ಹಲೋ, ಯಾರು ಮಾತಾಡ್ತಿರೋದು!

Team Udayavani, Feb 8, 2019, 12:30 AM IST

ಈಗೀಗ ಮಕ್ಕಳಿಗೆ ಶಾಲಾರಂಭವಾಗಿ ಹೆಚ್ಚು-ಕಡಿಮೆ ಒಂದು ತಿಂಗಳಷ್ಟೇ ಸರಾಗವಾಗಿ ಉಸಿರಾಡೋಕೆ ಪುರುಸೊತ್ತು. ಮತ್ತೆ ಪರೀಕ್ಷಾ ಭೀತಿ ಶುರುವಾಗಿ ಬಿಡುತ್ತದೆ. ಪ್ರತೀ ತಿಂಗಳು ಈಗ ಹೊಸ ಮಾದರಿಯ ಪರೀಕ್ಷಾ ಘಟಕಗಳು. ನಮಗೆಲ್ಲ ಅರ್ಧವಾರ್ಷಿಕ ಪರೀಕ್ಷೆ ಮಾತ್ರ ನೆಪಕ್ಕೆ. ದೊಡ್ಡ ಪರೀಕ್ಷೆಯೊಂದೇ ನಿಜವಾದ ಪರೀಕ್ಷೆ. ಆದರೆ, ಇವತ್ತಿನ ಪರೀಕ್ಷೆಗಳು ಕಡ್ಡಾಯ ಆದ ಕಾರಣ, ಮಕ್ಕಳಿಗೆ ಒಂದು ರೀತಿಯಲ್ಲಿ ಸುಲಭವೂ ಮತ್ತೂಂದು ವಿಧದಲ್ಲಿ ಒತ್ತಡವೂ ಇರುತ್ತದೆ. ಕಲಿಕೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಇದು ಪರಿಣಾಮಕಾರಿಯೇ. ಆದರೆ, ಪರೀಕ್ಷಾ ಓದು ಇಷ್ಟವಿಲ್ಲದ ಮಕ್ಕಳಿಗೆ ಇದೊಂದು ಹೊರೆಯೇ. ಇವತ್ತು ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನ ಗುರುತಿಸಲು ಅನೇಕ ಪ್ರಯೋಗಶೀಲತೆಗಳು ಬರುತ್ತಿದ್ದರೂ ಈಗಿನ ಮಕ್ಕಳಿಗೆ ಹೊರಗಿನ ಆಕರ್ಷಣೆಗಳು ಅದಕ್ಕಿಂತ ದುಪ್ಪಟ್ಟು ಇವೆ.

