ಅಮ್ಮ, ಅಪ್ಪ ಮತ್ತು ಅವನು

Team Udayavani, Mar 6, 2019, 12:30 AM IST

ನಲವತ್ತೂಂದರ ತಾಯಿ- ಹತ್ತೂಂಬತ್ತರ ಮಗಳು, ಸಮಾಲೋಚನೆಗೆ ಬಂದಿದ್ದರು. ಮಗಳಿಗೆ ನಿದ್ದೆ ಬರುತ್ತಿಲ್ಲ, ಸುಸ್ತು- ಚಡಪಡಿಕೆ. ಎಲ್ಲದರಲ್ಲೂ ನಿರಾಸಕ್ತಿ. ಚೆನ್ನಾಗಿದ್ದವಳು, ಇದ್ದಕ್ಕಿದ್ದಂತೆ ಸೊರಗಿ ಹೋಗಿದ್ದಳು. ಕುಟುಂಬದ ವೈದ್ಯರು ಮಾಡಿಸಿದ್ದ ರಕ್ತ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಕೌನ್ಸೆಲಿಂಗ್‌ ಮಾಡಿಸಿದ ಮೇಲೆ ಮಾತ್ರೆಗಳನ್ನು ಬರೆದುಕೊಡುವುದಾಗಿ ಹೇಳಿ, ವೈದ್ಯರು ತಕ್ಷಣ ನನ್ನ ಬಳಿ ಕಳಿಸಿದ್ದರು.

ಆರು ವರ್ಷಗಳ ಹಿಂದೆ ತಂದೆ ನಿಧನ ಹೊಂದಿದ್ದರು. ತಂದೆಯ ತಾಯಿ, ಸತ್ತು ಮೂರು ತಿಂಗಳಾಗಿತ್ತು. ಇವರಿಬ್ಬರ ಸಾವು ಹುಡುಗಿಯ ಮೇಲೆ ಆಘಾತವನ್ನು ಉಂಟುಮಾಡಿದ್ದರೂ, ಬೇರಾವುದೋ ವಿಚಾರ ಅವಳನ್ನು ಕೊರೆಯುತ್ತಿತ್ತು. ತಾಯಿಯ ಬಗ್ಗೆ ವಿಚಾರಿಸಿದೆ. ಕಣ್ಣುಗಳು ಕೊಳವಾದುವು.  

ಹುಡುಗಿ ಹೇಳಿದಳು; “ಅಂದು, ಶಾಲೆಯಲ್ಲೇ ಋತುಚಕ್ರ ಶುರುವಾಯಿತು. ಮೊಟ್ಟಮೊದಲ ಸಲವಾದ್ದರಿಂದ ಕಳವಳವಾಗಿ, ರಜೆ ಕೇಳಿಕೊಂಡು ಮನೆಗೆ ಬಂದೆ. ಮುಂಬಾಗಿಲು ಹಾಕಲು ಅಮ್ಮ ಮರೆತಿರಬೇಕು. ಸೀದಾ ರೂಮಿಗೆ ಹೋದೆ. ಶಾಕ್‌ ಆಯಿತು. ಹೆಂಡತಿ ಸತ್ತ ಒಡನೆಯೇ ಗಂಡ ಬೇರೆ ಮದುವೆ ಮಾಡಿಕೊಳ್ಳುವುದನ್ನು ಕೇಳಿದ್ದೆ. ಆದರೆ, ಗಂಡ ಸತ್ತ ಆರು ತಿಂಗಳಲ್ಲಿ ಬೇರೆ ಗಂಡಸಿನ ತೋಳುಗಳಲ್ಲಿ ಹೆಣ್ಣು ಬಂಧಿಯಾಗಿದ್ದನ್ನು ಕೇಳಿರಲಿಲ್ಲ. ಅಮ್ಮನನ್ನು ಆ ರೀತಿ ನೋಡಿದೆ. ಅಷ್ಟು ಒಳ್ಳೆಯ ಅಪ್ಪನನ್ನು ಇಷ್ಟು ಬೇಗ ಇವಳು ಮರೆತಳೇ?’ ಎಂಬುದು ಅವಳ ಪ್ರಶ್ನೆಯಾಗಿತ್ತು.

ತಾಯಿಯ ಮೇಲೆ ಅಸಹ್ಯ, ಆ ಗಂಡಸಿನ ಮೇಲೆ ರೋಷ ಮತ್ತು ತಂದೆಯ ನಿಧನಕ್ಕೆ ದೇವರ ಮೇಲೆ ಸಿಟ್ಟು ಒಟ್ಟಿಗೇ ಬಂದಿದೆ. ಅಜ್ಜಿಯ ಮನೆಗೆ ಹೊರಟುಹೋದವಳು, ಅಜ್ಜಿ ಸತ್ತ ಮೇಲೆ ಈಗಲೇ ವಾಪಸ್ಸು ಮನೆಗೆ ಬಂದಿರುವುದು. ಈ ಮನೋಕ್ಲೇಶೆಯನ್ನು ಅಂದು ಅಜ್ಜಿ ನಿಭಾಯಿಸಿದ್ದರು. ಈಗ ಈ ಮನೆಯಲ್ಲಿ ಹೇಗೆ ಇರಬೇಕೆಂಬ ಚಿಂತೆಯಲ್ಲಿ, ಅವಳಿಗೆ ದೈಹಿಕ ಅನಾರೋಗ್ಯ ಕಾಣಿಸಿಕೊಂಡಿದೆ.  

