ಚುಂಬಕ ಶಕ್ತಿಯ ನೃತ್ಯ ಸಮರ್ಪಣ್‌

Team Udayavani, Feb 8, 2019, 12:30 AM IST

ಮಂಗಳೂರಿನ ನೃತ್ಯಾಂಗನ್‌ (ರಿ.) ಆಶ್ರಯದಲ್ಲಿ ಈ ಬಾರಿಯ “ಸಮರ್ಪಣ್‌’ ನೃತ್ಯ ಕಾರ್ಯಕ್ರಮ ಜ.19 ಮತ್ತು 20 ರಂದು ಜರಗಿತು. ಪ್ರಥಮ ದಿನ ನಾಂದಿ ಕಾರ್ಯಕ್ರಮವು ನೃತ್ಯ ಶಿಕ್ಷಕಿ ವಿ. ಸುಮಂಗಲಾ ರತ್ನಾಕರ್‌ರವರ ನಾಟ್ಯಾರಾಧನಾ(ರಿ.) ಸಂಸ್ಥೆಯ ವಿದ್ಯಾರ್ಥಿಗಳಾದ ಅನು ಹಾಗೂ ಭವ ಸಂಕಮಾರ್‌ ಎಂಬ ಅವಳಿ ಹೆಣ್ಮಕ್ಕಳ ನೃತ್ಯ ಪ್ರದರ್ಶನದೊಂದಿಗೆ ಪ್ರಾರಂಭಗೊಂಡಿತು. ಆ ದಿನದ 2ನೇ ನೃತ್ಯ ಬೆಂಗಳೂರಿನ ವಿ. ಸರಿತಾ ಮಿಶ್ರಾರವರ ಒಡಿಸ್ಸಿ ನೃತ್ಯವಾಗಿತ್ತು. ಮಂಗಳಾಚರಣೆ ಪಂಚವಟಿಯ ಶೂರ್ಪನಖಾ ಹಾಗೂ ಮಹಾಕಾಳಿ ಎಂಬ ನೃತ್ಯ ಪ್ರಸ್ತುತಿಗಳು ಲಾಲಿತ್ಯಪೂರ್ಣ ನೃತ್ಯ, ಲಾಸ್ಯಭರಿತ ಭಂಗಿಗಳು ಹಾಗೂ ಮನೋಜ್ಞ ಅಭಿನಯಗಳಿಂದ ರಂಜಿಸಿದವು. ಉತ್ತಮ ಹಿನ್ನೆಲೆ ಸಂಗೀತವೂ ನೃತ್ಯಕ್ಕೆ ಪೂರಕವಾಗಿತ್ತು. ಆ ದಿನದ ಪ್ರಧಾನ ಕಾರ್ಯಕ್ರಮವಾಗಿ ಅಮೆರಿದ ಡಾ| ಜಾನಕಿ ರಂಗರಾಜನ್‌ರವರ ಪರಿಕಲ್ಪನೆಯ ಏಕವ್ಯಕ್ತಿ ರೂಪಕ. ಮಹಾಭಾರತದ ಪ್ರಧಾನ ಸ್ತ್ರೀ ಪಾತ್ರ ದ್ರೌಪದಿಯ ವಸ್ತ್ರಾಪಹರಣದ ವಸ್ತುವಿರುವ ಈ ರೂಪಕದಲ್ಲಿ ಚತುರ್ವಿಧ ಅಭಿನಯಗಳು (ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕ) ಸಮತೋಲನವಾಗಿ ಹೆಣೆದುಕೊಂಡಿದ್ದವು. ಈ ಪುರಾಣದ ಸನ್ನಿವೇಶದ ದ್ರೌಪದಿ ಪಾತ್ರದಲ್ಲಿ ಆಧುನಿಕ ಸ್ತ್ರೀಯ ಮನದ ಸಂದಿಗ್ಧಗಳನ್ನು ತೆರೆದಿಡುವ ಪಾಂಚಾಲಿಯಾಗಿ ಜಾನಕಿಯವರು ಹೊಸ ರೂಪದ, ಚಿಂತನೆಗೆ ಒಳಪಡಿಸುವ ಭಾಷ್ಯವನ್ನು ತಮ್ಮ ಮೂಲ ನೃತ್ಯ ಪರಂಪರೆ ಭರತನಾಟ್ಯದ ಮಾರ್ಗದಲ್ಲೇ ಜತಿಗಳು, ಸೊಲ್‌ಕಟ್ಟುಗಳು, ಸ್ವರವಿನ್ಯಾಸ ಹಾಗೂ ಆಂಗ್ಲಸಂಭಾಷಣೆಯಿಂದ ಒಂದು ಹೊಸ ಸತ್ಯದರ್ಶನವನ್ನು ಮಾಡಿಸಿ ಬೆರಗುಗೊಳಿಸಿದರು. ಬಳಸಿಕೊಂಡ ಹಿನ್ನೆಲೆ ಸಿ.ಡಿ.ಯೂ ಅಷ್ಟೇ ಸೊಗಸಾಗಿ ಭಾವಾಭಿವ್ಯಕ್ತಿಗೆ ನೆರವಾಯಿತು. 