ಮೊದಲೆಲ್ಲ ಟಿ.ವಿ. ಇರಲಿಲ್ಲ. ಇದ್ದರೂ ವಾರಕ್ಕೊಮ್ಮೆ ಮಾತ್ರ ಅದರ ದರುಶನ ಪ್ರಾಪ್ತಿ. ಒಂದು ಸಿನೆಮಾ ನೋಡಲು ಸಿಕ್ಕರೆ ಅದುವೇ ಪರಮ ಭಾಗ್ಯ. ಆದರೆ, ಇವತ್ತು ಮನೆಯಲ್ಲಿ ಎರಡೆರಡು ಟಿ.ವಿ.ಗಳು, ಕೈಗೊಂದರಂತೆ ಮೊಬೈಲುಗಳು. ಇಂತಹ ಪರಿಸರದಲ್ಲಿ ನಮ್ಮ ಮಕ್ಕಳು ಅದೆಷ್ಟು ತದೇಕಚಿತ್ತದಿಂದ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ? ನ‌ಮಗೆ ಓದಿ ಬಿಡುವಾದಾಗ ಒಂದಷ್ಟು ಆಟ, ಮನೆಕೆಲಸ, ಕತೆ ಪುಸ್ತಕ ಓದುವುದು - ಹೀಗೆ ಮನಸ್ಸನ್ನು ಹತೋಟಿ ತಪ್ಪದಂತೆ ಸೃಜನಶೀಲವಾಗಿಡಲು ಇದು ನೆರವಾಗುತ್ತಿತ್ತು. ಈಗ ಮಕ್ಕಳು ಗಲಾಟೆ ಮಾಡದಿರಲೆಂದು ಅವರ ಕೈಗೆ ಮೊಬೈಲ್‌ ಕೊಟ್ಟು, ಟಿ.ವಿ. ರಿಮೋಟ್‌ ಕೊಟ್ಟು ನಾವೇ ಕುಳ್ಳಿರಿಸಿ ಬಿಟ್ಟಿರುತ್ತೇವೆ. ಅದರ ಪ್ರಭಾವದಿಂದಾಗಿ ಮೊಬೈಲ್‌, ಟಿ.ವಿ. ರಿಮೋಟ್‌ ಎಲ್ಲವೂ ಅವರ ಸುಪರ್ದಿಯೊಳಗೇ ಒಳಪಟ್ಟಿವೆ. ಅದಕ್ಕೆ ಅನುಗುಣವಾಗಿ ನೂರೆಂಟು ಚಾನೆಲ್‌ಗ‌ಳು, ಒಂದು ಕಾರ್ಯಕ್ರಮ ಮುಗಿಯಿತು ಅಂತ ನಾವು ಎದ್ದು ಹೋಗುವ ಹಾಗಿಲ್ಲ, ಅಷ್ಟೊತ್ತಿಗಾಗಲೇ ಮತ್ತೂಂದು ಚಾನೆಲ್‌ನಲ್ಲಿ ಮತ್ತೂಂದು ಕಾರ್ಯಕ್ರಮ ಸೆಳೆಯುತ್ತಿರುತ್ತದೆ. ಹಾಗಾಗಿ, ಯಾವ ಕಾರ್ಯಕ್ರಮಗಳನ್ನೂ ಮಿಸ್‌ ಮಾಡಿಕೊಳ್ಳಲೇ ಬಾರದು ಎಂಬ ಉದ್ದೇಶದಿಂದ ಮಕ್ಕಳು ಜಾಹೀರಾತು ಬಂದಾಗಲೆಲ್ಲ  ಬೇರೆ ಬೇರೆ ಚಾನೆಲ್‌ಗ‌ಳನ್ನು ತಿರುಗಿಸಿಕೊಂಡೇ ಇರುತ್ತವೆ. ಈಗ ಕರೆಂಟು ಕೈ ಕೊಟ್ಟರೂ ಅದಕ್ಕೆ ಪರ್ಯಾಯವಾಗಿ ಸೋಲಾರ್‌ನಂತಹ ಉಪಕರಣಗಳು ಇರುವ ಕಾರಣ ಅದರಲ್ಲಿಯೂ ಟಿ.ವಿ. ನೋಡುತ್ತವೆ. ಇವೆರಡೂ ಕೆಟ್ಟರೆ ಹಿರಿಯರು, ಕಿರಿಯರು ಎಲ್ಲರೂ 

