ನಾಟಕ, ಯಕ್ಷಗಾನ ಹಾಗೂ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಇದರಲ್ಲಿ ಮಾಡಲು ಅವಕಾಶ ನೀಡಲಾಗುತ್ತದೆ. ಇದರ ದರ ಪಟ್ಟಿಯನ್ನು ಮುಂದಿನ 15 ದಿನದೊಳಗೆ ಸಿದ್ದಪಡಿಸಲಾಗುವುದು. ಮಧ್ಯಮ ವರ್ಗಕ್ಕೆ ಈ ಸಭಾಂಗಣ ಕಡಿಮೆ ಬೆಲೆಯಲ್ಲಿ ದೊರೆಯಲಿದೆ.
– ಎಂ.ಶಶಿಧರ ಹೆಗ್ಡೆ, ಮನಪಾ ಮುಖ್ಯ ಸಚೇತಕರು

ಉಭಯ ತಾಲೂಕಿನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ

Team Udayavani, Feb 25, 2017, 2:48 AM IST

ಪುತ್ತೂರು/ಸುಳ್ಯ: ಮಹಾ ಶಿವರಾತ್ರಿಯನ್ನು ಶುಕ್ರವಾರ ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಭಕ್ತಿ ಸಡಗರಗಳಿಂದ ಆಚರಿಸಲಾಯಿತು. ಶಿವ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಭಜನೆ, ಉತ್ಸವಗಳು ನಡೆದವು. ಸಾವಿರಾರು ಸಂಖ್ಯೆಯ ಭಕ್ತರು ಶಿವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ಥರಾದರು. ಮಹಾ ಶಿವರಾತ್ರಿಯಲ್ಲಿ ವ್ರತ ಮತ್ತು ಜಾಗರಣೆ ವಿಶೇಷವಾಗಿದ್ದು, ಭಕ್ತರು ಶುಕ್ರವಾರ ಪೂರ್ಣ ವ್ರತಾಚರಣೆ ಮಾಡಿ ರಾತ್ರಿ ಜಾಗರಣೆ ಕೈಗೊಂಡರು. ಮುಂಜಾನೆ ಶಿವಾರ್ಚನೆ ಮಾಡಿದ ಭಕ್ತರು ಬಳಿಕ ಶಿವ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದರು. 

ಪಾರಾಯಣ
ರಾತ್ರಿ ಶಿವ ಪುರಾಣ ಪಾರಾಯಣ, ಶಿವ ಸಹಸ್ರ ನಾಮಾವಳಿ ಪಠಣ, ಮಹಾ ಮೃತ್ಯುಂಜಯ ಜಪ ಪಠಣ ಇತ್ಯಾದಿಗಳಲ್ಲಿ ಕಾಲ ಕಳೆದರು. ಜಾಗರಣೆ ಕೈಗೊಂಡವರು ರಾತ್ರಿಯಿಡೀ ಎಚ್ಚರವಿದ್ದು ಶಿವ ಧ್ಯಾನ, ಪಠಣಗಳಲ್ಲಿ ಸಮಯ ಕಳೆದರು. ವಿಶೇಷವಾಗಿ ಪ್ರಧಾನ ಶಿವ ಮಂದಿರಗಳಲ್ಲಿ ರಾತ್ರಿಯಿಡೀ ಶಿವಾರಾಧನೆ ಇದ್ದ ಕಾರಣ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು.

ವಿವಿಧೆಡೆ ಆಚರಣೆ
ವಿಶೇಷವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ರುದ್ರಯಾಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ ನಡೆಯಿತು. ಪಂಜ ಶ್ರೀ ಪಂಚಲಿಂಗೇಶ್ವರ, ತೊಡಿಕಾನ ಶ್ರೀ ಮಲ್ಲಿಕಾರ್ಜುನ, ನರಿ ಮೊಗರು ಶ್ರೀ ಮೃತ್ಯುಂಜಯೇಶ್ವರ, ಚಾರ್ವಾಕ ಶ್ರೀ ಕಪಿಲೇಶ್ವರ, ಎಡಮಂಗಲ ಶ್ರೀ ಪಂಚಲಿಂಗೇಶ್ವರ, ಕಾಂಚೋಡು ಶ್ರೀಮಂಜು ನಾಥೇಶ್ವರ, ಸಂಪಾಜೆ ಶ್ರೀಪಂಚಲಿಂಗೇಶ್ವರ, ನಾಗ ಪಟ್ಟಣ ಶ್ರೀಸದಾಶಿವ, ಬರೆಪ್ಪಾಡಿ ಶ್ರೀ ಪಂಚ ಲಿಂಗೇಶ್ವರ, ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ, ಸುಬ್ರಹ್ಮಣ್ಯ ಅಗ್ರಹಾರದ ಸೋಮನಾಥೇಶ್ವರ, ಪೇರಾಜೆ ಶ್ರೀ ಶಾಸ್ತಾವು, ಹರಿಹರಪಳ್ಳತ್ತಡ್ಕ ಶ್ರೀ ಹರಿಹರೇಶ್ವರ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ, ಕಾವು ಶ್ರೀ ಪಂಚಲಿಂಗೇಶ್ವರ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ, ರಾಮಕುಂಜ ಶ್ರೀ ರಾಮಕುಂಜೇಶ್ವರ, ಆರ್ಬಿ ಶ್ರೀ ಮಹಾ ಲಿಂಗೇಶ್ವರ, ಕುಲ್ಕುಂದದ ಶ್ರೀ ಬಸವೇಶ್ವರ, ನೂಜಿಬಾಳ್ತಿಲದ ಅಡೆಂಜ ಶ್ರೀ ಪಂಚಲಿಂಗೇಶ್ವರ, ಮರ್ದಾಳ ಶ್ರೀ ಮಹಾಲಿಂಗೇಶ್ವರ, ಐವರ್ನಾಡು ಶ್ರೀ ಪಂಚಲಿಂಗೇಶ್ವರ, ಕರಾಯ ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ಸೇರಿದಂತೆ ಪುತ್ತೂರು, ಸುಳ್ಯ ತಾಲೂಕುಗಳ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವ್ರತಾಚರಣೆ, ಜಾಗರಣೆ ನಡೆಯಿತು.

