ಶಿವನಂದಿ “ಯಜಮಾನ’ ಬಂದ್ರು: ಭರ್ಜರಿ ಸಾಂಗ್ ವೀಕ್ಷಿಸಿ

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಯಜಮಾನ’ ತೆರೆಗೆ ಬರುವ ಸನ್ನಾಹದಲ್ಲಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳ ಅಂತಿಮ ಹಂತದಲ್ಲಿರುವ “ಯಜಮಾನ’ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿರುವ ಚಿತ್ರತಂಡ, ಚಿತ್ರದ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಂಕ್ರಾಂತಿ ಗಿಫ್ಟ್ ನೀಡಿದೆ. ಹೌದು, ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ “ಯಜಮಾನ’ ಚಿತ್ರ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದ್ದು, ಈಗ ತಾನೆ ಬಿಡುಗಡೆಯಾದ ಚಿತ್ರದ ಮೊದಲ ಹಾಡು “ಶಿವನಂದಿ’ ಸಾಂಗ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿರುವ ಈ ಹಾಡು ಡಿ ಬಾಸ್ ಅಭಿಮಾನಿಗಳ ಪಾಲಿಗೆ ಸಿಹಿ ಸಂಭ್ರಮ ತಂದಿದೆ. ಈ ಹಾಡನ್ನು ನೋಡಿದವರು ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ಒಳ್ಳೆ ಉಡುಗೊರೆ ನೀಡಿದ್ದಾರೆ ಅಂತ ಖುಷಿ ಪಡುತ್ತಿದ್ದಾರೆ. ಅಲ್ಲದೇ ಬಹದ್ದೂರ್‌ ಚೇತನ್‌ ಸಾಹಿತ್ಯವಿರುವ ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತವಿದೆ. ಅಂದಹಾಗೆ, “ಯಜಮಾನ’ ದರ್ಶನ್‌ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್‌ನ 25ನೇ ಚಿತ್ರವಾಗಿದ್ದು, ಡಿ-ಬೀಟ್ಸ್‌ ಯೂ ಟ್ಯೂಬ್‌ ಚಾನಲ್‌ನಲ್ಲಿ “ಶಿವನಂದಿ’ ಹಾಡು ಬಿಡುಗಡೆಯಾಗಿದೆ. “ಯಜಮಾನ’ ಚಿತ್ರಕ್ಕೆ ಪಿ. ಕುಮಾರ್‌ ಮತ್ತು ವಿ. ಹರಿಕೃಷ್ಣ ಅವರ ಜಂಟಿ ನಿರ್ದೇಶನವಿದ್ದು, ಶೈಲಜಾ ನಾಗ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕ ದರ್ಶನ್‌ ಅವರಿಗೆ ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್‌ ಜೋಡಿಯಾಗಿದ್ದಾರೆ. ಅಲ್ಲದೇ ಚಿತ್ರವನ್ನು ಮುಂಬರುವ ಫೆಬ್ರವರಿ ಅಂತ್ಯಕ್ಕೆ ತೆರೆಗೆ ತರಬಹುದು ಎಂಬುದು ಚಿತ್ರತಂಡದ ಲೆಕ್ಕಾಚಾರವಾಗಿದೆ. ಚಿತ್ರದ ಭರ್ಜರಿ ಸಾಂಗ್ ವೀಕ್ಷಿಸಿ.


ಹೊಸ ಸೇರ್ಪಡೆ