ಕಂಗಾಲು. 
ಇತ್ತೀಚೆಗಂತೂ ಟಿ.ವಿ.ಯಾದರೂ ಪರವಾಗಿಲ್ಲ ಎಂಬ ಸ್ಥಿತಿ ತಲುಪಿದ್ದೇವೆ. ಮೊಬೈಲ್‌ನ ಕಬಂಧ ಬಾಹುಗಳಿಂದ ಬಿಡಿಸಲು ಸಾಧ್ಯವಾಗದು ಅನ್ನೋ ವಾತಾವರಣ ನಿರ್ಮಾಣ ಆಗಿದೆ. ಮೊಬೈಲ್‌ ಗುಂಡಿ ಒತ್ತುವುದರಲ್ಲಿಯೇ ನಮ್ಮ ಬಹುಪಾಲು ಸಮಯ ವ್ಯಯವಾಗುತ್ತಿದೆ ಅನ್ನುವುದೇ ಒಂದು ಚೋದ್ಯ. ಈ ಧಾವಂತದ ಬದುಕಿನಲ್ಲಿ  ಒಬ್ಬರ ಮುಖಕ್ಕೆ ಮುಖ ಕೊಟ್ಟು  ಮಾತನಾಡುವಷ್ಟು ಪುರುಸೊತ್ತೇ ಇಲ್ಲ. ಆದರೆ ಮೊಬೈಲ್‌ ಹಿಡಿದುಕೊಂಡು, ಅದೆಷ್ಟೋ ಹೊತ್ತು ಸುಖ-ದುಃಖ ವಿಚಾರಿಸಿಕೊಳ್ಳುವ ಭರದಲ್ಲಿ ಮನೆಯೊಳಗಿನವರ ದನಿಗೆ ಕಿವಿಯಾಗಲು ತಾಳ್ಮೆ ಕಳೆದುಕೊಳ್ಳುವಂತಾಗುತ್ತಿದೆ. ಅದೆಷ್ಟೋ ಬಾರಿ ಅನ್ನಿಸಿದ್ದಿದೆ, ಅರ್ಧ ಗಂಟೆ ಅನವಶ್ಯಕವಾಗಿ ಮೊಬೈಲ್‌ ಒತ್ತುವ ಸಮಯದಲ್ಲಿ ಒಂದು ಬೀಜ ಬಿತ್ತಿದರೆ, ಒಂದು ಸಸಿ ನೆಟ್ಟರೆ, ಸರ್ವ ರೀತಿಯಿಂದಲೂ ಅದೆಷ್ಟು ಲಾಭದಾಯಕವಾಗಿ ಬಿಡ‌ಬಹುದಲ್ಲವೇ ಅಂತ. ಆದರೆ ಇಂತಹ ಸದುದ್ದೇಶಗಳು ಯಾರಿಗೆ ತಾನೇ ರುಚಿಸಬಲ್ಲವು? ಇಂತಹ ಪರಿವರ್ತನೆಗಳಿಗೆ ಒಡ್ಡಿಕೊಳ್ಳಲು ಮನಸು ಸಹಕರಿಸಬೇಕು ಅಷ್ಟೆ. ನಾವೆಷ್ಟೇ ಉಪದೇಶ ಮಾಡಿದರೂ, ಮುಟ್ಟಲಾರೆ ಅಂತ ಶಪಥ ಮಾಡಿದರೂ ಅದರ ಪ್ರಲೋಭನೆಯಿಂದ ಮನಸನ್ನು ಸರಿಸುವುದು ದುಸ್ಸಾಹಸಕರ. ಮತ್ತೆ ಮೆಲ್ಲನೆ ಮೊಬೈಲ್‌ ದೀಪ ಉರಿಸುತ್ತೇವೆ, ಊಟ ಆಯ್ತಾ? ತಿಂಡಿ ಆಯ್ತಾ? ಅಂತ ಅನಗತ್ಯ ಪ್ರಶ್ನೆಗಳಿಗೆ ಉತ್ತರಿಸುತ್ತ ಸಮಯ ಪೋಲು ಮಾಡುತ್ತೇವೆ. ಆದರೆ, ಈ ಸಾಮಾಜಿಕ ಜಾಲ ತಾಣಗಳಿಂದ ಅದೆಷ್ಟೊ ಘನತರವಾದ ಸದುದ್ದೇಶದ ಕ್ರಿಯೆಗಳು ಆಗುತ್ತವೆ ಅನ್ನುವಂಥದ್ದು ಅಷ್ಟೇ ನಿಜ. ಅದನ್ನು ಸಮಯ-ಸಂದರ್ಭ ಅರಿತು ಬಳಕೆ ಮಾಡುವವರ ಕೈಯಲ್ಲಿದೆ ಅಷ್ಟೆ.  ನನಗೂ ಅಷ್ಟೆ, ಏನೂ ಕೆಲಸವಿಲ್ಲದೆ ಕುಳಿತುಕೊಂಡಾಗ ಮೊಬೈಲ್‌ ಕೈಗೆತ್ತಿಕೊಳ್ಳಲು ಮನಸ್ಸಾದಾಗ ಒಂದ್ಹತ್ತು ನಿಮಿಷ ಪ್ರತಿಜ್ಞೆ ಮಾಡಿದವರಂತೆ ಪುಸ್ತಕ ಓದಲು ಕುಳಿತು ಬಿಡುತ್ತೇನೆ ಅಥವಾ ಸುಮ್ಮಗೆ ಏನಾದರೂ ತೋಚಿದ್ದನ್ನು ಗೀಚಲು ಶುರು ಮಾಡಿಬಿಡುತ್ತೇನೆ. ಆಗ ಸಮಯದ ಸಾರ್ಥಕತೆ ನನ್ನಲ್ಲಿ ಉಂಟಾಗುತ್ತದೆ.