ಎಲ್ಲವನ್ನೂ ಮೀರಿ ಬೆಳೆಯುವವರು ಸಮಾಜದ ಆಸ್ತಿಯಾಗಬಲ್ಲರು

Team Udayavani, Feb 22, 2017, 4:04 PM IST

ಉರ್ವಸ್ಟೋರ್‌: ಸರ್ವಜ್ಞನು ಯಾವುದೇ ಜನರಿಗೆ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಆತನ ವಚನ ಸಾರ್ವಕಾಲಿಕ. ಎಲ್ಲವನ್ನೂ ಮೀರಿ ಬೆಳೆಯುವವರು ಸಮುದಾಯ ಮಾತ್ರವಲ್ಲ, ಸಮಾಜದ ಆಸ್ತಿಯಾಗಬಲ್ಲರು. ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದ ಸರ್ವಜ್ಞ ಎಲ್ಲರಿಗೂ ಮಾದರಿ ಎಂದು ಶಾಸಕ ಜೆ. ಆರ್‌ ಲೋಬೋ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ  ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರು – ಕುಂಬಾರರ ಯುವವೇದಿಕೆ ಸಹಯೋಗದಲ್ಲಿ  ಕವಿ ಸರ್ವಜ್ಞ ಜಯಂತಿಯನ್ನು ಸೋಮವಾರ ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಮಧ್ಯೆಯೇ ಬದುಕಿ ಜನರ ಜೀವನ ಪದ್ಧತಿ, ಸಂಸ್ಕೃತಿ, ಭಾಷೆಯ ಮೂಲಕ ಅನಿಸಿದ್ದನ್ನು ಮೂರು ಸಾಲಿನ ಪದ್ಯ ಬರೆದು ಜನರಲ್ಲಿ ತಿಳಿವಳಿಕೆ ಮೂಡುವಂತೆ ಮಾಡಿದ ಮಹಾಕವಿ ಸರ್ವಜ್ಞನ ವಚನ ಇಂದಿಗೂ ಪ್ರಸ್ತುತ ಎಂದು ಅವರು  ಹೇಳಿದರು. ದಾರ್ಶನಿಕರ ಜಯಂತಿಗಳು ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವುದಕ್ಕೆ ನನ್ನ ವಿರೋಧವಿದೆ. ಸರ್ವಜ್ಞ ಜಯಂತಿ, ಕನಕ ಜಯಂತಿ ಮೊದಲಾದವುಗ‌ಳು ಜನರ ಮಧ್ಯೆ ನಡೆಯಬೇಕಾದುದು. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಕ್ರಮವನ್ನು ಸಂಘಟನೆ, ಸಮುದಾಯಗಳು ಜನರ ನಡುವೆ ನಡೆಸುವಂತೆ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್‌ ಉಳ್ತೂರು ಕವಿ ಸರ್ವಜ್ಞನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸರ್ವಜ್ಞವಾಣಿ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ತಾಲೂಕು ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಮೋನು, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಎಚ್‌. ಖಾದರ್‌, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಸುಜಿರ್‌  ಶ್ರೀಧರ್‌ ಕೆ., ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ರಾಜ್ಯಾಧ್ಯಕ್ಷ ತೇಜಸ್ವಿ ರಾಜ್‌,  ಕರಾವಳಿ ಕುಲಾಲ ಕುಂಬಾರರ ವೇದಿಕೆ  ಜಿಲ್ಲಾಧ್ಯಕ್ಷ ಜಯೇಶ್‌ ಗೋವಿಂದ್‌, ಉಪ ವಿಭಾಗದ ಸಹಾಯಕ  ಆಯುಕ್ತ ರೇಣುಕಾ ಪ್ರಸಾದ್‌, ಪೃಥ್ವೀರಾಜ್‌ ಎಡಪದವು, ನಾರಾಯಣ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕ ಡಿ.ಎಂ.ರವಿಕುಮಾರ್‌ ಸ್ವಾಗತಿಸಿದರು. ಮಂಜುಳಾ ಶೆಟ್ಟಿ  ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

ಮನೆಯಲ್ಲಿರಬೇಕು ಗವಾಕ್ಷಿ!

Team Udayavani, Feb 18, 2017, 9:25 AM IST

‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ…’ ಎಂಬ ಮಾತೊಂದಿದೆ. ಸದ್ಯ ಪೀಡೆ ತೊಲಗಿತು ಅಂದುಕೊಳ್ಳುವಾಗಲೇ ಬಗಲಲ್ಲೇ ಮತ್ತೆ ಪ್ರತ್ಯಕ್ಷವಾಗುವ ಸಮಸ್ಯೆಗಳಿಗೆ ನಾವು ಹೀಗನ್ನುತ್ತೇವಲ್ಲವೆ? ಇಂಥದೇ ಪೀಡೆ ನಮ್ಮ ಮನೆಯೊಳಗೆ, ಕೆಲಸದ ಕೊಠಡಿಯೊಳಗೆ ಇರುತ್ತದೆ. ಅದು ಗಾಳಿ.

ಗಾಳಿಯೆಂದರೆ ಕೇವಲ ಗಾಳಿಯಲ್ಲ. ನಾವು ಸೇವಿಸಿ, ಬಿಸಿಯಾಗಿ ಬಿಸಿಯಾಗಿಸುವ ಗಾಳಿ. ಗವಾಕ್ಷಿಯಲ್ಲಿ ಪಿಶಾಚಿ ಬರುತ್ತದೆಯೋ ಇಲ್ಲವೊ, ಮನೆಯೊಳಗಿನ ಬಿಸಿಗಾಳಿ ಹೊರಹೋಗಲೇಬೇಕು. ಗಾಳಿಯ ಎಕ್ಸ್‌ಚೇಂಜ್‌ ನಡೆಯುವುದಕ್ಕೆ ನಾವಿರುವ ಕೊಠಡಿ, ಮನೆಗಳಲ್ಲಿ ಗವಾಕ್ಷಿಯಂತೂ ಇರಲೇಬೇಕು. ಏಕೆಂದರೆ, ಸರಿಯಾದ ವೆಂಟಿಲೇಷನ್‌ ವ್ಯವಸ್ಥೆ ಇಲ್ಲದಿದ್ದರೆ ಶುದ್ಧ ಗಾಳಿಯಿಂದ ನಾವು ವಂಚಿತರಾಗುತ್ತೇವೆ! ಬದುಕುವುದಕ್ಕೆ ಶುದ್ಧ ಗಾಳಿ ಬೇಕೆನ್ನುವುದನ್ನು ಅಲ್ಲಗಳೆಯಲಾಗದಷ್ಟೆ? ನಮ್ಮಲ್ಲಿ ಬಹುತೇಕ ಮಂದಿ ನಾವು ಹೊರಗಡೆ ಶುದ್ಧ ಗಾಳಿ ಸೇವಿಸುತ್ತಾ ಆರಾಮವಾಗಿರುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಅಸಲಿಗೆ ದಿನದ ಬಹುತೇಕ ಸಮಯ; ಕೆಲವೊಮ್ಮೆ ದಿನವಿಡೀ ಕೊಠಡಿಯೊಳಗೆ ಕೆಲಸ, ಕಾರ್ಯಗಳಲ್ಲಿ ಮುಳುಗಿರುತ್ತೇವೆ. ಇಂಥ ಸಂದರ್ಭಗಳಲ್ಲಿ ವೆಂಟಿಲೇಟರ್‌/ ಗವಾಕ್ಷಿ ನಮ್ಮ ಉಸಿರಾಟಕ್ಕೆ ಬಹಳ ಸಹಕಾರಿ. 

ಯಾಕೆ ಬೇಕು ಗವಾಕ್ಷಿ?
ಗವಾಕ್ಷಿ ಯ ಸಾಮಾನ್ಯ ಉದ್ದೇಶ ಹೊರಗಿನಿಂದ ಶುದ್ಧ ಹವೆಯನ್ನು ಕೊಠಡಿ ಅಥವಾ ಮನೆಯೊಳಗೆ ತಂದು ಮನೆಯೊಳಗಿನ ಬಿಸಿಗಾಳಿಯನ್ನು ಹೊರಹಾಕುವುದು. ಸಾಂಪ್ರದಾಯಿಕ ಹಂಚಿನ ಮನೆಗಳಲ್ಲಿ ಇದು ಇರುವುದಿಲ್ಲವಾದರೂ (ಗೋಡೆ ಮತ್ತು ವಾಲ್‌ಪ್ಲೇಟ್‌ ನಡುವಿನ ಖಾಲಿ ಜಾಗ ಆ ಕೆಲಸ ನಿರ್ವಹಿಸಬಹುದಾದ್ದರಿಂದ) ಆಧುನಿಕ ಮನೆಗಳಲ್ಲಿ ಇದನ್ನು ನಾವು ಕಾಣಬಹುದು. ಪಟ್ಟಣಗಳಲ್ಲಿ ಗವಾಕ್ಷಿ ಇಲ್ಲದಿರುವ ಆಧುನಿಕ ಮನೆಗಳು ಬೇಸಗೆಯಲ್ಲಿ ಅಷ್ಟೇ ಅಲ್ಲದೆ ಮಳೆಗಾಲ ಚಳಿಗಾಲದಲ್ಲೂ ಸೆಕೆ ಸೂಸುತ್ತವೆ. ಗವಾಕ್ಷಿ ಇದ್ದರೆ ಬಿಸಿಗಾಳಿ ಮೇಲೇರಿ ಗವಾಕ್ಷಿಯ ಮೂಲಕ ಹೊರಹೋಗುವ ಜತೆಗೆ ಕಿಟಕಿಗಳ ಮೂಲಕ ತಂಪು ಹವೆ ಒಳ ಬರಲು ಅನುವು ಮಾಡಿಕೊಡುತ್ತದೆ. ಹಾಗಾಗಿ, ಗವಾಕ್ಷಿಯ ಬಗೆಗೆ ನಿರ್ಲಕ್ಷ್ಯ ಸಲ್ಲದು. 