ತಾಯಿ ಬೇರೆಯವರನ್ನು ಒಪ್ಪಿಕೊಳ್ಳುವುದು ಅಸಹಜ/ ತಪ್ಪು ಎನಿಸಿದ್ದರೂ, ಒಪ್ಪಿಕೊಂಡ ವೇಗ, ಮಗಳಿಗೆ ಆಘಾತ ಮೂಡಿಸಿದೆ. ಮುಂಚೆಯೇ ಇವರಿಬ್ಬರ ನಡುವೆ ಸಂಬಂಧವಿದ್ದು, ತಂದೆಗೆ ಅದರಿಂದಲೇ ಹೃದಯಾಘಾತವಾಗಿತ್ತೇ ಎಂಬ ಸಂಶಯವೂ ಈಕೆಗೆ ಕಾಡತೊಡಗಿದೆ.

ತಾಯಿ- ಮಗಳ ಸಂಧಾನಕ್ಕೆ- ಸಮಾಧಾನಕ್ಕೆ ಬಹಳ ನಿಗಾ ವಹಿಸಿದೆ. ತಂದೆ ಹೃದಯಾಘಾತದಿಂದ ಸತ್ತದ್ದಲ್ಲ, ಅವರಿಗ್ಗೆ ಎಚ್‌ಐವಿ ಪಾಸಿಟಿವ್‌ ಇದ್ದುದ್ದನ್ನು ಮಗಳಿಗೆ ತಾಯಿ ಹೇಳಿಲ್ಲ. ತಾಯಿಗೆ ಸ್ನೇಹಿತ ಸಿಕ್ಕಿದ್ದು ತಂದೆ ತೀರಿಕೊಂಡ ಮೇಲೆಯೇ. ಮುಂಚಿನದ್ದಲ್ಲ. ಇವೆಲ್ಲಾ ಅಜ್ಜಿಗೆ ಮಾತ್ರ ಗೊತ್ತು. ಅಜ್ಜಿಯ ಸಾಕ್ಷ್ಯ ಈಗಿಲ್ಲ.  ಸಮಾಜಿಕ ಸ್ವಾಸ್ಥ್ಯಕ್ಕೆ  ಕುಟುಂಬವೇ ಮೂಲಧಾತು. ಕೌಟುಂಬಿಕ ಸ್ವಾಸ್ಥ್ಯಕ್ಕೆ ತ್ಯಾಗ ಮತ್ತು ತಾಳ್ಮೆ ಮುಖ್ಯ. ಮಗಳಿಗೆ ನೋವಾಗಬಾರದೆಂದು ತಾಯಿ ಪರ ಗಂಡಸಿನ ಗೆಳೆತನವನ್ನು ಆಗಲೇ ಮೊಟಕುಗೊಳಿಸಿದ್ದರಂತೆ. ಸತ್ಯ ತಿಳಿದು ಮಗಳಿಗೆ ತಾಯಿಯ ದುಃಖ ಅರ್ಥವಾಯಿತು. ಬದುಕಿನಲ್ಲಿ ಸಮಸ್ಯೆಗಳು ಬೆಟ್ಟದ ಮೇಲಿನ ಮಂಜಿನಂತೆ ಕರಗಿಹೋಗುತ್ತವೆ. ವೈಯಕ್ತಿಕ ವಿಚಾರಗಳಿಗೆ ಬೆಲೆ ಕೊಡುವುದನ್ನು ಮಗಳು ಅರಿತಿದ್ದಾಳೆ. ಚಿಕಿತ್ಸೆ ಮುಂದುವರಿದಿದೆ.

ಶುಭಾ ಮಧುಸೂದನ್‌, ಮನೋ ಚಿಕಿತ್ಸಾ ವಿಜ್ಞಾನಿ

https://beta.udayavani.com/supplements/women/babys-bath

ಈ ವಿಭಾಗದಿಂದ ಇನ್ನಷ್ಟು

  • ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ...

  • ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಬೇಡಪ್ಪಾ ಅನ್ನಿಸುತ್ತದೆ. ಹಾಗಂತ ಒಳಗೇ ಕೂರಲಾದೀತೆ? ಬಿಸಿಲಲ್ಲಿ ತಿರುಗಾಡುವುದು ಅನಿವಾರ್ಯವಾದಾಗ ಮೈ ಕಾಂತಿಯ...

  • ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು...

  • ಹಬ್ಬಹರಿದಿನಗಳಂದು ಸರ ಪಟಾಕಿ ಹಚ್ಚಿ ಡಮ್ಮೆಂದು ಸದ್ದು ಮಾಡಿ ಸಂಭ್ರಮಿಸುವುದು ಸಾಮಾನ್ಯ. ಸದ್ದು ಮಾಡದ "ಸರ' ಪಟಾಕಿ ಹಚ್ಚಿ ಸಂಭ್ರಮಿಸುವ ದಿನವನ್ನು ಎಲ್ಲಾದರೂ...

  • ಚಳಿಗಾಲ ಮುಗಿದು ಬೇಸಿಗೆ ಕಣ್ಬಿಟ್ಟಿದೆ. ಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲನ್ನು ಬಳಸಿಕೊಂಡೇ, ಮುಂಬರುವ ಮಳೆಗಾಲದ ತಯಾರಿ ಕೂಡ ಶುರುವಾಗಿದೆ....

ಹೊಸ ಸೇರ್ಪಡೆ