ಮೊನ್ನೆ ಅಚಾನಕ್‌ ಸಂಬಂಧಿಕರು ಬಂದು ಒಂದು ದಿನ ನಮ್ಮಲ್ಲಿ ತಂಗಿದ್ದರು. ಜೊತೆಯಲ್ಲಿ ಕಾಲೇಜು ಓದುವ ಅವರ ಮಗಳು ಕೂಡ ಇದ್ದಳು. ಪೇಟೆಯ ಗಜಿಬಿಜಿಯಿಂದ ರೋಸಿಹೋದ ಅವರಿಗೆ ನಮ್ಮ ಹಳ್ಳಿಯ ಪ್ರಶಾಂತ ವಾತಾವರಣ ತುಂಬ ಹಿಡಿಸಿದಂತೆ ತೋರಿತು. ಅವರ ಮಗಳು ಕೂಡ ಅಷ್ಟೆ ಎಲ್ಲ ಮರೆತು ಹೊಳೆಯಲ್ಲಿಯೇ ಆಡುತ್ತ ಬಹುಪಾಲು ಸಮಯ ಕಳೆದಳು. ಇಲ್ಲಿಯೇ ಒಂದು ವಾರ ಕಳೆಯಬೇಕೆಂಬ ಇರಾದೆಯನ್ನು ಕೂಡ ವ್ಯಕ್ತಪಡಿಸಿದ್ದರು. ಸಂಜೆ ಮನೆಗೆ ಬಂದೊಡನೇ ಸಾಕಿನ್ನು ನಾಳೆಯೇ ಹೋಗುವ ಅಂತ ರಚ್ಚೆ ಹಿಡಿಯತೊಡಗಿದಳು. ನಮಗೂ ಬೇಸರವಾಗಿ ಯಾಕೆ ಅವಳಿಗೆ ಕಿರಿಕಿರಿಯಾಯಿತು ಅಂತ ಚಿಂತೆ ಹಚ್ಚಿಕೊಂಡರೆ ಅವಳ ಅಮ್ಮನೇ ಮೆಲ್ಲಗೆ ನನ್ನ ಬಳಿ ಬಂದು, “ಅವಳಿಗೆ ಇಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲ. ಅದೊಂದೇ ಸಮಸ್ಯೆ’ ಅಂತ ಅರುಹಿದಾಗ ನಿಜಕ್ಕೂ ಬೆಚ್ಚಿ ಬೀಳುವ ಸರದಿ ನನ್ನದಾಯಿತು. ಮೊಬೈಲ್‌ ಎಂಬ ಅಂಗೈಯ ಸಣ್ಣ ಹಿಡಿಕೆ ನಮ್ಮನ್ನು ಅಷ್ಟೊಂದು ಆಳುತ್ತಿದೆಯಾ?

ಈಗೀಗ ಅಮ್ಮಂದಿರಲ್ಲೇ ವಾಟ್ಸಾಪ್‌ ಗ್ರೂಪ್‌ಗ್ಳ ಒಳ ಹೊಕ್ಕು ಚರ್ಚಿಸುವ ವಿಷಯ ಒಂದೇ, ಮಕ್ಕಳು ಓದುತ್ತಿಲ್ಲ, ಮೊಬೈಲ್‌ನಲ್ಲಿ ಆಡಿಕೊಂಡೇ ಕಾಲ ಕಳೆಯುತ್ತಾರೆ. ಆವತ್ತು ಹೊರಗೆ ಆಡುತ್ತಿರುವ ಮಕ್ಕಳನ್ನು ಗದರಿಸಿ ಒಳಕ್ಕೆ ಓದಲು ಕುಳ್ಳಿರಿ ಸುತ್ತಿದ್ದೆವು. ಈಗ ಮೈದಾನದಲ್ಲಿ ದ್ದರೂ ಪರವಾಗಿಲ್ಲ, ದೇಹ ಮನಸು ಸ್ವಸ್ಥವಾಗಿರುತ್ತೆ ಅನ್ನೋ ಗಹನವಾದ ತಾರ್ಕಿಕ ಸತ್ಯವನ್ನು ಮನಗಂಡ ಂಥ‌ವರಾ ಗಿದ್ದೇವೆ. “ಈಗ ಹೋಗು, ಹೊರಗೆ ಆಡಿಕೋ’ ಅಂತ ದಬ್ಬಿದರೂ ಮೊಬೈಲ್‌ ಹಿಡಿದುಕೊಂಡೇ ಹೋಗುವಂಥ ಪರಿಸ್ಥಿತಿ. 