ಪ್ರಯೋಜನಗಳು
ಕಲ್ಮಶ ನಿಯಂತ್ರಣ
ಸಾಮಾನ್ಯವಾಗಿ ಹೊರಗಿನ ಗಾಳಿಗಿಂತ ಮನೆಯೊಳಗಿನ ಗಾಳಿ ಹೆಚ್ಚು ಮಲಿನಗೊಂಡಿರುತ್ತದೆ. ಉತ್ತಮ ವೆಂಟಿಲೇಷನ್‌ ವ್ಯವಸ್ಥೆಯು ಕೊಠಡಿಯೊಳಗಿನ ಮಾಲಿನ್ಯಕಾರಕಗಳು, ಕೀಟಾಣು, ತೇವಾಂಶದ ಸಂಗ್ರಹವನ್ನು ತಡೆಯುತ್ತದೆ ಮತ್ತು ಬೆವರಿನ ದುರ್ಗಂಧದಂಥ ಅಸಹ್ಯ ವಾಸನೆಗಳನ್ನು ಹೊರದಬ್ಬುತ್ತದೆ.

ಏರ್‌ ರೆಗ್ಯುಲೇಷನ್‌
ಗವಾಕ್ಷಿಯಿರುವುದರಿಂದ ನೈಸರ್ಗಿಕ ಗಾಳಿ ಮನೆಯೊಳಗೆ ಬರುವುದರಿಂದ ಸ್ವಯಂಚಾಲಿತ ನೈಸರ್ಗಿಕ ಏರ್‌ ರೆಗ್ಯುಲೇಷನ್‌ ವ್ಯವಸ್ಥೆ ಇದ್ದಂತಾಗುತ್ತದೆ. 

ಉಷ್ಣ ತಗ್ಗಿಸುತ್ತದೆ
ಇದು ಬಹಳವಾಗಿ ಮೇಲು ಸ್ತರಕ್ಕೆ ಕಾಣಬಹುದಾದ ಅಂಶ. ಕೆಲಸದ ಜಾಗದಲ್ಲಿ ಅಥವಾ ಮನೆಯೊಳಗೆ ಹೆಚ್ಚು ಜನರು ಸೇರಿದಾಗ ಕೊಠಡಿಯ ವಾತಾವರಣವು ಬಿಸಿಯಾಗಿ ಉಸಿರುಕಟ್ಟಿದಂತಾಗುತ್ತದೆ. ಗವಾಕ್ಷಿ ವ್ಯವಸ್ಥೆ ಇದ್ದರೆ ಈ ಸಮಸ್ಯೆ ತಕ್ಕಮಟ್ಟಿಗೆ ತಗ್ಗಬಹುದಲ್ಲದೆ, ಕೆಲಸದ ಸ್ಥಳವನ್ನು ಹೆಚ್ಚು ಪ್ರೊಡಕ್ಟಿವ್‌ ಆಗಿರಿಸಬಲ್ಲದು.

ಆರೋಗ್ಯ ಲಾಭಗಳು 
ಒಳಾಂಗಣ ವಾಯುಮಾಲಿನ್ಯದಿಂದಾಗಿ ತಲೆನೋವು, ಅಲರ್ಜಿ, ಅಸ್ತಮಾ, ದದ್ದು, ಸೈನಸೈಟಿಸ್‌ನಂಥ ಕಾಯಿಲೆಗಳು ಬರುತ್ತವೆ. ಗವಾಕ್ಷಿಯು ಇಂಥ ಸಾಧ್ಯತೆಗಳನ್ನು ದೂರ ಮಾಡಬಲ್ಲದು.

– ಕುದ್ಯಾಡಿ ಸಂದೇಶ್‌ ಸಾಲ್ಯಾನ್‌ 

3ಡಿ ತಂತ್ರಜ್ಞಾನದ ತಾರಾಲಯ

Team Udayavani, Feb 17, 2017, 4:55 PM IST

ಪಿಲಿಕುಳ: ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡ್ಡಯನ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ ವಿಜ್ಞಾನ ಲೋಕದಲ್ಲಿ ಹೊಸ ಇತಿಹಾಸವನ್ನು ಬರೆದಿದ್ದರೆ, ಇಂತಹ ವಿಜ್ಞಾನದ ಅಚ್ಚರಿ ಹಾಗೂ ನಭದ ವಿಸ್ಮಯಗಳನ್ನು ಜನರಿಗೆ ಪರಿಚಯಿಸುವ ದೇಶದ ಮೊದಲ 3ಡಿ ತಾರಾಲಯದ ಕಾಮಗಾರಿಗೆ ಪಿಲಿಕುಳದಲ್ಲಿ ವೇಗ ದೊರೆತಿದೆ. ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ಅನುದಾನದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 3ಡಿ ಪ್ಲಾನೆಟೋರಿಯಂ ಸ್ವಾಮಿ ವಿವೇಕಾನಂದ ತಾರಾಲಯ’ ಹೆಸರಿನಲ್ಲಿ ರೂಪುಗೊಳ್ಳಲಿದೆ.

ಈಗಾಗಲೇ ಇದರ ಸಿವಿಲ್‌ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಯಂತ್ರೋಪಕರಣ ಅಳವಡಿಕೆ ಪ್ರಕ್ರಿಯೆಗಳಿಗೆ ಚಾಲನೆ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಿಲಿಕುಳ ಅತ್ಯಾಧುನಿಕ ಹೈಬ್ರಿಡ್‌ ಪ್ರೊಜೆಕ್ಷನ್‌ ಸಿಸ್ಟಮ್‌ನ ತಾರಾಲಯಕ್ಕೆ 35.69 ಕೋ.ರೂ. ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಮೂಲಕ ತಾರಾಲಯದ ಕಾಮಗಾರಿಗೆ ಇನ್ನಷ್ಟು ಬಲ ಬಂದಂತಾಗಿದೆ. 2014ರ ಫೆ. 13ರಂದು ‘ಸ್ವಾಮಿ ವಿವೇಕಾನಂದ ತಾರಾಲಯ’ಕ್ಕೆ  ಶಾಸಕ ಜೆ.ಆರ್‌.ಲೋಬೋ ಗುದ್ದಲಿ ಪೂಜೆ ನೆರವೇರಿಸಿದ್ದರು. 24.5 ಕೋ.ರೂ. ವೆಚ್ಚದಲ್ಲಿ ತಾರಾಲಯ ನಿರ್ಮಾಣದ ಗುರಿ ಹೊಂದಲಾಗಿತ್ತು. ಈಗಾಗಲೇ ತಾರಾಲಯ ಕಟ್ಟಡದೊಳಗೆ 18 ಮೀಟರ್‌ನ ಗುಮ್ಮಟವನ್ನು ನಿರ್ಮಿಸಲಾಗಿದೆ. 