    ಎರಡನೇ ದಿನದ ಪ್ರಾರಂಭದ ನೃತ್ಯ ಪ್ರದರ್ಶನ ವಿ. ಪ್ರವಿತಾ ಅಶೋಕ್‌ರವರ ಶಿಷ್ಯೆ ಕು. ನಿಯತಿಯವರದ್ದು. ಗುರುವಿನ ಶಿಸ್ತಿನ ಪಾಠ, ಅನುಭವಗಳನ್ನು ಚೆನ್ನಾಗಿ ಈ ಬಾಲೆ ಅಲ್ಪ ಅವಧಿಯ ಪ್ರಸ್ತುತಿಯಲ್ಲಿ ಕಾಣಿಸಿಕೊಟ್ಟದ್ದು ವಿಶೇಷವಾಗಿತ್ತು. ಆ ದಿನದ ಮುಖ್ಯ ಕಾರ್ಯಕ್ರಮ ಮುಂಬಯಿಯ ಮೀರಾ ಶ್ರೀ ನಾರಾಯಣ್‌ರವರದ್ದು. ಉತ್ತಮ ಅಂಗಸೌಷ್ಠವ, ಅಭಿನಯವನ್ನು ಪ್ರತಿಫ‌ಲಿಸುವ ಮುದ್ದಾದ ಮುಖಭಾವ, ಅಚ್ಚುಕಟ್ಟಾದ ವೇಷಭೂಷಣ ಹಾಗೂ ಅತ್ಯುತ್ತಮವಾಗಿ ನೃತ್ಯಕ್ಕೆ ಸ್ಪಂದಿಸಿದ ಹಿಮ್ಮೇಳ ಕಲಾವಿದರ ಪೋಷಣೆಗಳು ಈ ಕಾರ್ಯಕ್ರಮ ಉತ್ತುಂಗಕ್ಕೇರಲು ಸಾಧ್ಯವಾಗಿಸಿದವು. ಇದರೊಂದಿಗೆ ನೃತ್ಯಾಂಗನೆಯ ಲಯದ ಬಿಗುತನ, ಅಡವುಗಳ ವಿನ್ಯಾಸದ ಸೊಗಸು, ನೃತ್ಯಬಂಧಗಳ ಆಯ್ಕೆ ಅಭಿನಯದ ಶಕ್ತಿಯೂ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟದ್ದು ಉತ್ತಮ ರಸಾನುಭೂತಿ ಒದಗಿಸಿತು. ಧ್ರುವತಾಳದ ಅಲರಿಪು, ತೋಡಿ ರಾಗದ ರೂಪಕ ತಾಳದ ವರ್ಣ, ಸಹನಾರಾಗದ ಪದಂ, ಯಾಹೀಮಾಧವ ಅಷ್ಟಪದೀ ಹಾಗೂ ತಿಲಂಗ್‌ರಾಗದ ತಿಲ್ಲಾನಗಳು ತಮ್ಮ ಮೂಲಭೂತ ಸೌಂದರ್ಯಗಳಾದ ಅಂಗಶುದ್ಧಿ, ಮನೋಧರ್ಮದ ಸಂಚಾರಿ ಅಭಿನಯ, ನಾಯಿಕಾಭಾವಗಳ ಸ್ಪುರಣಗಳ ಅಚ್ಚುಕಟ್ಟುತನಗಳಿಂದಾಗಿ ಕಂಗೊಳಿಸಿದವು. ಹಿನ್ನೆಲೆ ಸಂಗೀತದ ಕಲಾಮಂಡಲಂನ ಮೇರುಕಲಾವಿದರ ಸಮ್ಮೇಳನವು ನೃತ್ಯದ ಪೂರ್ಣ ಯಶಸ್ಸಿಗೆ ಕಾರಣವಾಗಿ ಒಂದು ಮಾದರಿ ಹಿಮ್ಮೇಳವೆನಿಸಿದ್ದು ಹೌದು. 