ಈ ಸಲ ಮಕ್ಕಳು ಹತ್ತನೆಯ, ಪಿಯುಸಿ ಏನು ಮಾಡೋದು ಹೀಗಾದರೆ ಅಂತ ಅಮ್ಮಂದಿರೆಲ್ಲ ಚಡಪಡಿಸುತ್ತಿರುವಾಗ ಹಿಂದಿನ ನಮ್ಮ ಕತೆಗಳು ನೆನಪಿನ ಕೋಶಕ್ಕೆ ಬಂದು ಜಮಾಯಿಸುತ್ತಿರುತ್ತವೆ. ಮಕ್ಕಳಿಗೆ ಅವನ್ನೆಲ್ಲ ಹೇಳಿದರೆ ದಿನನಿತ್ಯ ಅದೇ ಗೊಡ್ಡು ಪುರಾಣ ಅಂತ ಮುಖ ಸಿಂಡರಿಸಿ ಕುಳಿತು ಕೊಳ್ಳುತ್ತವೆ. ಆದರೂ ಹೇಳದೇ ಇದ್ದರೆ ಸಮಾಧಾನವೇ ಇಲ್ಲ ಅಂತ ಮತ್ತೂಮ್ಮೆ ವ್ಯರ್ಥವಾಗಿ ಅರುಹತೊಡಗುತ್ತೇವೆ. ನಾವು ಎಳವೆಯಲ್ಲಿ ಓದೋಕೆ ಮನಸಾಗದೇ ಇದ್ದಾಗ ಪುಸ್ತಕದ ನಡುವೆ ಕತೆಪುಸ್ತಕ ಅಡಗಿಸಿಟ್ಟು ಓದುತ್ತಿದ್ದೆವು ಅಥವಾ ಸುಮ್ಮಗೆ ಅದೇನೋ ಗೀಚಿ ಅದು ಕವಿತೆಯಾಗಿ ಬಿಡುತ್ತಿತ್ತು. ಅಂಥ ಸೃಜನಶೀಲ ಕೆಲಸಗಳನ್ನು ನಾವು ಕದ್ದುಮುಚ್ಚಿ ಮಾಡುತ್ತಿದ್ದೆವಲ್ಲ ಅಂತ ಈಗ ನೆನೆದರೆ ಸೋಜಿಗವೆನ್ನಿಸುತ್ತದೆ. ಬದಲಾದದ್ದು ಕಾಲಮಾನವೇ?  ವಾತಾವರಣವೇ? ಪರಿಸ್ಥಿತಿಯೇ? ಅಥವಾ ನಮ್ಮೊಳಗಿನ ಮನಸ್ಥಿತಿಯೇ?

ಸ್ಮಿತಾ ಅಮೃತರಾಜ್‌

https://beta.udayavani.com/supplements/womens-supplement/slick-foot

ಈ ವಿಭಾಗದಿಂದ ಇನ್ನಷ್ಟು

  • ಮೂತ್ರಪಿಂಡ ವಿಫ‌ಲವಾದ ಸಂದರ್ಭದಲ್ಲಿ ಡಯಾಲಿಸಿಸ್‌ ಇದ್ದರೂ ಇಲ್ಲದಿದ್ದರೂ ಪಥ್ಯಾಹಾರವು ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿರುತ್ತದೆ. ಆಹಾರ ಶೈಲಿಯಲ್ಲಿ ಪರಿವರ್ತನೆ...

  • ಗರ್ಭಿಣಿಯರು ಸದಾ ಸಕಾರಾತ್ಮಕ ಚಿಂತನೆಗಳು, ಉತ್ತಮ ಅಭಿರುಚಿಗಳು, ಹವ್ಯಾಸ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಮಾನಸಿಕವಾಗಿ ಮತ್ತು ದೈಹಿಕವಾಗಿ...

  • ಬೆಳಗಾತ ಡೊಂಬಿವಲಿ ಕಡೆಯಿಂದ ಮುಂಬೈಗೆ ಹೋಗುವ ರೈಲು ಹತ್ತುವುದೇ ಕಷ್ಟ . ಎಲ್ಲಿಯಾದರೂ ಹೋಗುವುದಿದ್ದರೆ ನಿಲ್ಲುವಷ್ಟಾದರೂ ಜಾಗ ಸಿಗುವ ರೈಲು ಬರುವವರೆಗೆ ಕಾಯುತ್ತೇನೆ....

  • ಎಂಬತ್ತು-ತೊಂಬತ್ತರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದ ಮೂಲಕ ಬಾಲಿವುಡ್‌ ಸಿನಿಪ್ರಿಯರ ಆರಾಧ್ಯ ದೇವತೆಯಾಗಿದ್ದ ನಟಿ ಮಾಧುರಿ ದೀಕ್ಷಿತ್‌. ಸಾಕಷ್ಟು...

  • ಬೆಳಗಿನ ಹಾಗೂ ಸಂಜೆಯ ತಿಂಡಿಯ ತಯಾರಿ ಗೃಹಿಣಿಯರಿಗೆ ಒಂದು ದೊಡ್ಡ ಸವಾಲೇ ಆಗಿದೆ. ಕೇವಲ ತಿಂಡಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿರಿಸಲು ಅಸಾಧ್ಯವಾಗಿದೆ. ಕಾರಣ...

ಹೊಸ ಸೇರ್ಪಡೆ