ನಕ್ಷತ್ರ, ಸೂರ್ಯ, ಚಂದ್ರ, ಧೂಮಕೇತು, ಗ್ರಹ ಹೀಗೆ ಆಕಾಶಕ್ಕೆ ಸಂಬಂಧಪಟ್ಟ ವಿಷಯಗಳು ಚಿಣ್ಣರಿಗೆ ಕುತೂಹಲ ತರುವಂಥದ್ದು. ವಿಜ್ಞಾನ ಕುರಿತಂತೆ ಆಸಕ್ತಿ ಮೂಡಿಸುತ್ತದೆ. ಇಂತಹ ಕುತೂಹಲವನ್ನು ನೀಡುವ ಮೂಲಕ, ರಾತ್ರಿ ವೇಳೆ ಆಕಾಶದಲ್ಲಿ ಕಾಣುವ ಗ್ರಹಗಳು, ನಕ್ಷತ್ರ ಪುಂಜಗಳ ಪರಿಚಯ ಈ ತಾರಾಲಯದಲ್ಲಿ ಆಗಲಿದೆ. ಬಾಹ್ಯಾಕಾಶದಲ್ಲಿ ದೊರೆಯುವ ಮಾಹಿತಿಗಳ ವಿವರ, ಸೂರ್ಯ ಹಾಗೂ ಸೌರವ್ಯೂಹದ ಉಗಮ ಕುರಿತ ಕ್ಲಿಷ್ಟಕರ ಅಂಶಗಳನ್ನು ಅರ್ಥವಾಗುವಂತೆ ವಿವರಿಸ ಲಾಗುತ್ತದೆ. ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಈ ಪ್ಲಾನಿಟೋರಿಯಂಗೆ ‘ಸ್ವಾಮಿ ವಿವೇಕಾನಂದ ತಾರಾಲಯ’ ಎಂದು ನಾಮಕರಣ ಮಾಡಲಾಗಿದೆ. ಖಗೋಳ ಕ್ಷೇತ್ರದ ಎಲ್ಲ ವಿಸ್ಮಯಗಳನ್ನು, ಎಲ್ಲ ಗ್ರಹಗಳನ್ನು ಒಂದು ಥಿಯೇಟರ್‌ ಒಳಗೆ ತ್ರಿಡಿ ತಂತ್ರಜ್ಞಾನದಲ್ಲಿ ತೋರಿಸಲಾಗುತ್ತದೆ.

ಬಾಹ್ಯಾಕಾಶ ತಂತ್ರಜ್ಞಾನದ ಕೇಂದ್ರ 3ಡಿ ತಾರಾಲಯ
ವಿಜ್ಞಾನ ಸುಲಭ ಎಂದು ತೋರಿಸಿಕೊಡುವ ನಿಟ್ಟಿನಲ್ಲಿ ಮಕ್ಕಳಿಗೆ ಮನೋರಂಜನೆ ಜತೆಗೆ ಶಿಕ್ಷಣ ನೀಡಬೇಕು ಎನ್ನುವ ಸಣ್ಣ ಕನಸಿನೊಂದಿಗೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಆರಂಭಿಸಲಾಯಿತು. ಆದರೆ ಇಂದು ಈ ಕನಸು ಇನ್ನಷ್ಟು ವಿಸ್ತಾರ ಪಡೆದುಕೊಂಡಿದೆ. ಮಕ್ಕಳು/ಸಾರ್ವಜನಿಕರಲ್ಲಿ  ಬಾಹ್ಯಾಕಾಶ ತಂತ್ರಜ್ಞಾನದ ಕುರಿತಂತೆ ಆಸಕ್ತಿ ಮೂಡಿಸುವ ಕೇಂದ್ರವಾಗಿ 3ಡಿ ತಾರಾಲಯ ಮೂಡಿಬರಲಿದೆ.
– ಕೆ.ವಿ.ರಾವ್‌, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ.

ಹೊರದೇಶದಿಂದ ಯಂತ್ರೋಪಕರಣಗಳು
ಈಗಾಗಲೇ ತಾರಾಲಯದ ಸಿವಿಲ್‌ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಇನ್ನು ಯಂತ್ರೋಪಕರಣಗಳು ಬರಬೇಕಿದೆ. ಅತ್ಯಧುನಿಕ ಹೈಬ್ರಿಡ್‌ ಪ್ರೊಜೆಕ್ಷನ್‌ ವ್ಯವಸ್ಥೆ ಇರುವ ಆಪ್ಟೋ-ಮೆಕ್ಯಾನಿಕಲ್‌ ಹಾಗೂ 3ಡಿ ಡಿಜಿಲ್‌ ಪ್ರೊಜೆಕ್ಷನ್‌ ವ್ಯವಸ್ಥೆಯ ತಾರಾಲಯ ಇದಾಗಿರುವುದರಿಂದ ಇದರ ಯಂತ್ರೋಪಕರಣಗಳು ಹೊರದೇಶದಿಂದ ಬರಲಿವೆ. ಅಂತಾರಾಷ್ಟ್ರೀಯ ಗುಣಮಟ್ಟದ ಯಂತ್ರಗಳು ಇದಾಗಿರಲಿವೆ 

– ದಿನೇಶ್‌ ಇರಾ

ಧರ್ಮಸ್ಥಳದ ಯೋಜನೆಗಳು ನಿರಂತರ: ಡಾ| ಹೆಗ್ಗಡೆ

Team Udayavani, Feb 16, 2017, 5:04 PM IST

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದ ಸತ್ಯ ಇರುವವರೆಗೆ ಧರ್ಮಸ್ಥಳದ ಯೋಜನೆಗಳು ಅಸ್ತಿತ್ವ ದಲ್ಲಿರುತ್ತವೆ. ನಿರಂತರವಾಗಿರುತ್ತವೆ. ಯಾವುದೇ ಆತಂಕ ಬೇಡ. ಅಸ್ಥಿರಗೊಳಿಸುವ ಮನಸ್ಸುಗಳ ಯೋಚನೆ ಗಳಿಗೆ ಬೆಳ್ತಂಗಡಿಯವರು ಸರಿಯಾದ ಉತ್ತರವನ್ನೇ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಬುಧವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳ ವಲಯದ ಪ್ರಗತಿಬಂಧು ಒಕ್ಕೂಟಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಜಾತಿ, ಮತ, ಭೇದ ಇಲ್ಲದೇ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದರು. ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ತಾಂತ್ರಿಕತೆಯಿಂದ ಪ್ರಗತಿ ಸಾಧಿಸುವ ಮೂಲಕ ಯೋಜನೆ ಸಾಕಷ್ಟು ಬದಲಾಗುತ್ತಿದೆ. ನಾಯಕರಿಗೆ ಯೋಜನೆಯ ಮಾಹಿತಿ ಇರಬೇಕಾದ ಅಗತ್ಯವಿದೆ. ಮುಖ್ಯವಾಗಿ ನಮ್ಮಲ್ಲಿ ಒಗ್ಗಟ್ಟು ಬೇಕು. ಆಗ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದರು.