 ವಿ. ಪ್ರತಿಭಾ ಎಂ. ಎಲ್‌. ಸಾಮಗ 


ಈ ವಿಭಾಗದಿಂದ ಇನ್ನಷ್ಟು

  • ಯಕ್ಷರಂಗದ ಸವ್ಯಸಾಚಿ ಸುಜನಾ ಸುಳ್ಯ ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.17ರಂದು ಮಂಗಳೂರಿನ ರಮಣಶ್ರೀ ಕನ್ವೆನ್‌ಷನಲ್‌ ಹಾಲ್‌ನಲ್ಲಿ...

  • ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಸ್ವರ ಸಿಂಚನ ಸಂಗೀತ ಶಾಲಾ ವಿಧ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತೋತ್ಸವ ಸವಿತಾ ಕೋಡಂದೂರು ನಿರ್ದೇಶನದಲ್ಲಿ ಅಮ್ಮ ಆನಂದ...

  • ಚಂದ್ರಹಾಸ ಹುಡುಗೋಡುರವರು ಕಠಿಣ ಪರಿಶ್ರಮದಿಂದ ವೃತ್ತಿಯಲ್ಲಿ ಯಶಸ್ಸನ್ನು ಕಂಡವರು. ಇದರ ಜೊತೆಗೆ ಅವರಲ್ಲಿ ಓರ್ವ ಕಲಾವಿದನಿಗೆ ಅಗತ್ಯವಾಗಿ ಇರಬೇಕಾದ ನಯ ವಿನಯ...

  • "ಮೃಚ್ಛಕಟಿಕಾ' ನಾಟಕ ಇಂದು ನಿನ್ನೆಯದಲ್ಲ. ನಾಲ್ಕನೇ ಶತಮಾನದಲ್ಲಿ ಶೂದ್ರಕ ಮಹಾಕವಿ ಬರೆದ ಈ ನಾಟಕ ಭಾರತದ ಎಲ್ಲಾ ಭಾಷೆಗಳಿಗೆ ಅಲ್ಲದೆ ವಿದೇಶಿ ಭಾಷೆಗಳಿಗೂ ತರ್ಜುಮೆಗೊಂಡಿದೆ....

  • ಮಂಗಳೂರಿನ "ಕದ್ರಿ ನೃತ್ಯ ವಿದ್ಯಾನಿಲಯ'ದ ವಿದ್ವಾನ್‌ ಯು.ಕೆ. ಪ್ರವೀಣ್‌ ಅವರ ಶಿಷ್ಯೆ ಕುಮಾರಿ ಮಾಹಿಕಾ ಅವರ ಭರತ ನಾಟ್ಯ ರಂಗ ಪ್ರವೇಶ ಮಂಗಳೂರಿನಲ್ಲಿ ಇತ್ತೀಚೆಗೆ...

ಹೊಸ ಸೇರ್ಪಡೆ