ಹಸ್ತಾಂತರ
ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ಅವರು ನೂತನ ಅಧ್ಯಕ್ಷೆ ಶಾಂತಾ ಶೆಟ್ಟಿ ಅವರಿಗೆ, ಕನ್ಯಾಡಿ ಒಕ್ಕೂಟದ ಅಧ್ಯಕ್ಷೆ ಯಶೋದಾ ಅವರು ನೂತನ ಅಧ್ಯಕ್ಷೆ ಭಾರತಿ ಅವರಿಗೆ, ಕಳಂಜ ‘ಬಿ’ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ ಅವರು ನೂತನ ಅಧ್ಯಕ್ಷ ದಿನೇಶ್‌ ಎಂ. ಅವರಿಗೆ; ಕಳಂಜ ‘ಎ’ ಒಕ್ಕೂಟದ ಅಧ್ಯಕ್ಷ ಜನಾರ್ದನ ಅವರು ನೂತನ ಅಧ್ಯಕ್ಷ ರಾಜೇಂದ್ರ ಅವರಿಗೆ; ಕಾಯರ್ತಡ್ಕ ಒಕ್ಕೂಟದ ಕಾರ್ಯಪ್ಪ ಅವರು ಕೋಟ್ಯಪ್ಪ ಅವರಿಗೆ; ಪುದುವೆಟ್ಟು ಒಕ್ಕೂಟದ ಅಧ್ಯಕ್ಷ ರುಕ್ಮಯ್ಯ ಗೌಡ ಅವರು ನೂತನ ಅಧ್ಯಕ್ಷೆ ಸಿಂಧು ಅವರಿಗೆ; ಕಲ್ಮಂಜ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಅವರು ನೂತನ ಅಧ್ಯಕ್ಷೆ ರೇವತಿ ಅವರಿಗೆ; ಮಿಯ್ನಾರು ಒಕ್ಕೂಟದ ಅಧ್ಯಕ್ಷ ಸಂಜೀವ ಗೌಡ ಅವರು ವೆಂಕಟರಮಣ ಅವರಿಗೆ; ನಿಡ್ಲೆ ಒಕ್ಕೂಟದ ಪುರುಷೋತ್ತಮ ಅವರು ನೂತನ ಅಧ್ಯಕ್ಷ ಸಂತೋಷ್‌ ಕುಮಾರ್‌ ಅವರಿಗೆ; ಬೂಡುಜಾಲು ಒಕ್ಕೂಟದ ಮೋನಪ್ಪ ಗೌಡ ಅವರು ಕೊರಗಪ್ಪ ಗೌಡ ಅವರಿಗೆ; ಕೆಮ್ಮಟೆ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಅವರು ನೂತನ ಅಧ್ಯಕ್ಷೆ ಉಷಾ ಅವರಿಗೆ; ಕಾಯರ್ತಡ್ಕ ಒಕ್ಕೂಟದ ರಾಜಪ್ಪ ಅವರು ಕೋಟ್ಯಪ್ಪ ಅವರಿಗೆ; ಬರಂಗಾಯ ಒಕ್ಕೂಟದ ಶಿವರಾಜ್‌ ರೈ ಅವರು ನೂತನ ಅಧ್ಯಕ್ಷೆ ವೇದಾವತಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಗೌರವ ಸಮರ್ಪಣೆ
ಕಾಯರ್ತಡ್ಕದ ಕೋಟ್ಯಪ್ಪ ಪೂಜಾರಿ ಅವರಿಗೆ ಉತ್ತಮ ಕೃಷಿಕ, ಉತ್ತಮ ನವಜೀವನ ಸಮಿತಿ ಸದಸ್ಯರಾಗಿ ದೇವಣ್ಣ ಗೌಡ, ಸ್ವ ಉದ್ಯೋಗ ಸಾಧಕಿ ಕನ್ಯಾಡಿ ಸುಂದರಿ, ಜ್ಞಾನವಿಕಾಸದ ಹಿರಿಯ ಸದಸ್ಯೆಯಾಗಿ ಕಮಲಾ ಧರ್ಮಸ್ಥಳ, ಮಣ್ಣಿನ ಕಲಾಕೃತಿಕಾರ ಹರಿಕೃಷ್ಣ ಕೆ. ಎಸ್‌., ಉತ್ತಮ ಒಕ್ಕೂಟ ಎಂದು ಕನ್ಯಾಡಿ ಒಕ್ಕೂಟ, ಅತ್ಯುತ್ತಮ ತಂಡ ಎಂದು ನಿಡ್ಲೆಯ ಪೈಲೋಡಿ ತಂಡಕ್ಕೆ ಗೌರವ ಸಮರ್ಪಿಸಿದರು. ಉತ್ತಮ ಸ್ವಸಹಾಯ ಸಂಘವಾಗಿ ಧರ್ಮಸ್ಥಳದ ಕಾಮಧೇನು, ಉತ್ತಮ ಜ್ಞಾನವಿಕಾಸವಾಗಿ ಪುದುವೆಟ್ಟಿನ ರತ್ನಶ್ರೀ ಜೆವಿಕೆ, ಅತಿ ಹೆಚ್ಚು ಜೀವನ್‌ಮಧುರ ಮಾಡಿದ ತಂಡ ಒಕ್ಕೂಟ ಕಾಯರ್ತಡ್ಕ ಒಕ್ಕೂಟ, ಅತಿಹೆಚ್ಚು ಪ್ರಗತಿನಿಧಿ ಪಡೆದ ಒಕ್ಕೂಟ ಧರ್ಮಸ್ಥಳ, ಅತಿಹೆಚ್ಚು ಗೋಬರ್‌ ಗ್ಯಾಸ್‌ ಘಟಕ ಸ್ಥಾಪಿಸಿದ ಒಕ್ಕೂಟ ನಿಡ್ಲೆ, ಸೊನ್ನೆ ಕಂತು ಬಾಕಿಯ ಒಕ್ಕೂಟಗಳು ಕೆಮ್ಮಟೆ, ಪುದುವೆಟ್ಟು, ಕಲ್ಮಂಜ, ಬೂಡುಜಾಲು, ಕಳಂಜ ಬಿ., ದಾಖಲಾತಿ ನಿರ್ವಹಣೆ ಹಾಗೂ ಸಮಯ ಪಾಲನೆಯಲ್ಲಿ ಬರಂಗಾಯ, ಅತಿಹೆಚ್ಚು ಅಟಲ್‌ ಪೆನ್ಶನ್‌ ಮಾಡಿದ ತಂಡ ಮಿಯ್ನಾರು ತಂಡ ಗೌರವಿಸಲ್ಪಟ್ಟವು. ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿ  ಡಿ. ಸಂಪತ್‌ ಸಾಮ್ರಾಜ್ಯ, ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌. ಎಚ್‌. ಮಂಜುನಾಥ್‌, ಆರ್ಥಿಕ ನಿರ್ದೇಶಕ ಶಾಂತಾರಾಮ ಪೈ ಉಪಸ್ಥಿತರಿದ್ದರು. ನಿರ್ದೇಶಕಿ ಮನೋರಮಾ ಭಟ್‌, ಕೃಷಿ ಮೇಲ್ವಿಚಾರಕ ರಾಮ್‌ ಕುಮಾರ್‌ ನಿರ್ವಹಿಸಿ, ಯೋಜನಾಧಿಕಾರಿ ರೂಪಾ ಜೈನ್‌ ವಂದಿಸಿದರು.

ಪ್ರಗತಿಯ ಪಾಲುದಾರರು 
ಧರ್ಮಸ್ಥಳ ಯೋಜನೆಯ ಸದಸ್ಯರೆಂದರೆ ಅವರು ಪ್ರಗತಿಯ ಪಾಲುದಾರರು ಹಾಗೂ ಪ್ರಗತಿಯ ಹರಿಕಾರರು. ನಾವು ಆತ್ಮವಿಶ್ವಾಸ ಹಾಗೂ ಧೈರ್ಯವನ್ನಷ್ಟೇ ನೀಡಿದ್ದು. ಸಾಧನೆಯ ಹಾದಿ ತೋರಿದಾಗ ಅದರಲ್ಲಿ ನಡೆದು ಯಶ ಸಾಧಿಸಿದ್ದು ಯೋಜನೆಯ ಪಾಲುದಾರರೇ.
– ಡಾ|  ಡಿ. ವೀರೇಂದ್ರ ಹೆಗ್ಗಡೆ 

ನಗರವೆಲ್ಲ ವಿವೇಕಮಯ…

Team Udayavani, Feb 14, 2017, 1:14 AM IST

ಸ್ಟೇಟ್‌ಬ್ಯಾಂಕ್‌: ಸ್ವಾಮಿ ವಿವೇಕಾನಂದರ ಭವ್ಯ ಭಾರತದ ದೂರದೃಷ್ಟಿ ಪರಿಕಲ್ಪನೆಯನ್ನು ಸಾರುವ ಡಿಜಿಟಲ್‌ ಸಂಸ್ಕಾರ್‌ ಮಾದರಿ… ಕ್ಯಾಶ್‌ಲೆಸ್‌ ವಿಲೇಜ್‌ನ್ನು ಪ್ರತಿಬಿಂಬಿಸುವ ಕಲಾಕೃತಿಗಳು.. ಬೇಳೆ ಕಾಳು, ಪ್ರಾಕೃತಿಕ ವಸ್ತುಗಳನ್ನೇ ಉಪಯೋಗಿಸಿ ತಯಾರಿ ಸಿದ ವಿವೇಕಾನಂದರ ಚಿತ್ರಗಳು.. ಭಾರತದಲ್ಲಿ ನಿವೇದಿತೆಯ ಕರ್ಮ ಯೋಗದ ಝಲಕ್‌.. ಯುವ ಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ಶನಿವಾರ ಆರಂಭವಾದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿನ ‘ಪಶ್ಚಿಮದಲ್ಲಿ ವಿವೇಕಾನಂದ, ಪೂರ್ವದಲ್ಲಿ ನಿವೇದಿತಾ ಪ್ರದರ್ಶಿನೀ’ ಪೂರ್ವ- ಪಶ್ಚಿಮದ ಅಪೂರ್ವ ಪ್ರೇರಣಾ ಸಂಗಮವಾಯಿತು. ಪ್ರದರ್ಶಿನಿಯನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಉದ್ಘಾಟಿಸಿದರು. 

ಕ್ಯಾಶ್‌ಲೆಸ್‌ ವಿಲೇಜ್‌ 
ಡಿಜಿಟಲ್‌ ಸಂಸ್ಕಾರ್‌ ಮಾದರಿಯು ಸ್ವಾಮಿ ವಿವೇಕಾನಂದರ ಭವಿಷ್ಯ ಭಾರತದ ಪರಿಕಲ್ಪನೆಯನ್ನು ತೆರೆದಿಡುವಂತಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನೂತನ ಯೋಜನೆ ನಗದು ರಹಿತ ವ್ಯವಹಾರವನ್ನು ಬಿಂಬಿಸುವ ಕ್ಯಾಶ್‌ಲೆಸ್‌ ವಿಲೇಜ್‌ ಮಾದರಿ, ಆಧುನಿಕ ಮಾಧ್ಯಮಗಳಾದ ಫೇಸ್‌ಬುಕ್‌, ಟ್ವಿಟರ್‌, ಹೈಕ್‌ಗಳ ಆವಶ್ಯಕತೆ, ಸದೃಢ ಆರ್ಥಿಕತೆಗಾಗಿ ವಿತ್ತಶಕ್ತಿಯ ಪಾತ್ರ, ಮಹಾರಕ್ಷಕ್‌ನ ಮಾದರಿಗಳು ಆಕರ್ಷಕವಾಗಿದ್ದವು. 

ಆಕರ್ಷಕ ವಿವೇಕಾನಂದ ಕೊಲಾಜ್‌
ಮೂಲ್ಕಿಯ ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢಶಾಲೆಯ ಕಲಾ ಶಿಕ್ಷಕ ವೆಂಕಿ ಪಲಿಮಾರ್‌ ಮತ್ತು ವಿದ್ಯಾರ್ಥಿಗಳು ತಯಾರಿಸಿದ 21 x 16 ಅಡಿ ಎತ್ತರದ ಜಾಗತಿಕ ದಾಖಲೆಯ ಸ್ವಾಮಿ ವಿವೇಕಾನಂದರ ಕೊಲಾಜ್‌ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 

ಕೊತ್ತಂಬರಿ, ಹೆಸರು ಕಾಳು, ಮರದ ಹುಡಿ, ಸಾಸಿವೆ, ಅಕ್ಕಿಕಾಳು ಸೇರಿದಂತೆ ವಿವಿಧ ಪ್ರಾಕೃತಿಕ ಅಂಶಗಳಿಂದಲೇ ತಯಾರಾದ ಸುಮಾರು 30ಕ್ಕೂ ಅಧಿಕ ವಿವೇಕಾನಂದ, ಅಕ್ಕ ನಿವೇದಿತೆಯರ ಚಿತ್ರಗಳು ಪ್ರದರ್ಶಿನಿಯಲ್ಲಿದ್ದವು. ದೇಶಭಕ್ತಿ ರಾಷ್ಟ್ರ ನಾಯಕರ ನುಡಿಮುತ್ತುಗಳು, ವಿವೇಕಾನಂದರ ಪ್ರೇರಣೆಗೊಳಗಾದ ಸಂಘಟನೆಗಳ ಸ್ಟಾಲ್‌ಗ‌ಳು, ವಿವೇಕಾ- ನಿವೇದಿತೆಯರ ಸಾಹಿತ್ಯ ಪುಸ್ತಕಗಳನ್ನೂ ಪ್ರದರ್ಶನಕ್ಕಿಡಲಾಗಿತ್ತು. 


ಪಲ್ಲಕ್ಕಿ ಉತ್ಸವದಲ್ಲಿ ಸಾಹಿತ್ಯದ ಮೆರವಣಿಗೆ

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮುಖ್ಯ ವೇದಿಕೆಯೆಡೆಗೆ ಕರೆ ತರಲಾಗುತ್ತದೆ. ಆದರೆ ವಿವಿಧ ಭಾಷೆಗಳಲ್ಲಿ ಬರೆಯಲಾಗಿರುವ ಸ್ವಾಮಿ ವಿವೇಕಾನಂದ ಮತ್ತು ಅಕ್ಕ ನಿವೇದಿತೆಯರ ಕುರಿತ ಸಾಹಿತ್ಯ ಹಾಗೂ ರಾಷ್ಟ್ರ ನಿರ್ಮಾಣದ ಸಾಹಿತ್ಯಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಿರುವುದು ಸಮ್ಮೇಳನದ ವೈಶಿಷ್ಟ್ಯವಾಗಿತ್ತು.ವಿವೇಕಾನಂದರಿಗೆ ಪ್ರಿಯವಾಗಿದ್ದ ಶಂಖ, ಜಾಗಟೆಗಳ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಕೇಂದ್ರ ಮೈದಾನದವರೆಗೆ ನಡೆದ ಮೆರವಣಿಗೆಗೆ ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಚಾಲನೆ ನೀಡಿದ‌ರು. ಮೆರವಣಿಗೆಯಲ್ಲಿ ಯುವಾ ಬ್ರಿಗೇಡ್‌ ಕಾರ್ಯಕರ್ತರು ಭಾಗವಹಿಸಿದ್ದರು.

ಚಾಯ್‌ ಪೇ ಚರ್ಚಾ ಮಾದರಿ
‘ಚಾಯ್‌ ಪೇ ಚರ್ಚಾ’ ಮಾದರಿಯಲ್ಲಿ ವಿವೇಕಾನಂದರ ಪ್ರತಿಕೃತಿಯನ್ನು ತಯಾರಿಸಿರುವುದು ನೋಡುಗರನ್ನು ಆಕರ್ಷಿಸುತ್ತಿತ್ತು. ಅಕ್ಕ ನಿವೇದಿತೆಯು ಭಾರತದ ಮಂದಿಗೆ ಶಿಕ್ಷಣ ನೀಡುತ್ತಿರುವ ಮಾದರಿಯೂ ಆಕರ್ಷಕವಾಗಿತ್ತು. ಶ್ರೀ ರಾಮಕೃಷ್ಣ ಪರಮಹಂಸರು, ಶಾರದಾ ಮಾತೆಯರ ಚಿತ್ರಗಳೂ ಪ್ರದರ್ಶಿನಿಯಲ್ಲಿದ್ದವು.

ಮರಳು ಅಕ್ರಮ ಸಾಗಾಟ: ವಿಟ್ಲ- ಕರೋಪಾಡಿ ರಸ್ತೆ ಸ್ಥಿತಿ ಅಯೋಮಯ

Team Udayavani, Feb 11, 2017, 9:55 AM IST

ವಿಟ್ಲ: ಅಕ್ರಮ ಮರಳು ಸಾಗಾಟಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ಇದರಿಂದಾಗಿ ಹಲವು  ರಸ್ತೆಗಳು ಹದಗೆಡುತ್ತಿವೆ. ವಿಟ್ಲ-ಕನ್ಯಾನ-ಕರೋಪಾಡಿ ರಸ್ತೆಯಲ್ಲಿ ಕೂಡ ಮರಳು ಸಾಗಾಟದ ಲಾರಿಗಳಿಂದಾಗಿ ರಸ್ತೆ ಹದಗೆಟ್ಟಿದೆ. ನಾಗರಿಕರು ಈ ಬಗ್ಗೆ ದೂರಿದ್ದಾರೆ.

ಸಾಗಾಟಕ್ಕೆ ಹಲವು ಮಾರ್ಗ 
ಕರ್ನಾಟಕದಿಂದ ಕೇರಳಕ್ಕೆ ಅಕ್ರಮ ಸಾಗಾಟ ಮಾಡುವುದಕ್ಕೆ ಹಲವಾರು ಮಾರ್ಗಗಳಿವೆ. ವಿಟ್ಲದಿಂದ ಅಡ್ಯನಡ್ಕ ಪೆರ್ಲ ಮಾರ್ಗ, ಪುಣಚ ಮೂಡಂಬೈಲು, ಸಾರಡ್ಕ, ಕನ್ಯಾನ ಕರೋಪಾಡಿ ಬಾಯಾರು, ಸಾಲೆತ್ತೂರು ಕಟ್ಟತ್ತಿಲ ಬಾಕ್ರಬೈಲು ಸೇರಿದಂತೆ ಹಲವಾರು ಸಂಪರ್ಕ ರಸ್ತೆಗಳನ್ನು ಮರ, ದನಗಳನ್ನು ಸಾಗಾಟ ಮಾಡುವುದಕ್ಕೆ ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಕನ್ಯಾನ ಮಾರ್ಗ ಬಳಕೆ 
ಬಿ.ಸಿ.ರೋಡ್‌ ಕಡೆಯಿಂದ ವಿಟ್ಲ ಮೂಲಕ ಅಡ್ಯನಡ್ಕ, ಸಾರಡ್ಕ ಚೆಕ್‌ಪೋಸ್ಟ್‌ ದಾಟಿ ಕೇರಳಕ್ಕೆ ಮರಳು ಸಾಗಿಸಲಾಗುತ್ತಿತ್ತು. ಇತ್ತೀಚೆಗೆ ಹಲವು ಮರಳು ಲಾರಿಗಳು ಕನ್ಯಾನ ಮಾರ್ಗವನ್ನು ಬಳಸುತ್ತಿವೆ. ಈ ಚಿಕ್ಕ ಹಳ್ಳಿ ರಸ್ತೆಯಲ್ಲಿ 10 ಚಕ್ರದ ಲಾರಿಗಳು 24 ಗಂಟೆಯೂ ಸಾಗುತ್ತಿವೆ. ಸ್ಥಳೀಯರ ಪ್ರಕಾರ ಪ್ರತಿದಿವಸ ಈ ರಸ್ತೆಯಲ್ಲಿ ಮರಳು, ಜಲ್ಲಿ ಸಾಗಾಟ ಮಾಡುವ ಲಾರಿಗಳ ಸಂಖ್ಯೆ 100ಕ್ಕೂ ಅಧಿಕ.

ವಿಟ್ಲದಿಂದ ಕನ್ಯಾನದವರೆಗೆ ರಸ್ತೆ ಸುಸಜ್ಜಿತಗೊಳಿಸಲ್ಪಟ್ಟಿದ್ದರೂ ಕನ್ಯಾನದಿಂದ ಕರೋಪಾಡಿ ಗ್ರಾಮದ ಮುಗುಳಿವರೆಗಿನ ರಸ್ತೆ ಹಲವಾರು ವರ್ಷಗಳ ಕಾಲ ಸಂಪೂರ್ಣ ಕೆಟ್ಟುಹೋಗಿತ್ತು. ಸಚಿವ ರಮಾನಾಥ ರೈ ಅವರ ಮೂಲಕ ಬಿಡುಗಡೆಯಾದ 4.20 ಕೋ. ರೂ. ಅನುದಾನದಲ್ಲಿ ಈ ರಸ್ತೆ ಮರುಡಾಮರುಗೊಂಡು ಇನ್ನೂ ಒಂದು ವರ್ಷ ಪೂರ್ತಿಯಾಗಿಲ್ಲ. ಕಳೆದ ಬಾರಿಯ ಮಳೆಗಾಲದಲ್ಲೇ ರಸ್ತೆಯ ಸ್ಥಿತಿ ಕಂಗಾಲಾಗಿತ್ತು. 

ಬೃಹತ್‌ ವಾಹನಗಳ ಸಂಚಾರದಿಂದ ಅಡ್ಡಿ 
ಭಾರೀ ಲಾರಿಗಳ ಸಂಚಾರದಿಂದ ರಸ್ತೆ ಸ್ಥಿತಿ ಶೋಚನೀಯವಾಗಿದೆ. ಅಲ್ಲಲ್ಲಿ ಹೊಂಡಗಳು ಎದ್ದಿವೆ. ರಸ್ತೆ ಬಿರುಕುಬಿಟ್ಟಿದೆ. ರಸ್ತೆ ಬದಿಯಲ್ಲಿ ಕಾಮಗಾರಿ ಕಳಪೆಯಾಗಿರುವ ಶಂಕೆಯೂ ಇದೆ. ಈ ಮಧ್ಯೆ ಬೃಹತ್‌ ವಾಹನಗಳ ಸಂಚಾರದಿಂದ ಅಡ್ಡಿ, ಆತಂಕಗಳು ಎದುರಾಗಿವೆ. ಭಾರೀ ತಿರುವುಗಳಲ್ಲಿ ಮಿತಿಮೀರಿದ ವೇಗದಿಂದ ಸಂಚರಿಸುತ್ತಿರುವ ಈ ಲಾರಿಗಳು ಅಪಾಯವನ್ನು ತಂದೊಡ್ಡುವ ಭೀತಿಯಿದೆ. ಪೇಟೆಯ ವ್ಯಾಪಾರಿಗಳು ಧೂಳು ತಿಂದೇ ಬದುಕುವ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು, ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಈ ಹಳ್ಳಿ ರಸ್ತೆಗಳು ಭಾರೀ ಲಾರಿಗಳ ತೂಕವನ್ನು ತಡೆಯುವ ಶಕ್ತಿ ಹೊಂದಿಲ್ಲ. ರಸ್ತೆ ಅಗಲವೂ ಇಲ್ಲ. ಕೆಲವು ಕಡೆ ಇನ್ನೂ ಏಕಮುಖ ರಸ್ತೆಯಂತಿವೆ. ಒಂದೊಂದು ಕಡೆ ಎರಡು ಲಾರಿಗಳು ಮುಖಾಮುಖೀಯಾದರೆ ಹಿಮ್ಮುಖವಾಗಿ ಚಲಿಸಿ, ಮತ್ತೂಂದು ವಾಹನಕ್ಕೆ ದಾರಿ ಮಾಡಿ ಕೊಡಬೇಕಾಗುತ್ತದೆ. ಒಂದೆಡೆ ರಸ್ತೆ ಪೂರ್ಣವಾಗಿ ಹದಗೆಡುತ್ತಿರುವುದು, ಇನ್ನೊಂದೆಡೆ ಅಪಘಾತದ ಭಯ ಉಂಟಾಗಿದೆ. ಮಾತ್ರವಲ್ಲದೆ ಕಪ್ಪು ಹೊಗೆಯನ್ನು ದಟ್ಟವಾಗಿ ಬಿಡುತ್ತಿರುವ ಈ ಲಾರಿಗಳು ಹಳ್ಳಿಯ ವಾತಾವರಣವನ್ನು ವಿಷಮಯ ಮಾಡುತ್ತಿವೆ ಎಂದೂ ನಾಗರಿಕರು ಆಕ್ಷೇಪಿಸುತ್ತಿದ್ದಾರೆ.

– ಉದಯಶಂಕರ್‌ ನೀರ್ಪಾಜೆ

ವಾಮಂಜೂರು: ಆರ್ಟ್‌ನಿಂದ ಹಾರ್ಟ್‌ಗೆದ್ದ ವಿಶೇಷ ಮಕ್ಕಳು

Team Udayavani, Feb 7, 2017, 2:49 PM IST

ಬಜಪೆ: ಉಭಯ ಜಿಲ್ಲೆಯಲ್ಲಿ ಅಪರೂಪವೆನಿಸಿದ ವಿಶೇಷ ಮಕ್ಕಳಿಗಾಗಿಯೇ ನಿರ್ಮಾಣಗೊಂಡ ಆರ್ಟ್‌ ಗ್ಯಾಲರಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಘಟಕ ಸಂಸ್ಥೆಯಾದ ವಾಮಂಜೂರಿನ ಎಸ್‌.ಡಿ.ಎಂ  ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿದೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶದಲ್ಲಿ ನಡೆಯುವ ಈ ಸಂಸ್ಥೆಯು ವಿಶೇಷ ಮಕ್ಕಳ ಶಿಕ್ಷಣದತ್ತ ಗಮನಹರಿಸಿದೆ. ಈ ಆರ್ಟ್‌ ಗ್ಯಾಲರಿ ಮೂಲಕ ಹಲವಾರು ಪ್ರಶಸ್ತಿ ವಿಜೇತರನ್ನು ಹುಟ್ಟು ಹಾಕಲಾಗಿದೆ.

ಶಾಲೆಯಲ್ಲಿ ಸುಮಾರು 600 ಮಕ್ಕಳಿದ್ದಾರೆ. ಅದರಲ್ಲಿ ಮೂರನೇ ಒಂದು ಪಾಲು ವಿಶೇಷ ಮಕ್ಕಳು.ಅವರು ಸಾಮಾನ್ಯ ಮಕ್ಕಳೊಂದಿಗೆ ಶಿಕ್ಷಣ ಪಡೆಯುವುದು ಇಲ್ಲಿನ ವಿಶೇಷತೆ. ಈಗ ಸುಮಾರು 20ರಿಂದ 25 ವಿಶೇಷ ಮಕ್ಕಳು ಚಿತ್ರಕಲೆಯತ್ತ ಮುಖ ಮಾಡಿದ್ದಾರೆ. ಇದರಲ್ಲಿ ಶ್ರವಣದೋಷ ಹಾಗೂ ದೈಹಿಕ ನ್ಯೂನತೆಯುಳ್ಳ ಮಕ್ಕಳು ಹೆಚ್ಚು. ಲಯನ್ಸ್‌ ಕ್ಲಬ್‌ ಕೊಡಿಯಾಲ್‌ ಬೈಲ್‌ನ ಪ್ರದೀಪ್‌ ಆಳ್ವ ಅವರು ಆಸಕ್ತಿ ವಹಿಸಿ ಈ ಆರ್ಟ್‌ ಗ್ಯಾಲರಿಯನ್ನು ಪುನರ್ ನಿರ್ಮಿಸುತ್ತಿದ್ದು, ಸುಮಾರು 100 ಕಲಾಕೃತಿಗಳಿಗೆ ಸ್ಥಳವಿದೆ. 

ಮಾರಾಟವೂ ಆರಂಭ
ಈಗಾಗಲೇ ವಿಶೇಷ ಮಕ್ಕಳು ರಚನೆ ಮಾಡಿದ 100ರಿಂದ 150 ಕಲಾಕೃತಿಗಳು ಮಾರಾಟವಾಗಿವೆ.ಜಿಲ್ಲಾ ಕೋರ್ಟ್‌, ನಿಟ್ಟೆ ಸಂಸ್ಥೆಗಳಲ್ಲಿ,ಆಳ್ವಾಸ್‌ನ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಂಡು ಮಾರಾಟವಾಗಿದೆ. ಇದರಿಂದ ಬರುವ ಆದಾಯ ಆಯಾ ಮಕ್ಕಳಿಗೆ ಹೋಗುತ್ತದೆ. ವಿಶೇಷ ಮಕ್ಕಳಿಗೆ ಅವಕಾಶ ಕೊಡಬೇಕು. ಮಕ್ಕಳ ನ್ಯೂನತೆಯನ್ನು ಹೋಗಲಾಡಿಸಲು ಈ ಪ್ರತಿಭೆ ಅವರಿಗೆ ಅಧಾರ. ಜೀವನಕ್ಕೆ ಆಸಕ್ತಿಯನ್ನು ಚಿತ್ರಕಲೆ ತುಂಬಿಸಬಲ್ಲದು. ಈ ಮಕ್ಕಳ ಕಲಾಕೃತಿಗಳನ್ನು ಖರೀದಿಸುವ ಮೂಲಕ ಅವರ ಪ್ರಯತ್ನವನ್ನು ಹುರಿದುಂಬಿಸಬೇಕು ಎನ್ನುತ್ತಾರೆ ಶಾಲೆಯ ಆಡಳಿತಾಧಿಕಾರಿ ಗಣೇಶ್‌ ಭಟ್‌.

ಈ ಅವಕಾಶ ನನಗೆ ಜೀವನದಲ್ಲಿ ಹೊಸ ಬೆಳಕು ನೀಡಿದೆ. ಇತರರಿಗೂ ಇದು ಸ್ಫೂರ್ತಿ ತಂದಿದೆ ಎನ್ನುತ್ತಾರೆ ಅಂಗವಿಕಲ ಕ್ಷೇತ್ರದ ರಾಜ್ಯಪ್ರಶಸ್ತಿ ವಿಜೇತೆ ವಿದ್ಯಾರ್ಥಿನಿ ಸುಧಾರತ್ನ. ವಿಶೇಷ ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಯನ್ನು ನೋಡಿ ಸುಲಭ ವಿಧಾನದಲ್ಲಿ ಚಿತ್ರಕಲೆಯ ಬಗ್ಗೆ ಹೇಳಿಕೊಡಲಾಗುತ್ತದೆ. ಕಲಿಸಲು ಶ್ರಮ, ಸಹನೆ, ತಾಳ್ಮೆ ಜತೆ ಪ್ರೀತಿಯಿಂದ ಕಲಿಸಬೇಕಾಗಿದೆ ಎಂದು ಹೇಳುತತ್ತಾರೆ ಕಲಾಶಿಕ್ಷಕಿ ಶಾಲಿನಿ.

ಬೆಳಗಿನ ವಾಯು ವಿಹಾರ; ಜಾಗರೂಕತೆಯೇ ಸುರಕ್ಷೆ

Team Udayavani, Feb 7, 2017, 2:45 PM IST